ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ವಿಶ್ವ ಸಂತ ಭರತ ಪುತ್ರ ಆಧ್ಯಾತ್ಮ ಚೇತನ ಸ್ವಾಮಿ ವಿವೇಕಾನಂದರ ಬಗ್ಗೆ ಈ ಭೂಮಿಯಲ್ಲಿ ಯಾರಿಗೆ ತಾನೆ ತಿಳಿದಿಲ್ಲ. ಇಂದು ಅವರ ಜನ್ಮ ದಿನ. ಅವರ ಜೀವನದ ಕೆಲ ಘಟನೆಗಳನ್ನು ಮೆಲಕು ಹಾಕಿ ನಮ್ಮಲ್ಲಿ ಅವರ ಆದರ್ಶ ಮತ್ತು ವ್ಯಕ್ತಿತ್ವ ಬೆಳೆಸಿಕೊಂಡರೆ ಸಾಕು ಎಂಬುದಷ್ಟೆ ಈ ಕಿರು ಲೇಖನ. ಅಂತಹ ತೇಜಃಪುಂಜಕ್ಕೆ ಪುಣ್ಯ ಪುರುಷನಿಗೆ ಈ ಅಂಕಣ ಸಮರ್ಪಣೆ.
ಭುವನೇಶ್ವರಿದೇವಿಗೆ ಎರಡು ಹೆಣ್ಣು ಮಕ್ಕಳ್ಳಿದ್ದರೂ ಅಂದಿನ ಕಾಲದಲ್ಲಿ ಹಾಗೂ ಈಗಲೂ ಹಲವು ಪೋಷಕರಿಗೆ ಇರುವ ಆಸೆಯಂತೆ ತಮಗೂ ಒಂದು ಗಂಡು ಮಗುವಾಗಲಿ ಎಂದು ಕಾಶಿ ವಿಶ್ವೇಶ್ವರನಿಗೆ ಹರಕೆ ಹೊತ್ತು ಒಂದು ಗಂಡು ಮಗುವನ್ನು ಪಡೆದರು. ಭುವನೇಶ್ವರಿ ದೇವಿಯವರು ಗರ್ಭವತಿಯಾಗಿದ್ದಾಗ ಅವರ ಕನಸಲ್ಲಿ ತೇಜಃಪುಂಜವಾದ ಶಿವಮೂರ್ತಿಯು ಧ್ಯಾನಮಗ್ನನಾಗಿರುವುದನ್ನು ಕಂಡು ಅವರಿಗೆ ಹುಟ್ಟುವ ಮಗನು ಶಿವನ ಆಶಿರ್ವಾದ ಹಾಗೂ ಆತ ಆಧ್ಯಾತ್ಮ ಸಾಧನೆಗಯ್ಯುವವನೆ ಎಂದು ತಿಳಿದು ಅಂತಹ ಅದ್ಭುತ ವ್ಯಕ್ತಿಯನ್ನು ಜಗತ್ತಿಗೆ ದಾರೆಯರಿಯ ಬೇಕಾದರೆ ತಪ್ಪಸ್ಸಿನಿಂದ ಪೂತವಾಗಬೇಕು ಮನಸ್ಸು ಎಂದು ಅವರು ಆಧ್ಯಾತ್ಮದ ಅಧ್ಯಯನ ಮತ್ತು ಅನುಕರಣೆಯಲ್ಲಿ ತೊಡಗಿಸಿಕೊಂಡರಂತೆ. ಅಂತಹ ತಪಸ್ ಶಕ್ತಿಯನ್ನು ಪೌಷ್ಯಮಾಸದ ಸಪ್ತಮಿ ದಿನ ಅಂದರೆ 1863ನೇ ಇಸವಿ ಜನವರಿ 12ನೇ ತಾರೀಖು ಭಾರತ ಮಾತೆಯ ಮಡಿಲಿಗೆ ಹಾಕಿದರು. ಇಂದು ಆ ಮಹಾಪುರುಷನ ಜನ್ಮದಿನ.
