ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ತುಳುನಾಡಿನ ಕಂಬಳ #Kambala ಕ್ರೀಡೆಗೆ ರಾಜ್ಯ ಸರ್ಕಾರ ತನ್ನ ಬಜೆಟ್’ನಲ್ಲಿ ಕನಿಷ್ಠ 2 ಕೋಟಿ ರೂ.ಗಳ ಅನುದಾನವನ್ನು ಮೀಸಲಾಗಿಡಬೇಕು ಎಂದು ರಾಜ್ಯ ಕಂಬಳ ಅಸೋಸಿಯೇಶನ್ ಒತ್ತಾಯಿಸಿದೆ.
ನಗರದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಕಂಬಳ ಸಂಘವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿ ಕ್ರೀಡಾ ಸಂಸ್ಥೆಯಾಗಿ ಮಾನ್ಯತೆ ಪಡೆದಿದೆ ಎಂದರು.

ಕಂಬಳ ಸಂದರ್ಭದಲ್ಲಿ ಕೋಣಗಳಿಗೆ ಹಿಂಸೆ ನೀಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸುತ್ತೇವೆ. ನಮ್ಮ ಅಸೋಸಿಯೇಷನ್ ಜೊತೆಗೆ ಪೊಲೀಸ್ ಇಲಾಖೆ ಪಶುಸಂಗೋಪನಾ ಇಲಾಖೆಗಳೂ ಈ ಬಗ್ಗೆ ಕಣ್ಗಾವಲು ಇಡಲಿವೆ ಎಂದರು.
ಕಂಬಳದ ಆಯೋಜಕರು ಮತ್ತು ಭಾಗವಹಿಸುವವರು ನಿರ್ದಿಷ್ಟ ಸಮಯದ ಚೌಕಟ್ಟನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಇದನ್ನೂ ಮೀರಿಯೂ ಕೋಣಗಳಿಗೆ ಹಿಂಸೆ ನೀಡಿದ್ದು ಕಂಡು ಬಂದರೆ ಅಂತಹ ಕಂಬಳಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಲಿದ್ದೇವೆ. ಕಂಬಳ ಆಯೋಜಿಸುವವರು ಪಾಲಿಸ ಬೇಕಾದ ನಿಯಮಗಳ ಕುರಿತು ಪುಸ್ತಕವನ್ನೇ ಸಿದ್ಧಪಡಿಸಲಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬಳ ಕ್ರೀಡೆಗೆ ಬಜೆಟ್ ಹಂಚಿಕೆ ಕುರಿತು ಬೈಲಾವನ್ನು ರೂಪಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರಿಗೆ ನಿರ್ದೇಶನ ನೀಡಿದ್ದಾರೆ.

ಈ ವರ್ಷ, ನ.15 ರಿಂದ ಪ್ರಾರಂಭವಾಗುವ 25 ಕಂಬಳ ಕಾರ್ಯಕ್ರಮಗಳನ್ನು ನಾವು ಯೋಜಿಸಿದ್ದೇವೆ. ಹರೇಕಳ ಮತ್ತು ಬಡಗಬೆಟ್ಟುವಿನಲ್ಲಿ ಎರಡು ಹೊಸ ಕಂಬಳ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಹೀಗಾಗಿ ಪ್ರತಿ ಕಂಬಳಕ್ಕೆ 8 ಲಕ್ಷ ರೂ.ಗಳಂತೆ ಬಜೆಟ್’ನಲ್ಲಿ 2 ಕೋಟಿ ರೂ.ಗಳನ್ನು ನಿಗದಿಪಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಐಪಿಎಲ್ ಮಾದರಿಯಲ್ಲಿ ಕಂಬಳ ಕಾರ್ಯಕ್ರಮಗಳಿಗೆ ಪ್ರಾಯೋಜಕರನ್ನು ಕರೆತರುವ ಯೋಜನೆಯೂ ಇದೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post