ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |
ಪ್ರಶ್ನೆ: ನನ್ನ ಹೆಸರು ತನುಜಾ(ಹೆಸರು ಬದಲಿಸಲಾಗಿದೆ). ನನ್ನ ಮದುವೆಯಾಗಿ 13 ವರ್ಷ ಕಳೆದಿದೆಯಾದರೂ ನಾನು ನೆಮ್ಮದಿಯಾಗಿಲ್ಲ. ನನ್ನ ಅತ್ತೆ ಹಾಗು ಗಂಡ ಇಬ್ಬರೂ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಈ ವಿಚಾರವಾಗಿ ಹಿರಿಯರು ನಡೆಸಿದ ಮಾತುಕತೆ ಸಂಧಾನ ಯಾವುದೂ ಫಲ ನೀಡಲಿಲ್ಲ. ಸಂಬಂಧಿಕರ ನಡುವೆ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಇವರು ನೀಡುವ ತೊಂದರೆಗಳಿಂದಾಗಿ ನನಗೆ ಥೈರಾಯ್ಡ್, ಡಿಪ್ರೆಶನ್ ಮೊದಲಾದ ಅರೋಗ್ಯ ಸಮಸ್ಯೆಗಳು ಬಂದಿವೆ. ಇರುವ ಒಬ್ಬ ಮಗನ ಬಗ್ಗೆಯೂ ಅವರಿಗೆ ಕಾಳಜಿ ಇಲ್ಲ. ನನ್ನನ್ನು ನನ್ನ ಮಗನನ್ನು ನಿಕೃಷ್ಠವಾಗಿ ಕಾಣುತ್ತಾರೆ. ಹೆಂಡತಿ ಹಾಗು ಮಗ ಇರುವುದೇ ನನ್ನ ಹಣ ಖರ್ಚು ಮಾಡಿಸಲು ಎಂಬಂತೆ ಮಾತನಾಡುತ್ತಾರೆ. ಇವರ ಜೊತೆ ಏಗೋದು ಕಷ್ಟ ಎನಿಸುತ್ತಿದೆ. ನನಗೆ ಇಲ್ಲಿಂದ ದೂರ ಹೋಗಿ ಎಲ್ಲಾದ್ರೂ ದುಡಿಮೆ ಮಾಡಿಕೊಂಡು ನೆಮ್ಮದಿಯಾಗಿ ಇರಬೇಕು ಎನಿಸಿದೆ. ಇವರಿಂದ ಹೇಗೆ ಬಿಡಿಸಿಕೊಳ್ಳೋದು?
ಉತ್ತರ: ದಂಪತಿಗಳ ನಡುವೆ ಬರುವ ಸಣ್ಣ ಸಂಘರ್ಷಗಳನ್ನು “ordinary wear and tear of marital life” ಎಂದೇ ನ್ಯಾಯಾಲಯ ಪರಿಗಣಿಸುತ್ತದೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ತೀರಾ ಸಹಜ. ಕ್ಷಮೆ ಹಾಗು ತಾಳ್ಮೆ ಇಬ್ಬರಲ್ಲೂ ಇರಬೇಕು. ಗಂಡ ಹೆಂಡತಿ ಇಬ್ಬರೂ ಸಣ್ಣ ವಿಚಾರಗಳನ್ನು ಹಿರಿದು ಮಾಡದೆ ಹೊಂದಿಕೊಂಡು ಬಾಳಲು ಪ್ರಯತ್ನಿಸಬೇಕು. ನಿಮಗೆ ಒಬ್ಬ ಮಗನಿದ್ದಾನೆ ಎಂದು ತಿಳಿಸಿದ್ದೀರಿ. ಅವನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದಂಪತಿಗಳಿಬ್ಬರು ಸಾಮರಸ್ಯದಿಂದ ಬಾಳುವುದು ಸಾಧ್ಯವಾ ಎಂದು ಯೋಚಿಸಿ.ಪರಿಸ್ಥಿತಿ ಸರಿಯಾಗಲು ಸಾಧ್ಯವೇ ಇಲ್ಲ ಎನಿಸಿದರೆ ನೀವು ಡೈವೋರ್ಸ್ ಅಥವಾ ವಿಚ್ಛೇದನ ಪಡೆಯುವ ಬಗ್ಗೆ ಯೋಚಿಸಬಹುದು. ಸ್ವಾಭಿಮಾನ ಹಾಗು ಆತ್ಮಗೌರವಕ್ಕೆ ಸತತವಾಗಿ ಧಕ್ಕೆಯಾದರೆ ಅಂತಹ ಸಂಬಂಧದಿಂದ ಹೊರನಡೆಯುವುದು ಸೂಕ್ತ. ನಿಮ್ಮ ಹಾಗು ಮಗುವಿನ ನಿರ್ವಹಣೆಗೆ ನೀವು ಪತಿಯಿಂದ ಜೀವನಾಂಶ ಕೂಡ ಪಡೆಯಬಹುದು.
ಹಿಂದೂ ವಿವಾಹ ಕಾಯಿದೆ ಸೆಕ್ಷನ್ 13ರ ಪ್ರಕಾರ ಮಾನಸಿಕ ಅಥವಾ ದೈಹಿಕ ಕ್ರೌರ್ಯದ ಆಧಾರದಲ್ಲಿ ವಿಚ್ಛೇದನ ಪಡೆಯಬಹುದು. ಆದರೆ ಕ್ರೌರ್ಯವನ್ನು ನ್ಯಾಯಾಲಯಕ್ಕೆ ಮಾನವರಿಕೆಯಾಗುವಂತೆ ಸಾಬೀತುಪಡಿಸುವ ಹೊಣೆ ವಿಚ್ಛೇದನ ಕೋರುವ ವ್ಯಕ್ತಿಯದ್ದಾಗಿರುತ್ತದೆ. ಥೈರಾಯ್ಡ್, ಡಿಪ್ರೆಶನ್ ಮೊದಲಾದ ಅರೋಗ್ಯ ಸಮಸ್ಯೆಗಳು ಅನೋನ್ಯವಾಗಿ ಇರುವ ದಂಪತಿಗಳಲ್ಲೂ ಬರುವ ಸಾಧ್ಯತೆಗಳಿವೆ. ಮೊದಲೇ ತಿಳಿಸಿದಂತೆ ನಿಮ್ಮ ಹಾಗು ಮಗನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಒಂದು ಉತ್ತಮ ತೀರ್ಮಾನ ತೆಗೆದುಕೊಳ್ಳಿ.
ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.
ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post