ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಆಹಾರ ಸುರಕ್ಷತೆ ಗುಣಮಟ್ಟ ಮತ್ತು ಸುರಕ್ಷತಾ ಕಾಯ್ದೆಯನ್ವಯ ಆಹಾರ ಕಲಬೆರೆಕೆ, ಮಿಸ್ ಬ್ರ್ಯಾಂಡ್, ಅಸುರಕ್ಷಿತ, ಗುಣಮಟ್ಟವಿಲ್ಲದ ಆಹಾರ ಮತ್ತು ಪಾನೀಯ ಸರಬರಾಜು ಮತ್ತು ಮಾರಾಟ ಶಿಕ್ಷಾರ್ಹ ಅಪರಾಧವಾಗಿದ್ದು, ಜಿಲ್ಲೆಯಲ್ಲಿ ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಡಾ. ಹೆಚ್. ಎನ್. ಗೋಪಾಲ ಕೃಷ್ಣ ಅವರು ಎಚ್ಚರಿಕೆ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಹಾರದಲ್ಲಿ ಕಲಬೆರೆಕೆ ಹಾಗೂ ತಯಾರಿಸುವ ಸಂದರ್ಭದಲ್ಲಿ ಹಾನಿಕಾರಕ ವಸ್ತುಗಳನ್ನು ಸೇರಿಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಆಹಾರ ತಯಾರಿಕೆ ಮತ್ತು ಮಾರಾಟ ಸ್ಥಳಗಳಲ್ಲಿ ಹೆಚ್ಚಿನ ಪರಿಶೀಲನೆ ನಡೆಸಿ ಎಂದರು.
ಆಹಾರ ಅಥವಾ ಬೆಲ್ಲ ತಯಾರಿಕೆಯಲ್ಲಿ ಕಲಬೆರೆಕೆ ಮಾಡುವುದರಿಂದ ಹಾಗೂ ಹಾನಿಕಾರಕ ರಾಸಾಯನಿಕ ಸೇರಿಸುವುದರಿಂದ ಬೇಡಿಕೆ ಕಡಿಮೆಯಾಗುತ್ತದೆ. ಉತ್ತಮ ಹಾಗೂ ಆರೋಗ್ಯಕರ ಬೆಲ್ಲಕ್ಕೆ ಬೇಡಿಕೆ ಹೆಚ್ಚು, ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಯ ಬಗ್ಗೆ ಜಾಗೃತಿ ಮೂಡಿಸಿ ಎಂದರು.
ಆಹಾರ ತಯಾರಿಕೆ, ಸರಬರಾಜು, ವಿತರಣೆ ಮತ್ತು ಮಾರಾಟ ಮಾಡುವ ಸಗಟು ಮತ್ತು ಚಿಲ್ಲರೆ ವ್ಯಾಪಾರದ ಆಹಾರೋದ್ಯಮಿಗಳು ತಪ್ಪದೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅಡಿ ನೊಂದಣಿ/ ಪರವಾನಗಿ ಪಡೆಯುವುದು ಕಡ್ಡಾಯ. ಜಿಲ್ಲೆಯಲ್ಲಿ ಈ ಕಾಯ್ದೆಯಡಿ ಹಾಪ್ ಕಾಮ್ಸ್, ಕೆಲವು ಮೆಡಿಕಲ್ ಸ್ಟೋರ್, ವರ್ತಕರು, ವಿವಿಧ ಆಹಾರ ಮಾರಾಟಗಾರರು ಸಹ ಬರುತ್ತಾರೆ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಿ ಎಂದರು.
ನೊಂದಣಿ ಕುರಿತಂತೆ ಅಧಿಕಾರಿಗಳು ತಾಲ್ಲೂಕು, ಗ್ರಾಮ, ಜುಲ್ಲಾ ಮಟ್ಟದಲ್ಲಿ ತಂಡಗಳನ್ನು ರಚಿಸಿಕೊಂಡು ಅಭಿಯಾನ ನಡೆಸಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸರಸ್ವತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ಜಿಲ್ಲಾ ಅಂಕಿತ ಅಧಿಕಾರಿ ಡಾ: ಬೆಟ್ಟಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ: ಎಂ.ಡಿ ಸಂಜಯ್, ಆರ್.ಸಿ.ಹೆಚ್ ಅಧಿಕಾರಿ ಡಾ: ಅನಿಲ್ ಕುಮಾರ್, ಡಿ.ಎಲ್ಒ ಡಾ: ಅಶ್ವಥ್, ಡಿ.ಎಂ.ಒ ಡಾ: ಭವಾನಿ ಶಂಕರ್, ಎಫ್. ಡ್ಬ್ಯೂ ಒ ಡಾ: ಶಶಿಧರ್, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post