ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಮಂಗಳೂರು ನಗರದ ಶಕ್ತಿನಗರದ ಖಾಸಗಿ ನರ್ಸಿಂಗ್ ಸಂಸ್ಥೆಯ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವನೆಯಿಂದ 137 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಪ್ರಕರಣದ ಕುರಿತು ಕದ್ರಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿ ಜಗದೀಶ್ ಅವರು ನರ್ಸಿಂಗ್ ಕಾಲೇಜು ಮತ್ತು ಆಡಳಿತ ಮಂಡಳಿ ವಿರುದ್ದ ನಿರ್ಲಕ್ಷ್ಯತೆಯ ಕುರಿತು ದೂರು ನೀಡಿದ್ದು ಅದರಂತೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಹಾಸ್ಟೆಲ್ ನಲ್ಲಿ ಆಹಾರ ಸೇವಿಸಿದ್ದ ಕೆಲವು ವಿದ್ಯಾರ್ಥಿನಿಯರಲ್ಲಿ ಭಾನುವಾರವೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಭಾನುವಾರ ಬಿರಿಯಾನಿ ಮತ್ತು ಘೀರೈಸ್ ಪೂರೈಕೆ ಮಾಡಲಾಗಿದ್ದು, ಸೋಮವಾರ ಮಧ್ಯಾಹ್ನ ಹಾಸ್ಟೆಲ್‌ನ ಬಹುತೇಕ ವಿದ್ಯಾರ್ಥಿನಿಯರು ವಾಂತಿ, ತಲೆಸುತ್ತುವಿಕೆಯಿಂದ ಅಸ್ವಸ್ಥಗೊಂಡಿದ್ದರು. ಬಳಿಕ ಎ.ಜೆ ಆಸ್ಪತ್ರೆಯಲ್ಲಿ 52, ಕೆಎಂಸಿ ಜ್ಯೋತಿಯಲ್ಲಿ 18 , ಫಾಧರ್ ಮುಲ್ಲರ್ ನಲ್ಲಿ 42 , ಸಿಟಿ ಆಸ್ಪತ್ರೆಯಲ್ಲಿ 8, ಮಂಗಳಾ ನರ್ಸಿಂಗ್ ಹೋಂನಲ್ಲಿ ಮೂವರನ್ನು ದಾಖಲಿಸಲಾಗಿತ್ತು.
Also read: ಮಗಳ ಬಳಿ ಪ್ರೆಗ್ನನ್ಸಿ ಕಿಟ್! ಹೆತ್ತ ಪುತ್ರಿಯನ್ನೇ ಆಸಿಡ್ ಸುರಿದು ಕೊಂದ ಪೋಷಕರು
ಈ ನಡುವೆ ಕಾಲೇಜು ಆಡಳಿತ ಮಂಡಳಿ ಹತ್ತು ದಿನಗಳ ಕಾಲ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ್ದು, ವಿದ್ಯಾರ್ಥಿಗಳು ಊರಿಗೆ ತೆರಳಿದ್ದಾರೆ. ಇಲ್ಲಿ ಕಲಿಯುತ್ತಿರುವ ಹಲವು ಮಂದಿ ಕೇರಳ ಮೂಲದ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಜಾರಿ ಬಿದ್ದು ಯುವಕ ಮೃತ್ಯು
ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ಮಂಜೇಶ್ವರದಲ್ಲಿ ನಡೆದಿದೆ.
ಮಂಜೇಶ್ವರ ಕರೋಡ ನಿವಾಸಿ ಫವಾಝ್ (21) ಮೃತ ಯುವಕ. ಮಂಜೇಶ್ವರ ಖಾಸಗಿ ಶಾಲೆಯ ಬಸ್ ನೌಕರನಾಗಿರುವ ಫವಾಝ್, ಹಾಗೂ ಇನ್ನೊಬ್ಬ ಯುವಕ ಶಾಲೆಯ ಕಟ್ಟಡ ಮೇಲೆ ಇರುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಮೇಲಕ್ಕೇರಿದ್ದರು. ಈ ಸಂದರ್ಭದಲ್ಲಿ ಫವಾಝ್ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.
ಕೂಡಲೇ ಶಾಲಾ ಸಿಬ್ಬಂದಿಗಳು, ನಾಗರಿಕರು ಫವಾಝ್’ನನ್ನು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಸ್ಥಳಕ್ಕೆ ಧಾವಿಸಿದ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿನ್ನದ ಅಂಗಡಿಯಲ್ಲಿ ರಾಘವೇಂದ್ರ ಆಚಾರ್ಯ ಕೊಲೆ ಪ್ರಕರಣ: 7 ಪೊಲೀಸ್ ತಂಡಗಳ ರಚನೆ
ಮಂಗಳೂರು ನಗರದ ಹಂಪನ ಕಟ್ಟೆಯ ಚಿನ್ನದ ಅಂಗಡಿಯಲ್ಲಿ ಸಿಬ್ಬಂದಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗಾಗಿ 7 ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರ್ಸ್’ನಲ್ಲಿ ಸಿಬ್ಬಂದಿಯಾಗಿದ್ದ ಅತ್ತಾವರ ನಿವಾಸಿ ರಾಘವೇಂದ್ರ ಆಚಾರ್ಯ (55) ಅವರಿಗೆ ಶುಕ್ರವಾರ ಸಂಜೆ ಮುಸುಕುಧಾರಿಯೊಬ್ಬ ಚೂರಿಯಿಂದ ಇರಿದು ಹತ್ಯೆ ಮಾಡಿ, ಅನಂತರ ಸ್ವಲ್ಪ ದೂರಕ್ಕೆ ಓಡಿ ಹೋಗಿ ಆಟೋರಿಕ್ಷಾವೊಂದರಲ್ಲಿ ಹೋಗಿದ್ದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಆರೋಪಿಯ ಚಹರೆಯ ಸಿಸಿಟಿವಿ ದಾಖಲೆಯನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಆರೋಪಿ ಪತ್ತೆ ಕಾರ್ಯವು ಜಟಿಲವಾದ ಕಾರಣ ನಗರದ ಅಪರಾಧ ಪತ್ತೆ ದಳ (ಸಿಸಿಬಿ), ದಕ್ಷಿಣ ಉಪ ವಿಭಾಗ, ಉತ್ತರ ಉಪವಿಭಾಗ, ಕೇಂದ್ರ ಉಪವಿಭಾಗ ಸಹಿತ 7 ತಂಡಗಳನ್ನು ರಚಿಸಲಾಗಿದೆ.
ಮಾತ್ರವಲ್ಲ ಸಿಸಿಟಿವಿಯಲ್ಲಿ ದಾಖಲಾದ ಆರೋಪಿಯ ಭಾವಚಿತ್ರವನ್ನು ಬಿಡುಗಡೆ ಮಾಡಿ ಆತನ ಬಂಧನಕ್ಕೆ ಸಾರ್ವಜನಿಕರ ನೆರವನ್ನು ಪೊಲೀಸರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