ನರೇಂದ್ರ ಅಂದರೆ ವಿವೇಕಾನಂದರ ಬಾಲ್ಯದಲ್ಲಿದ್ದ ಧೈರ್ಯ ಮತ್ತು ಏಕಾಗ್ರತೆಯನ್ನು ನಾವು ರೂಢಿಸಿಕೊಳ್ಳಲೇ ಬೇಕು ಆ ಧೈರ್ಯ ಮತ್ತು ಏಕಾಗ್ರತೆಗೆ ಒಂದು ಉದಾಹರಣೆ ಒಮ್ಮೆ ನರೇಂದ್ರರು ತಮ್ಮ ಬಾಲ್ಯದ ಸ್ನೇಹಿತರ ಜೊತೆ ಧ್ಯಾನ ಮಾಡುತ್ತಿರಬೇಕಾದರೆ ಅವರಿದ್ದ ಕೊಠಡಿಯ ಒಳಗೆ ಹಾವೊಂದು ಬಂತಂದ್ದು ಅವರ ಸ್ನೇಹಿತರೆಲ್ಲ ಓಡಿ ಹೋದರು ಅದರಲ್ಲಿ ಒಬ್ಬ ಸ್ನೇಹಿತ ನರೇಂದ್ರರನ್ನು ಎಚ್ಚರಿಸುವ ಪ್ರಯತ್ನ ಮಾಡಿದ ಧ್ಯಾನದಲ್ಲಿ ಕುಳಿತಿದ್ದ ನರೇಂದ್ರನಿಗೆ ಬಾಹ್ಯ ಜಗತ್ತಿನ ಅರಿವೇ ಇಲ್ಲ ಅವನ ಸುತ್ತ ಏನು ನೆಡೆಯುತ್ತಿದೆ ಅನ್ನುವ ಪರಿಜ್ಞಾನವೂ ಇಲ್ಲ ತನ್ನ ಸುತ್ತ ಹಾವೊಂದು ಸುತ್ತಿ ಕೆಲ ಹೊತ್ತಿದ್ದು ಹೋಗಿದ್ದು ಅವನಿಗೆ ತಿಳಿಯಲೇ ಇಲ್ಲ. ಅಷ್ಟು ತನ್ನ ಕೆಲಸದಲ್ಲಿ ಏಕಾಗ್ರತೆ ಮತ್ತು ಶ್ರದ್ಧೆ. ಅನಂತರ ಸ್ನೇಹಿತನು ನೀನೇಕೆ ಓಡಲಿಲ್ಲ ಎಂದು ಕೇಳಿದಾಗ ನರೇಂದ್ರರು ಕೊಟ್ಟ ಉತ್ತರ “ ಆ ಸಮಯದಲ್ಲಿ ಮನಸ್ಸು ಒಂದು ಅವರ್ಣನೀಯ ಆನಂದದಲ್ಲಿತ್ತು ” ಎಂದರು. ಒಮ್ಮೆ ಆಲೋಚಿಸಿ ನಾವು ಮಾಡುವ ಕೆಲಸದಲ್ಲಿ, ಓದಿನಲ್ಲಿ ನಮಗೆ ನರೇಂದ್ರರ ಒಂದು ಪಾಲು ಶ್ರಧ್ಧೆ ಏಕಾಗ್ರತೆ ಇದ್ದರೆ ನಮ್ಮ ಕೆಲಸದಲ್ಲಿ ಸಾಧಿಸುವುದು ಕಷ್ಟವೇ ಅಲ್ಲ.
ಮತ್ತೊಮ್ಮೆ ಅವರ ಸ್ನೇಹಿತರು ಪಕ್ಕದ ಮನೆಯಲ್ಲಿನ ಮರದಲ್ಲಿ ಮರಕೋತಿ ಆಡುತ್ತಿದ್ದರು ಹುಡುಗರ ಆಟದಿಂದ ಅವರ ಮಧ್ಯಾಹ್ನದ ನಿದ್ದೆಗೆ ತೊಂದರೆಯಾಗುತ್ತದೆ ಎಂದು ಮರದಲ್ಲಿ ಬ್ರಹ್ಮರಾಕ್ಷಸ ಇದೆ ಅದು ನಿಮ್ಮ ಕತ್ತನ್ನು ಹಿಸುಕುತ್ತದೆ ಎಂದು ಹೇಳಿದ ಹುಡುಗರೆಲ್ಲ ಓಡಿಹೋದರು ಆದರೆ ನರೇಂದ್ರರು ಮಾತ್ರ ಮರದಲ್ಲಿ ನೇತಾಡುತ್ತಿದ್ದರು. ಮನೆಯ ಮಾಲಿಕ ಹೊರಬಂದು ನಾನು