ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ದೇಶ, ವಿದೇಶದ ಸಾಹಿತಿಗಳು, ಕವಿಗಳು, ಬರಹಗಾರರ ಲಕ್ಷಾಂತರ ಪುಸ್ತಕ ಸಂಗ್ರಹಿಸಿದ್ದ #BookLover ಪುಸ್ತಕ ಪ್ರೇಮಿ ಅಂಕೇಗೌಡರು ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೂಲತಃ ಪಾಂಡವಪುರ #Pandavapura ತಾಲೂಕಿನ ಚಿನಕುರಳಿ ಗ್ರಾಮದವರಾದ ಅಂಕೇಗೌಡರು ಶಾಲಾ ಕಾಲೇಜು ದಿನಗಳಲ್ಲೇ ಪುಸ್ತಕ ಸಂಗ್ರಹಿಸುವ ಹವ್ಯಾಸ ಹೊಂದಿದ್ದರು. ಈ ಹವ್ಯಾಸದ ಕಾರಣದಿಂದಲೇ ಐದು ದಶಕಗಳ ಕಾಲದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರಹಿಸಿ ಪ್ರದರ್ಶಶನಕ್ಕಿಟ್ಟಿದ್ದಾರೆ.
ಅಂಕೇಗೌಡರ #AnkeGowda ಪುಸ್ತಕ ಪ್ರೇಮವನ್ನು ಗಮನಿಸಿದ ಉದ್ಯಮಿ ಹರಿಖೋಡೆ ಅವರು ಪುಸ್ತಕಗಳನ್ನು ಸಂಗ್ರಹಿಸಲು ಅಗತ್ಯವಾಗಿದ್ದ ಕಟ್ಟಡ ನಿರ್ಮಿಸಿಕೊಟ್ಟರು. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಸದಾನಂದಗೌಡರು ಗೌಡರ ಪುಸ್ತಕ ಮೇಲಿನ ಕಾಳಜಿ ಗಮನಿಸಿ ಪುಸ್ತಕಗಳ ಸಂಗ್ರಹ ಮತ್ತು ರಕ್ಷಣೆಗಾಗಿ ಸರ್ಕಾರದಿಂದ ಸಹಾಯ ಧನ ನೀಡಿದ್ದರು.
ಅಂಕೇಗೌಡರು ಬೆಳೆದು ಬಂದ ಹಾದಿ (ಕುರಿ ಕಾಯುವುದಕ್ಕೆ ನೇಮಿಸಿದ್ದರು….)
ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಅಕ್ಟೋಬರ್ 17-1949 ರಂದು ಬಡ ರೈತ ಕುಟುಂಬದಲ್ಲಿ ಅಂಕೇಗೌಡರು ಜನಿಸಿದರು. ಇವರ ತಂದೆ ಮರೀಗೌಡ, ತಾಯಿ ನಿಂಗಮ್ಮ. ಅನರಕ್ಷತೆ, ಬಡತನ ತುಂಬಿದ ಕುಟುಂಬದ ಹಿನ್ನೆಲೆ ಹೊಂದಿದ ಇವರ ಶೈಕ್ಷಣಿಕ ಹಾದಿ ತುಂಬಾ ಕಠಿಣವಾಗಿತ್ತು. ಸ್ವಗ್ರಾಮ ಚಿನಕುರಳಿಯಲ್ಲಿ 5ನೇ ತರಗತಿಯ ಓದು ಮುಗಿಯುತ್ತಿದ್ದಂತೆಯೇ ತಂದೆ ಕುರಿ ಕಾಯುವುದಕ್ಕೆ ನೇಮಿಸಿದರು. ಆದರೂ, ಓದಿನ ಆಸಕ್ತಿಯೇನೂ ಕುಂದಿರಲಿಲ್ಲ. ಇವರ ಓದಿನ ಆಸಕ್ತಿಯನ್ನು ಗಮನಿಸಿದ ಪರಮೇಶ್ವರಯ್ಯ, ಅನಂತಯ್ಯ, ಎಂಬ ಅಧ್ಯಾಪಕರು ಇವರಿಗೆ ಸಹಕಾರ ನೀಡಿದರು. ಇವರ ಸಹಾಯದಿಂದ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ನೇರವಾಗಿ ತೆಗೆದುಕೊಂಡು ಉತ್ತೀರ್ಣರಾಗಿ 10ನೇ ತರಗತಿವರೆಗಿನ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಪಡೆದರು.
