ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಡ್ಯ: ಮಾನಸಿಕವಾಗಿ ನೊಂದಿದ್ದ ೨೫ ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೋಡಿದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಕೃಷ್ಣ ಎಂಬ ಯುವಕ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ, ಕೆಲಸ ಮುಗಿಸಿಕೊಂಡು ಮೊನ್ನೆ ಮನೆಗೆ ಬಂದಿದ್ದ. ನಿನ್ನೆ ರಜೆ ಹಾಕಿ ಮನೆಯಲ್ಲೇ ಇದ್ದ. ಮನೆಯವರು ಯಾರೂ ಇಲ್ಲದಿದ್ದಾಗ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಸಾಯುವ ಮುನ್ನ ಡೆತ್‌ನೋಟ್ ಬರೆದಿಟ್ಟಿರುವ ಕೃಷ್ಣ, ನನ್ನನ್ನ ಎಲ್ಲರೂ ದಯವಿಟ್ಟು ಕ್ಷಮಿಸಿ. ನಿಮಗೆಲ್ಲಾ ತುಂಬಾ ನೋವು ಕೊಟ್ಟಿದ್ದೀನಿ. ಅಮ್ಮನಿಗೆ ಒಬ್ಬ ಮಗನಾಗಿ, ಅಣ್ಣನಿಗೆ ತಮ್ಮನಾಗಿ, ಗೆಳೆಯರಿಗೆ ಒಂದೊಳ್ಳೆ ಸ್ನೇಹಿತನಾಗಿ, ನನ್ನ ಹುಡುಗಿಗೆ ಜೊತೆಗಾರನಾಗಲು, ಬಾಳಸಂಗಾತಿಯಾಗಲು ವಿಫಲನಾಗಿದ್ದೇನೆ. ಅದಕ್ಕೋಸ್ಕರ ನಾನು ನಿಮ್ಮಿಂದ ದೂರವಾಗಬೇಕೆಂದು ತೀರ್ಮಾನಿಸಿ ನನ್ನ ಇಚ್ಚೆಯಂತೆ ಮರಣ ಹೊಂದುತ್ತಿದ್ದೇನೆ ಎಂದಿದ್ದಾನೆ.
ಅಂತ್ಯಕ್ರಿಯೆಯಲ್ಲಿ ಯಶ್-ಸಿದ್ಧರಾಮ್ಯ ಭಾಗವಹಿಸಲು ಮನವಿ:
ತನ್ನ ಕೊನೆಯ ಎರಡು ಆಸೆಗಳನ್ನು ಈಡೇರಿಸಲು ಮನವಿ ಮಾಡಿಕೊಂಡಿರುವ ಕೃಷ್ಣ. ನನ್ನ ಅಂತ್ಯಕ್ರಿಯೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಣ್ಣ ಭಾಗವಹಿಸಬೇಕು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಭಾಗವಹಿಸಬೇಕು. ಏಕೆಂದರೆ ನಾನು ಇವರಿಬ್ಬರ ಅಪ್ಪಟ ಅಭಿಮಾನಿ. ದಯವಿಟ್ಟು ಅವರನ್ನು ನಾನು ಕೇಳಿಕೊಳ್ಳುತ್ತಿದ್ದೇನೆ. ನನ್ನ ಕೊನೆಯ ಆಸೆ ಈಡೇರಿಸಿ ಫ್ಲೀಸ್. ಹಾಗೆಯೇ ಇದಕ್ಕೆ ಮಾಧ್ಯಮ ಮಿತ್ರರು ಸಹ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಕೃಷ್ಣ ಬರೆದಿದ್ದಾನೆ.

ಅಭಿಮಾನಿಯ ಈ ಕೋರಿಕೆ ಈಡೇರಿಸಲು ಸಿದ್ದರಾಮಯ್ಯ ಅವರು ಇಂದು ಕೋಡಿದೊಡ್ಡಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈತನ ತಂದೆ ಚಂದ್ರು ೧೫ ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















