ಭದ್ರಾವತಿ: ಅಕ್ರಮ ಹಣ-ಆಸ್ತಿ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದಿಂದ ಬಂಧಿಸಿರುವ ಕ್ರಮ ಸರಿಯಾದುದಲ್ಲ. ಇದು ಕೇಂದ್ರ ಸರ್ಕಾರದ ರಾಜಕೀಯ ಪಿತೂರಿ ಎಂದು ಆರೋಪಿಸಿ ತಾಲೂಕು ಒಕ್ಕಲಿಗರ ಸಂಘದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಕಪ್ಪು ಪಟ್ಟಿ ಧರಿಸಿ ನಗರದ ಹುತ್ತಾ ಕಾಲೋನಿಯಿಂದ ತಾಲೂಕು ಕಚೇರಿಯವರೆಗೂ ಕಾಲ್ನಡಿಗೆ ಜಾಥಾ ಕೈಗೊಂಡಿದ್ದರು. ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮುದಾಯದ ಮುಖಂಡ ಹಾಗೂ ಮಾಜಿ ಶಾಸಕ ಎಂ,ಜೆ. ಅಪ್ಪಾಜಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಗುಜರಾತಿನ ರಾಜ್ಯಸಭಾ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಆಮಿಶವೊಡ್ಡಿದ್ದು ಅದಕ್ಕೆ ಒಪ್ಪದಿರುವುದೇ ಇಷ್ಟೆಲ್ಲಾ ಆವಾಂತರ ಹಾಗೂ ಬಂಧನಕ್ಕೆ ಕಾರಣವಾಗಿದೆ. ಕೂಡಲೆ ಶಿವಕುಮಾರ್ ಅವರನ್ನು ಬಿಡುಗಡೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುಘಲಕ್ ದರ್ಬಾರ್ ನಡೆಸುತ್ತಿವೆ. ಶಿವಕುಮಾರ್ ಭ್ರಷ್ಟರಲ್ಲ. ಕಳೆದ 3 ತಿಂಗಳ ಹಿಂದೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ದೊಡ್ಡ ನಾಟಕವಾಡಿತ್ತು. ಆ ಸಂದರ್ಭದಲ್ಲಿ ಹಣ ಆಟವಾಡಿದೆ. ಇದನ್ನು ಕೇಂದ್ರ ಹಾಗೂ ರಾಜ್ಯ ತನಿಖಾ ತಂಡಗಳು ತನಿಖೆ ನಡೆಸಿದರೆ ನಿಜವಾದ ಭ್ರಷ್ಟ ಯಾರೆಂಬುದು ತಿಳಿಯುತ್ತದೆ ಎಂದು ದೂರಿದರು.
ಈಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿಜವಾದ ಆಡಳಿತ ನಡೆಸುತ್ತಿಲ್ಲ. ಕೇಂದ್ರದ ಅಮಿತ್ ಷಾ, ಹಾಗೂ ಮೋದಿ ಇವರನ್ನು ರಿಮೋಟ್ ಕಂಟ್ರೋಲ್ ಮೂಲಕವೇ ಆಡಳಿತ ನಡೆಸುವಂತೆ ಮಾಡಿದ್ದಾರೆ. ಇವರ ಆಡಳಿತ ವೈಖರಿ ಮುಂದಿನ ದಿನಗಳಲ್ಲಿ ದೇಶವನ್ನು ಹಾಳು ಮಾಡಲಿದೆ. ನಮ್ಮ ಜಿಲ್ಲೆಯವರಾದ ಯಡಿಯೂರಪ್ಪನವರಿಗೆ ಇಲ್ಲಿನ ಎಂಪಿಎಂ ಹಾಗೂ ವಿಐಎಸ್’ಎಲ್ ಕಾರ್ಖಾನೆ ಬಗ್ಗೆ ಖಾಳಜಿ ಇಲ್ಲದಂತಾಗಿದೆ. ತಮ್ಮ ಕ್ಷೇತ್ರವಾದ ಶಿಕಾರಿಪುರಕ್ಕೆ ಸಾವಿರ ಕೋಟಿ ಹಣವನ್ನು ಬಿಡುಗಡೆಗೊಳಿಸಿದ್ದಾರೆ. ಇಂತವರನ್ನು 7 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿರುವುದು ಈ ಕ್ಷೇತ್ರದ ನಮ್ಮೆಲ್ಲರ ದೌರ್ಭಾಗ್ಯ ಎಂದರು. ನಂತರ ತಹಶೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್, ಪ್ರಮುಖರಾದ ಜೆ.ಪಿ. ಯೋಗೇಶ್, ಮಣಿಶೇಖರ್ ಚಂದ್ರೇಗೌಡ, ಬಾಲಕೃಷ್ಣ, ಜಯರಾಮ್, ರಾಮಕೃಷ್ಣ, ಗೊಂಧಿ ಜಯರಾಮ್, ಶಾರದಾ ಅಪ್ಪಾಜಿ, ಸುಧಾಮಣಿ, ಮಹಾದೇವಿ, ಯಶೋಧಮ್ಮ ಎಚ್.ಬಿ. ರವಿಕುಮಾರ್, ಮಂಜಪ್ಪ, ಟಿ. ವೆಂಕಟೇಶ್, ಸತೀಶ್ ಗೌಡ, ಕರಿಯಪ್ಪ ಸೇರಿದಂತೆ ಹಲವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post