ಮುಂದೆ ತೀವ್ರ ಆರ್ಥಿಕ ಮುಗ್ಗಟ್ಟು ಹಾಗೂ ಮನೆಯವರ ವಿರೋಧದ ನಡುವೆಯೂ ಇಂಟರ್‌ಮಿಡಿಯೆಟ್‌ಗಾಗಿ ಪಾಂಡವಪುರಕ್ಕೆ ಬಂದು ಒಪ್ಪೊತ್ತಿನ ಊಟದೊಂದಿಗೆ ಸ್ಕಾಲರ್‌ಶಿಪ್ ನೆರವಿನಿಂದ ಓದು ಮುಗಿಸಿದರು. ಆನಂತರ ಮತ್ತೆ ವಿದ್ಯಾಭ್ಯಾಸ ಮುಂದುವರಿ ಸಲು ಸಾಧ್ಯವಾಗಲಿಲ್ಲ.
ಯಾವುದಾದರೊಂದು ಕೆಲಸಕ್ಕೆ ಸೇರುವುದು ಅನಿವಾರ್ಯವಾಯಿತು. ಇಂಟರ್‌ಮಿಡಿಯೆಟ್ ಮುಗಿಸಿದ ನಂತರ ಇವರು ಸೇರಿದ್ದು, ಅಂದಿನ ಎಂ.ಎಸ್.ಆರ್.ಟಿ.ಸಿ. (ಮೈಸೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಅಲ್ಲಿ ಕಂಡಕ್ಟರ್ ಹುದ್ದೆಗೆ ಇಲ್ಲಿ ಕೆಲಸ ಮಾಡುತ್ತಿದ ಸಂದರ್ಭದಲ್ಲಿ ಇಂಟರ್‌ಮಿಡಿಯೆಟ್‌ನಲ್ಲಿ ಮೇಷ್ಟ್ರಾಗಿದ್ದ ಗೋಪಿನಾಥ್ ಬರ್ಕಿ ಅವರ ಮಾತುಗಳಿಂದ ಇವರು ಬದುಕು ಗಮನಾರ್ಹವಾದ ತಿರುವನ್ನು ಪಡೆಯಿತು.
ಅಂಚೆ ಮತ್ತು ತೆರಪಿನ ಶಿಕ್ಷಣ
ಮತ್ತೆ ವಿದ್ಯಾಭ್ಯಾಸದತ್ತ ಮುಖ ಮಾಡಿ 1971-1973 ರಲ್ಲಿ ಮೈಸೂರಿನ ಮಹಾರಾಜ ಸಂಜೆ ಕಾಲೇಜಿನಲ್ಲಿ ಬಿ.ಎ.ಪದವಿಯನ್ನು 1976-1977 ರಲ್ಲಿ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಎಂ.ಎ.ಪದವಿಯನ್ನು ಪಡೆದುಕೊಂಡರು. ಸಾಹಿತ್ಯದ ವಿದ್ಯಾರ್ಥಿಯಾದರೂ ಇವರು ಸೇರಿದ್ದು, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಸಾಮಾನ್ಯ ದಿನಗೂಲಿ ನೌಕರಿಗೆ ತಮ್ಮ ಸಂಬಳದ ಶೇಕಡಾ 60 ರಷ್ಟು ಭಾಗವನ್ನು ಪುಸ್ತಕ ಖರೀದಿಗೆ ಮೀಸಲಿಟ್ಟು ನಂತರ ಸ್ವಯಂ ನಿವೃತ್ತಿ ತೆಗೆದುಕೊಂಡರು. ಕಾರಣ ತಮ್ಮ ಅಪಾರ ಗ್ರಂಥ ರಾಶಿಯನ್ನು ಜೋಪಾನ ಮಾಡುವ ಸಲುವಾಗಿ.
