ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಕಂಚಿನ ಪ್ರತಿಮೆಯ ಉದ್ಘಾಟನೆಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಯಿಂದ ಪವಿತ್ರ ಮೃತ್ತಿಕೆ ಸಂಗ್ರಹಣೆಗೆ ಅಕ್ಟೋಬರ್ 29 ರಂದು ಚಾಲನೆ ನೀಡಲಾಗುವುದು ಎಂದು ಅಬಕಾರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ Minister Gopalaiah ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಇಂದು ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪವಿತ್ರ ಮಣ್ಣು ಸಂಗ್ರಹಣೆ ಎಲ್ಲಾ ಗ್ರಾಮ ಪಂಚಾಯತಿಗಳ ಪವಿತ್ರ ಸ್ಥಳಗಳಲ್ಲಿ ನಡೆಯಬೇಕು. ನಿಯೋಜಿಸಿರುವ ಅಧಿಕಾರಿಗಳು ಯಾವುದೇ ಲೋಪವಿಲ್ಲದಂತೆ ಕಾರ್ಯನಿರ್ವಹಿಸಬೇಕು ಎಂದರು.
ನಾಡಪ್ರಭು ಕೆಂಪೇಗೌಡ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ನಾಡು ಕಟ್ಟಲು ನೀಡಿದ ಕೊಡುಗೆ ದೊಡ್ಡದ್ದು, ಪವಿತ್ರ ಮಣ್ಣು ಸಂಗ್ರಹಣೆಯ ಸಂದರ್ಭದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಪವಿತ್ರ ಮೃತ್ತಿಕೆ ಸಂಗ್ರಹಣೆಗೆ ಮಂಡ್ಯ ಜಿಲ್ಲೆಗೆ ಎರಡು ರಥಗಳು ಆಗಮಿಸಲಿದ್ದು, ಅಕ್ಟೋಬರ್ 29 ರಂದು ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಚಾಲನೆ ನೀಡಲಾಗುವುದು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ನವಂಬರ್ 7 ರಂದು ಸಂಗ್ರಹಿಸುವ ಪವಿತ್ರ ಮಣ್ಣಿಗೆ ಮದ್ದೂರಿನ ಸತ್ಯಾಗ್ರಹ ಸೌಧದಲ್ಲಿ ಪೂಜೆ ಸಲ್ಲಿಸಿ ಬೆಂಗಳೂರಿಗೆ ಕಳುಹಿಸಿಕೊಡಲಾಗುವುದು ಎಂದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪವಿತ್ರವಾದ ಧಾರ್ಮಿಕ ಸ್ಥಳ, ಕಲ್ಯಾಣಿ, ಪಾರಂಪರಿಕ ಮುಂತಾದ ಪ್ರಸಿದ್ಧ ಸ್ಥಳಗಳನ್ನು ಗುರುತಿಸಿ ಪವಿತ್ರ ಮೃತ್ತಿಕೆಯನ್ನು ಸಂಗ್ರಹಣಾ ಚೀಲದಲ್ಲಿ ನಿಯೋಜಿತ ಅಧಿಕಾರಿಗಳು ಸಂಗ್ರಹಿಸಿ ನೀಡಬೇಕು ಎಂದರು.
Also read: ಕನ್ನಡಿಗರ ಹೆಮ್ಮೆಯ ಕೋಟಿ ಕಂಠ ಗಾಯನಕ್ಕೆ ಉತ್ತಮ ಸ್ಪಂದನೆ: ಸಚಿವ ನಾರಾಯಣ ಗೌಡ ಸಂತಸ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಅವರು ಮಾತನಾಡಿ ಎರಡು ಅಭಿಯಾನ ರಥಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.ಜಿಲ್ಲೆಯ 233 ಗ್ರಾಮ ಪಂಚಾಯತಿಗಳಲ್ಲಿ ಅಭಿಯಾನ ರಥ ಸಂಚರಿಸುವಂತೆ ಮಾರ್ಗನಕ್ಷೆ ಸಿದ್ಧಪಡಿಸಲಾಗಿದೆ ಎಂದರು.
ಸಭೆಯಲ್ಲಿ ರೇಷ್ಮೆ,ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವರಾದ ಡಾ. ಕೆ.ಸಿ. ನಾರಾಯಣ ಗೌಡ, ಶಾಸಕ ಸಿ.ಎಸ್. ಪುಟ್ಟರಾಜು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ, ಜಿಲ್ಲಾಧಿಕಾರಿ ಡಾ.ಹೆಚ್.ಎನ್. ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ. ಡಾ.ಹೆಚ್.ಎಲ್.ನಾಗರಾಜು,ಜಿ.ಪಂ. ಸಿಇಒ ಶಾಂತಾ ಎಲ್. ಹುಲ್ಮನಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಮೂರ್ತಿ,ಆರ್.ಐಶ್ವರ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















