ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ವಿಶ್ವ ಸ್ತನ್ಯಪಾನ ಸಪ್ತಾಹ’ ಅರಿವು ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಶನಿವಾರ ಚಾಲನೆ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದರ ಸಂಯುಕ್ತಾಶ್ರಯದಲ್ಲಿ ‘ಶಿಕ್ಷಣ ಮತ್ತು ಬೆಂಬಲದೊಂದಿಗೆ ಸ್ತನ್ಯಪಾನ ವೃದ್ಧಿಸಿ’ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಸ್ತನ್ಯಪಾನ ಸಪ್ತಾಹ ನಡೆಯಿತು.
ನಗರದ ಮಹಿಳಾ ಮತ್ತು ಮಕ್ಕಳ ವಾರ್ಡ್‍ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿದ್ದು, ಎದೆಹಾಲು ದ್ರವರೂಪದ ಅಪರಂಜಿ ಎಂದು ಬಣ್ಣಿಸಿದರು.
ಎದೆ ಹಾಲಿಗೆ ಪರ್ಯಾಯ ಯಾವುದು ಇಲ್ಲ. ಆದ್ದರಿಂದ ಎದೆಹಾಲನ್ನು ಕನಿಷ್ಠ 6 ತಿಂಗಳಾದರೂ ಕಡ್ಡಾಯವಾಗಿ ಕುಡಿಸಬೇಕು ಎಂದು ಅವರು ತಿಳಿಸಿದರು.
ಮಕ್ಕಳಿಗೆ ಎದೆಹಾಲು ಕುಡಿಸುವುದರಿಂದ ಮಕ್ಕಳ ಬುದ್ದಿಮತ್ತೆ ಹೆಚ್ಚಾಗುತ್ತದೆ. ಜೊತೆಗೆ ಸ್ವಸ್ಥ ಹಾಗೂ ಸದೃಢವಾಗಿ ಮಕ್ಕಳ ಬೆಳವಣಿಗೆಗೆ ಎದೆಹಾಲು ತನ್ನದೇ ಆದ ಪಾತ್ರ ವಹಿಸುತ್ತದೆ ಎಂದು ಅವರು ವಿವರಿಸಿದರು.
ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ ಅವರು ಮಾತನಾಡಿದ ಅವರು ಎದೆಹಾಲಿನ ಮಹತ್ವದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಅದರ ಬಗ್ಗೆ ಇರುವ ಅಪನಂಬಿಕೆಯನ್ನು ಹೋಗಲಾಡಿಸಬೇಕು ಎಂದರು.
ಎದೆಹಾಲು ಕುಡಿಸುವುದರಿಂದ ತಾಯಿಗೆ ಸಾಕಷ್ಟು ಲಾಭ ಆಗುತ್ತದೆ ಎಂದು ಅವರು ವಿವರಿಸಿದರು. ಮಗುವಿಗೆ ಶರೀರದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಈ ಕಾರ್ಯಕ್ರಮವು ಒಂದು ವಾರಕ್ಕೆ ಸೀಮಿತವಾಗದೆ ವರ್ಷಂಪ್ರತಿ ಇಂತಹ ಮುನ್ನೆಚರಿಕೆ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದರು.
ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ಡಾ.ಕುಶ್ವಂತ್ ಕೋಳಿಬೈಲು, ಡಾ.ಮೀನಾಕ್ಷಿ, ವೈದ್ಯಕೀಯ ಸಿಬ್ಬಂದಿಗಳು, ವೈದ್ಯಕೀಯ ವಿದ್ಯಾರ್ಥಿಗಳು, ಇತರರು ಇದ್ದರು. ವಾಲಿನಿ ಅವರು ಪ್ರಾರ್ಥಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post