ರಾಮಕೃಷ್ಣ ಮಿಷನ್ ಪ್ರಕಟಣೆಗಳ ಸಂಗ್ರಹ
ಅಂಕೇಗೌಡರ ಪುಸ್ತಕ ಸಂಗ್ರಹ ಆರಂಭವಾದುದ್ದು, ಇವರ ಬಿ.ಎ. ಓದುತ್ತಿದ್ದ ದಿನಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರೆಸ್‌ನಲ್ಲಿ ಉ.ಕಾ. ಸುಬ್ಬರಾಯಾಚಾರ್ ಅವರು ಅಧಿಕಾರದಲ್ಲಿದ್ದಾಗ ಬಡ ವಿದ್ಯಾರ್ಥಿಗಳಿಗಾಗಿದ್ದ ಅರ್ನ್ ಆ್ಯಂಡ್ ಲರ್ನ್ ಯೋಜನೆಯಡಿಯಲ್ಲಿ ಕೆಲಸ ಮಾಡಿ ಬಂದ 5 ರೂಪಾಯಿಯನ್ನು ರಾಮಕೃಷ್ಣ ಮಿಷನ್ ಪ್ರಕಟಣೆಯ ಸಣ್ಣ ಸಣ್ಣ ಪುಸ್ತಕಗಳನ್ನು ಕೊಳ್ಳುವ ಮೂಲಕ ಸಂಗ್ರಹವನ್ನು ಆರಂಭಿಸಿದರು. ನಿಧಾನವಾಗಿ ನಡೆದ ಈ ಕಾರ್ಯ ಅನಂತರ ಪುಸ್ತಕದಾಹವನ್ನು ತೀರಿಸಿಕೊಳ್ಳುವ ಭರದಲ್ಲಿ ಸಾಗಿತ್ತು. ಈ ಮೊದಲು ಪುಸ್ತಕ ಸಂಗ್ರಹಣೆ ಪಾಂಡವಪುರ ವಿಶ್ವೇಶ್ವರನಗರದ ನಾಲ್ಕುವರೆ ಚದರದ ಅವರ ಪುಟ್ಟ ಮನೆಯಲ್ಲಿತ್ತು. ಈ ಪುಸ್ತಕದ ರಾಶಿ ಇಡೀ ಮನೆಯನ್ನೇ ಆವರಿಸಿತ್ತು. ಅವರ ಮನೆಯನ್ನು ನೋಡುತ್ತಿದ್ದವರಿಗೆ ಅದೊಂದು ಪುಸ್ತಕದ ಮೆದೆ ಎನಿಸಿದರೆ ಅತಿಶಯೋಕ್ತಿಯಲ್ಲ.
ಉದ್ಯಮಿ ಹರಿ ಖೋಡೆ ಬೆಂಬಲ
ಪುಸ್ತಕಗಳ ಬೃಹತ್ ಸಂಗ್ರಹ ಹೊಂದಿರುವ ಅಂಕೇಗೌಡರಿಗೆ ಅವುಗಳ ರಕ್ಷಣೆ ಕೂಡು ದೊಡ್ಡ ಜವಬ್ದಾರಿಯಾಗಿತ್ತು. ದಿನದಿಂದ ದಿನಕ್ಕೆ ಹೆಚ್ಚಾದ ಈ ಸಂಗ್ರಹದ ಪುಸ್ತಕಗಳನ್ನು ರಕ್ಷಿಸಲು ಸೂಕ್ತ ವ್ಯವಸ್ಥೆ ಅನಿವಾರ್ಯವಾಗಿತು. ಆಗ ಬೆಂಗಾವಲಿಗೆ ನಿಂತವರು ಉದ್ಯಮಿ ಹರಿಖೋಡೆ.
ಆಕಸ್ಮಿಕವಾಗಿ ಅಂಕೇಗೌಡರ ಮನೆಗೆ ಭೇಟಿ ನೀಡಿದ ಹರಿಖೋಡೆ, ಇವರ ಪುಸ್ತಕ ಸಂಗ್ರಹವನ್ನು ನೋಡಿ ಬೇರೇನನ್ನು ಬಯಸದೆ ಮಾಡಿರುವ ಈ ಕೆಲಸಕ್ಕೆ ತ್ಯಾಗರೂಪವಿದೆ ಎಂದು ಹೇಳಿ ಇದರ ರಕ್ಷಣೆಗೆ ಸಹಾಯದ ಭರವಸೆ ನೀಡಿದರು. 2005 ರಲ್ಲಿ 12 ಲಕ್ಷ ರೂ. ಬೆಲೆಬಾಳುವ ನಿವೇಶನ ಒಂದನ್ನು ಖರೀದಿಸಿ ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಅಡಿಯಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಬೃಹತ್ತಾದ ಗ್ರಂಥಾಲಯವನ್ನು ವಿಶ್ವೇಶ್ವರನಗರದಲ್ಲಿ ನಿರ್ಮಿಸಿಕೊಟ್ಟರು. ಈ ಗ್ರಂಥಾಲಯವೇ ಈಗ ಅಂಕೇಗೌಡ ಪುಸ್ತಕ ಮನೆ ಎಂಬ ಹೆಸರಿನಲ್ಲಿ ಜನಾಕರ್ಷಣೆಯ ಕೇಂದ್ರಬಿಂದುವಾಯಿತು.
