ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಗಳೂರು: ಕದ್ರಿ ಸಮೀಪದ ಸರ್ಕ್ಯೂಟ್ ಹೌಸ್ ರಸ್ತೆಯ ಅಪಾರ್ಟ್‌ಮೆಂಟ್ ಒಂದರ ಕಾಂಪೌಂಡ್ ಮೇಲೆ ಉಗ್ರ ಸಂಘಟನೆಗಳ ಪರ ಬರಹಗಳು ಕಾಣಿಸಿಕೊಂಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
’ಸಂಘಿಗಳು ಮತ್ತು ಮನುವಾದಿಗಳನ್ನು ಎದುರಿಸಲು ಲಷ್ಕರೆ ತಯ್ಬಾ ಮತ್ತು ತಾಲಿಬಾನ್‌ಗಳನ್ನು ಇಲ್ಲಿಗೆ ಆಹ್ವಾನಿಸುವಂತೆ ನಮ್ಮನ್ನು ಬಲವಂತ ಮಾಡಬೇಡಿ’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದ್ದು, ಲಷ್ಕರ್ ಜಿಂದಾಬಾದ್ ಎಂದು ಹ್ಯಾಶ್‌ಟ್ಯಾಗ್ ಸಹಿತ ಬರೆಯಲಾಗಿದೆ.

ಮೇಲ್ನೋಟಕ್ಕೆ ಕಿಡಿಗೇಡಿಗಳು ಈ ಘೋಷಣೆಗಳನ್ನು ಬರೆದಿರಬಹುದು ಎಂದು ಶಂಕಿಸಲಾಗಿದೆ. ಆದರೆ ಉಗ್ರಗಾಮಿ ಚಟುವಟಿಕೆಗಳು ಗುಪ್ತವಾಗಿ ನಡೆಯುತ್ತಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
2008ರ ನವೆಂಬರ್ 26ರಂದು ಪಾಕ್ ಮೂಲದ ಲಷ್ಕರೆ ತಯ್ಬಾ ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬಯಿಗೆ ಬಂದು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 18 ಮಂದಿ ಭದ್ರತಾ ಸಿಬ್ಬಂದಿ ಸಹಿತ 166 ಮಂದಿ ಬಲಿಯಾಗಿದ್ದರು.

ಈ ದಾಳಿ ನಡೆದು ನಿನ್ನೆಗೆ 12 ವರ್ಷಗಳಾಗಿದ್ದು, ಈ ಸಂದರ್ಭದಲ್ಲಿ ಇಂತಹ ಭಯೋತ್ಪಾದಕ ಘೋಷಣೆಗಳನ್ನು ಉಗ್ರರ ಪರ ಶಕ್ತಿಗಳು ಬರೆದು ಎಚ್ಚರಿಕೆ ನೀಡಿರಬಹುದೆಂದು ಹೇಳಲಾಗುತ್ತಿದೆ.
ಸದ್ಯ ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಈ ಘೋಷಣೆಯ ಮೇಲೆ ಪೇಂಟಿಂಗ್ ಮಾಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