ಹೇಳಿದನಲ್ಲ ಆ ಮರದಲ್ಲಿ ಬ್ರಹ್ಮರಾಕ್ಷಸ ನಿದ್ದಾನೆಯೆಂದು ನೀನು ಹೋಗು ಎಂದು ಹೇಳಿದಾಗ ನರೇಂದ್ರರು ಹೇಳಿದರು “ಬ್ರಹ್ಮರಾಕ್ಷಸನು ಇಲ್ಲ ಯಾರೂ ಇಲ್ಲ, ನೋಡೋಣ, ಇದ್ದರೆ ಬಂದು ಕತ್ತನ್ನು ಹಿಸುಕಲಿ!” ಎಂದರು. ಅವರ ಆ ವಯಸ್ಸಿನಲ್ಲಿ ಆ ಧೈರ್ಯವನ್ನು ಮೆಚ್ಚಲೇ ಬೇಕು. ನಾವು ನಮ್ಮ ಮಕ್ಕಳಿಗೆ ಕತ್ತಲು, ಭೂತ, ಪ್ರೇತ, ಸಮಾಜದ ಕೆಟ್ಟ ಉದಾಹರಣೆಗಳನ್ನು ಕೊಟ್ಟು ಹೆದರಿಸಿ ಇಟ್ಟು ಕೊಳ್ಳುತೇವೆ ಬಾಲ್ಯದಲ್ಲಿ ನಮ್ಮ ಮಾತು ಕೇಳಲಿ ಎಂದು ಆದರೆ ಆ ಹೆದರಿಕೆಗಳೇ ಅವರ ಜೀವನದ ಭಾಗವಾಗಿರುತ್ತದೆ. ನಮ್ಮ ಮಕ್ಕಳಿಗೆ ನಾವು ತುಂಬ ಬೇಕಾದುದು ಧೈರ್ಯ ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ಇರಬೇಕಾದುದು ಅದೇ ಧೈರ್ಯ. ಅದು ನಮ್ಮೊಳಗಿದ್ದರೆ ಮಾತ್ರ ನಾವು ವಿವೇಕಾನಂದರು ಹೇಳಿದಹಾಗೆ ನಮ್ಮನ್ನು ನಾವು ಗೆಲ್ಲಲು ಸಾಧ್ಯ. ನಮ್ಮನ್ನು ನಾವು ಗೆಲ್ಲದಿದ್ದರೆ ಮತ್ತೇನನ್ನು ಗೆಲ್ಲಲಾದೀತು!?
ತದನಂತರ ಅವರು ರಾಮಕೃಷ್ಣಪರಮಹಂಸರ ಜೊತೆ ಗೂಡಿದ್ದು ಅವರ ಶಿಷ್ಯರಾಗಿದ್ದು ಎಲ್ಲರಿಗೂ ತಿಳಿದಿದೆ. ರಾಮಕೃಷ್ಣರ ಸಂಬಂಧ ಅವರ ಆಧ್ಯಾತ್ಮಿಕ ಸ್ವಭಾವದ ಬೀಜಗಳಿಗೆ ನೀರೆರದಂತೆ ಆಯಿತು. ನರೇಂದ್ರರ ತಂದೆ ವಿಶ್ವನಾಥದತ್ತರಿಗೆ ನರೇಂದ್ರ ತನ್ನಂತೆ ವಕೀಲನಾಗಬೇಕೆಂಬ ಆಸೆ ಅದಕ್ಕಾಗಿ ಕಲ್ಕತ್ತಾದ ನಿಮಯಚರಣ ಬೋಸ್ ಎಂಬ ಪ್ರಖ್ಯಾತವಕೀಲನ ಹತ್ತಿರ ಸೇರಿಸಿದರು. ಇತ್ತ ಮಗನ ಮದುವೆಗೆ ವಧುವನ್ನು ನೋಡಲು ಆರಂಬಿಸಿದರು. ನರೇಂದ್ರರಿಗೆ ಮದುವೆಯಲ್ಲಿ ಆಸಕ್ತಿಇಲ್ಲ ಒಮ್ಮೆ ಮದುವೆಯಾದರೆ ಮುಗಿಯಿತು ಆಧ್ಯಾತ್ಮಿಕ ಅಭಿಪ್ಸೆಗಳಿಗೆಲ್ಲ ತಿಲತರ್ಪಣ ಕೊಟ್ಟಂತೆ ಎಂದು ಭಾವಿಸಿದ್ದರು.