10 ಲಕ್ಷ ಪುಸ್ತಕಗಳ ಸಂಗ್ರಹಣೆ ಇದೆ
ಪ್ರಸ್ತುತ ಈ ಬೃಹತ್ ಗ್ರಂಥಾಲಯದಲ್ಲಿ 10 ಲಕ್ಷ ಪುಸ್ತಕಗಳ ಸಂಗ್ರಹಣೆ ಇದೆ ಪ್ರಪಂಚದ ವಿವಿಧ ಜ್ಞಾನಕ್ಷೇತ್ರಗಳ ಪುಸ್ತಕಗಳು ಇಲ್ಲಿ ಅಡಕವಾಗಿವೆ. ಇಲ್ಲಿ ಅ.ಆ.ಇ.ಈ. ಕಲಿಯುವ ಮಕ್ಕಳಿಂದ ಹಿಡಿದು 90 ವರ್ಷದವರೆಗಿನವರು ಓದುವಂತಹ ಎಲ್ಲಾ ಅಪರೂಪದ ಪುಸ್ತಕಗಳು ಸಿಗುತ್ತವೆ.
ಅಂಕೇಗೌಡ ಸಾಧನೆ ಗುರುತಿಸಿ ರಾಜ್ಯ ಸರ್ಕಾರ 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಸಾಹಿತ್ಯ ಪರಿಚಾರಕ ಪ್ರಶಸ್ತಿ ನೀಡಿ ಗೌರವಿಸಿದೆ. ಸುವರ್ಣ ಕರ್ನಾಟಕ -50 ರ ಸಂಭ್ರಮದಲ್ಲಿ ಅಪ್ರತಿಮ ರತ್ನ ಪ್ರಶಸ್ತಿ, 77ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರು 2011 ರಲ್ಲಿ ಸನ್ಮಾನಿಸಲಾಗಿದೆ. 2014 ರಲ್ಲಿ ವಿಜಯ ಕರ್ನಾಟಕ ಅಶೋಕ ಚಕ್ರದಲ್ಲಿರುವ 24 ಗೆರೆಗಳಂತೆ ರಾಜ್ಯದ ನಾನ ಕ್ಷೇತ್ರಗಳ 24 ಮಂದಿ ಹೋರಾಟಗಾರರನ್ನು ಪ್ರಸ್ತುತ ಪಡಿಸಿದ್ದು, ಅದರಲ್ಲಿ ಅಂಕೇಗೌಡರು ಒಬ್ಬರಾಗಿದ್ದರೆ.
2018 ರಲ್ಲಿ ನಡೆದ ಪಾಂಡವಪುರ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮಿನಿಸ್ಟರಿ ಆಫ್ ಕಾರ್ಪೊರೇಟ್ ಅಫೇರ್ಸ್ ಸಂಸ್ಥೆಯ 22-03-2022 ರಂದು ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ನೀಡಿ ಗೌರವಿಸಿದೆ. ಅಂಕೇಗೌಡರ ಪುಸ್ತಕ ಮನೆ ಲಿಮ್ಕಾ ದಾಖಲೆಗಳ ಪುಸ್ತಕ ಕೂಡ ಸೇರಿದೆ.
ಪುಸ್ತಕ ಸಂಗ್ರಹದ ಜೊತೆಗೆ ಇವರ ಆಸಕ್ತಿಯ ಕ್ಷೇತ್ರಗಳು ಅನೇಕ ದೇಶ ವಿದೇಶಗಳ ವೈವಿಧ್ಯಮಯ ನಾಣ್ಯಗಳು, ಅಂಚೆ ಚೀಟಿಗಳು ಶುಭಾಶಯ ಪತ್ರಗಳು, ಹಳೆಯ ಕ್ಯಾಮರಗಳು, ಭೂಪಟಗಳು, ಇತ್ಯಾದಿಗಳಿಂದ ಕೂಡಿರುವ ಸಂಗ್ರಹ ಅವರ ಹವ್ಯಾಸದ ಬಹುಮುಖತೆಯನ್ನು ಪರಿಚಯಿಸುತ್ತದೆ.
ಸಂಗ್ರಹದ ಹಿಂದಿನ ಮಹತ್ವದ ಉದ್ದೇಶ ಪ್ರಪಂಚದ ಜ್ಞಾನವನ್ನೆಲ್ಲಾ ಒಂದು ಕಡೆ ಸಂಗ್ರಹಿಸಿ ಅದನ್ನು ಸಾಮಾನ್ಯರಿಗೆ ತಲುಪವಂತೆ ಮಾಡಬೇಕು ಎಂಬುದಾಗಿದೆ. ಪುಸ್ತಕ ಓದುವ ಪ್ರೀತಿಯೊಂದಿದ್ದರೆ ಸಾಕು ಅದು ನಿಮ್ಮನ್ನು ಹಿಮಾಲಯದ ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆನ್ನುವ ಈ ಪರಿಯ ಪುಸ್ತಕ ಪ್ರೇಮಿ ಅಂಕೇಗೌಡರ ಈ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















