ಇಸ್ಲಾಮಾಬಾದ್: ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್, ಜೈಷ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಸತ್ತಿಲ್ಲ. ಅವನು ಆರೋಗ್ಯವಾಗಿದ್ದಾನೆ ಎಂದು ಸ್ವತಃ ಜೈಷ್ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಮಸೂದ್ ನಿನ್ನೆ ಸತ್ತಿದ್ದಾನೆ ಎಂದು ಈ ಮುನ್ನ ಪಾಕ್ ಮಾಧ್ಯಮಗಳು ಸೇರಿದಂತೆ ಜಾಗತಿಕ ಮಾಧ್ಯಮಗಳು ವರದಿ ಮಾಡಿದ್ದವು. ಈ ಸುದ್ದಿ ಭಾರೀ ವೈರಲ್ ಆಗಿದ್ದು, ರಾಕ್ಷಸ ಸತ್ತ ಎಂದು ಇಡಿಯ ಭಾರತ ಸಂತಸ ಪಡುತ್ತಿತ್ತು. ಆದರೆ, ಈ ಸುದ್ದಿ ಸುಳ್ಳು ಎಂದು ಸ್ವತಃ ಜೈಷ್ ಹೇಳಿದೆ.
ಇನ್ನೊಂದೆಡೆ ಭಾರತಕ್ಕೆ ಮೋಸ್ಟ್ ವಾಂಟೆಡ್ ಉಗ್ರನಾಗಿರುವ ಅಜರ್ ನಮ್ಮ ದೇಶದಲ್ಲಿ ಇಲ್ಲ ಎಂದು ಪಾಕ್ ವಾದ ಮಾಡುತ್ತಲೇ ಇದೆ. ಆದರೆ, ಈಗ್ಗೆ ಎರಡು ದಿನಗಳ ಹಿಂದೆ ಮಾತನಾಡಿದ್ದ ಪಾಕ್ ವಿದೇಶಾಂಗ ಸಚಿವ, ಅಜರ್ ನಮ್ಮಲ್ಲೆ ಇದ್ದಾನೆ. ಅವನಿಗೆ ಅನಾರೋಗ್ಯ ಕಾಡುತ್ತಿದ್ದು ಓಡಾಡಲೂ ಆಗದ ಸ್ಥಿತಿಯಲ್ಲಿದ್ದಾನೆ ಎಂದಿದ್ದರು.
ಇದೇ ವೇಳೆ, ಅಜರ್ ಭಾರತ ಹಸ್ತಾಂತರಕ್ಕೆ ಹಾಗೂ ಜೈಷ್ ಉಗ್ರ ಸಂಘಟನೆ ನಿಷೇಧಕ್ಕೆ ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರ ಸಾವಿನ ನಾಟಕವನ್ನು ಪಾಕ್ ಆಡುತ್ತಿದೆ ಎಂಬ ಅನುಮಾನಗಳೂ ಸಹ ಮೂಡಿದ್ದು, ಜೈಷ್ ಹೇಳಿಕೆ ಇದಕ್ಕೆ ಪುಷ್ಟಿ ನೀಡಿದೆ.
Discussion about this post