ಶ್ರೀ ರಾಮಕೃಷ್ಣರಂತು ನರೇಂದ್ರರ ಮನೆಗೆ ಹೆಣ್ಣಿನವರು ಬಂದರೆ ಕಾಳಿಕಾಮಂದಿರಕ್ಕೆ ಹೋಗಿ ನರೇಂದ್ರರ ಮದುವೆ ಆಗದಂತೆ ಮಾಡು ಎಂದು ಬೇಡುತ್ತಿದ್ದರು. ನರೇಂದ್ರ ಬಂದಿರುವುದು ಮದುವೆಯಾಗಿ ಯಾವುದೋ ಒಂದು ಹೆಣ್ಣಿಗೆ ಮತ್ತು ಕೆಲವು ಮಕ್ಕಳಿಗೆ ಆನಂದವನ್ನು ಕೊಡುವುದಕ್ಕೆ ಅಲ್ಲ. ಅವನು ಹಲವು ಜೀವಿಗಳ ಉದ್ಧಾರ ಮಾಡುವುದಕ್ಕೆ ಭವಸಾಗರದಲ್ಲಿ ಒಂದು ನಾವೆಯಂತೆ ಇರಬೇಕಾಗಿದೆ ಎಂಬದು ಅವರ ಇಚ್ಚೆ. ಭಗವದ್ದಿಚ್ಚೆಯಂತೆ ನರೇಂದ್ರರು ವಿವೇಕಾನಂದರಾಗಿ ಭಾರತದ ಆಧ್ಯಾತ್ಮಿಕ ಲೋಕಕ್ಕೆ ತಿಲಕರಾದರು. ಅವರ ಜೀವನವೇನು ಸುಖದ ಸುಪ್ಪತ್ತಿಗೆಯರಿಲಿಲ್ಲ, ಪ್ರತಿ ಹಂತದಲ್ಲೂ ಕಷ್ಟಪಟ್ಟರು. ಆದರೆ ತಾವು ನಂಬಿದ್ದ ಸಿದ್ದಾಂತ ಮತ್ತು ತಮ್ಮ ವ್ಯಕ್ತಿತ್ವವನ್ನು ಬಿಡಲಿಲ್ಲ. ಪ್ರತಿ ಜೀವನದ ಹೊಡೆತವನ್ನು ತಮ್ಮ ಬೆಳವಣಿಗೆಗೆ ಮಾರ್ಪಾಡು ಮಾಡಿಕೊಂಡರು. ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ಅವರು ಆನಂದವನ್ನು ಕಂಡರು. ಇಡೀ ಜಗತ್ತಿಗೆ ಭಾರತದ ಆಧ್ಯಾತ್ಮಶಕ್ತಿಯನ್ನು ತೋರಿದರು.
ಅಂತಹಾ ವಿವೇಕ ಭೂಮಿ ಈ ಭಾರತ ಭೂಮಿ. ನಾವು ಸಹ ಅದೇ ಭೂಮಿಯಲ್ಲಿ ಬದುಕುತ್ತಿದ್ದೇವೆ. ಈ ಭಾರತವನ್ನು ವಿಶ್ವಗುರು ಮಾಡಿದ ಆ ಮಹಾ ಚೇತನ ನಮಗೆ ಸ್ಪೂರ್ತಿಯ ಚಿಲುಮೆ. ಅವರಿಲ್ಲಿದ್ದ ವಿವೇಕ ಮತ್ತು ಆನಂದ ಇಂದು ನಮ್ಮಲ್ಲಿ ಇಲ್ಲದಾಗಿದೆ. ಭಾರತವನ್ನು ಕಟ್ಟುವ ಜಾಗದಲ್ಲಿ ಭಾರತವನ್ನು ಹಲವಾರು ವಿಷಯಗಳಲ್ಲಿ ವಿಭಜಿಸುವ ಕೃತ್ಯ ಜರುಗುತ್ತಿದೆ. ಬನ್ನಿ ನಮ್ಮೊಳಗಿನ ವಿವೇಕವನ್ನು ಜಾಗೃತಿ ಮಾಡೋಣ. ಸದೃಢ ಭಾರತವನ್ನು ಕಟ್ಟಿ ಆನಂದಿಸೋಣ. ವಿವೇಕಾನಂದರಿಗೆ ಒಂದು ಉತ್ತಮ ಭಾರತವನ್ನು ಉಡುಗೊರೆಯಾಗಿ ನೀಡೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















