ನವದೆಹಲಿ: ಈ ದೇಶದ ರಕ್ಷಣಾ ವ್ಯವಸ್ಥೆಯನ್ನು 2014ರಿಂದ 2017ರವರೆಗೂ ಅತ್ಯಂತ ಸಮರ್ಥವಾಗಿ ನಿರ್ವಹಣೆ ಮಾಡಿದ್ದ ಮನೋಹರ್ ಪರಿಕ್ಕರ್ ಇನ್ನು ನೆನಪು ಮಾತ್ರ.
ಗೋವಾ ಮುಖ್ಯಮಂತ್ರಿಯಾಗಿ ಮೂರು ಅವಧಿಗೆ ಪರಿಕ್ಕರ್ ಸೇವೆ ಸಲ್ಲಿಸಿದ್ದಾರೆ. ಇಂತಹ ವ್ಯಕ್ತಿಯನ್ನು ಆಯ್ದುಕೊಂಡ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟಕ್ಕೆ ಕರೆದುಕೊಂಡು, ಅತ್ಯಂತ ಮಹತ್ವದ ರಕ್ಷಣಾ ಖಾತೆಯ ಹೊಣೆಯನ್ನು ಹೊರಿಸಿದ್ದರು.
ಅಂದು ಪರಿಕ್ಕರ್ ಅವರಿಗೆ ರಕ್ಷಣಾ ಖಾತೆಯ ಹೊಣೆ ನೀಡಿದಾಗ ಇವರಿಂದ ಏನಾಗುತ್ತದೆ ಎಂದು ಕೊಂಕು ಮಾತನಾಡಿದವರು ಅನೇಕರಿದ್ದರು. ಆದರೆ, ಪ್ರಧಾನಿಯವರ ನೀಡಿದ ಜವಾಬ್ದಾರಿಯನ್ನು ಸದ್ದಿಲ್ಲದೇ ಅತ್ಯಂತ ಸಮರ್ಥ ಹಾಗೂ ನಿಷ್ಠೆಯಿಂದ ಪರಿಕ್ಕರ್ ನಿರ್ವಹಿಸಿದ್ದರು.
ಗಡಿಯಲ್ಲಿ ಪಾಕ್ ಪುಂಡಾಟ ಹೆಚ್ಚಾಗಿ ಪದೇ ಪದೇ ಅಪ್ರಚೋದಿತ ದಾಳಿ ನಡೆದು ಹಲವು ಸಂಖ್ಯೆಯಲ್ಲಿ ಭಾರತೀಯ ಯೋಧರು ವೀರಸ್ವರ್ಗ ಸೇರಿದ್ದರು. ನಿರಂತರವಾಗಿ ಇಂತಹ ಘಟನೆಯಿಂದ ಕೆರಳಿದ್ದ ಪರಿಕ್ಕರ್ ಸೇನೆಗೆ ಕೊಟ್ಟ ಆದೇಶವೇ ಒಂದು ಇತಿಹಾಸ.
ಪಾಕಿಸ್ಥಾನದ ಕಡೆಯಿಂದ ಒಂದು ಬುಲೆಟ್ ನಮ್ಮ ಕಡೆಗೆ ಬಂದರೆ, ನಮ್ಮ ಕಡೆಯಿಂದ ಹತ್ತು ಬುಲೆಟ್ ಶತ್ರುಗಳನ್ನು ಸೀಳಲಿ. ನಮ್ಮ ಹಾರುವ ಬುಲೆಟ್’ಗೆ ಲೆಕ್ಕ ಇಡಬೇಡಿ. ಅವರು ಒಂದು ಬಾರಿ ಟ್ರಿಗರ್ ಒತ್ತಿದರೆ ನಮ್ಮ ಕಡೆಯಿಂದ ನಿರಂತರವಾಗಿ ಗುಂಡಿನ ಮಳೆಗರೆಯಲಿ ಎಂಬ ಮಾತನ್ನಾಡುವ ಮೂಲಕ ಸೇನೆಗೆ ಒಂದು ಹಂತದ ಸ್ವಾತಂತ್ರ ನೀಡುವ ಜೊತೆಯಲ್ಲಿ ಆತ್ಮಸ್ಥೈಯವನ್ನೂ ಸಹ ತುಂಬಿದ್ದರು.
ಅಲ್ಲಿಯವರೆಗೂ ಯಾವ ರಕ್ಷಣಾ ಸಚಿವರೂ ಸಹ ಭೇಟಿ ನೀಡದ ಅತ್ಯಂತ ದುರ್ಗಮ ಪ್ರದೇಶಗಳಿಗೆ ಭೇಟಿ ನೀಡಿ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ಅವರು ಮಾಡಿದ್ದರು.
ಪ್ರಮುಖವಾಗಿ, ಉರಿ ಸೆಕ್ಟರ್ ಮೇಲೆ ಪಾಕ್ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್’ನ ನಿರ್ಧಾರದ ಹಿನ್ನೆಲೆಯಲ್ಲಿ ಪರಿಕ್ಕರ್ ಅವರ ಮಾತ್ರವೂ ಸಹ ಮಹತ್ವದ್ದಾಗಿತ್ತು. ಪಾಕಿಸ್ಥಾನಕ್ಕೆ ತಕ್ಕ ಉತ್ತರ ನೀಡಬೇಕು ಎಂಬ ನಿರ್ಣಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಗೃಹ ಸಚಿವ ರಾಜನಾಥ್ ಸಿಂಗ್ ಅವರ ನಿರ್ಧಾರಗಳು ಎಷ್ಟು ಮುಖ್ಯವಾಗಿದ್ದವೋ, ಈ ದೇಶದ ರಕ್ಷಣಾ ಸಚಿವರಾಗಿ ಪರಿಕ್ಕರ್ ಅಂದು ನಿರ್ವಹಿಸಿದ ರೀತಿ ಹಾಗೂ ತೆಗೆದುಕೊಂಡ ನಿರ್ಧಾರಗಳು ಸೇನೆಯ ಧೈರ್ಯವನ್ನು ಹೆಚ್ಚಿಸಿದ್ದು ಸುಳ್ಳಲ್ಲ.
Discussion about this post