ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಗೊಂದಲಮಯವಾದ ಹಾಗೂ ಬಡ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾದ ಶುಲ್ಕ ಪರಿಷ್ಕರಣೆ ಆದೇಶವನ್ನು ವಿಳಂಬ ಮಾಡದೇ ವಾಪಾಸು ಪಡೆದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಹಿತ ಕಾಪಾಡುವಂತೆ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ #DrDhananjayaSarji ಸರ್ಕಾರವನ್ನು ಆಗ್ರಹಿಸಿದರು.
ಚಳಿಗಾಲದ 154 ನೇ ವಿಧಾನ ಪರಿಷತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪ್ರವೇಶಾತಿ ನಂತರ ಶುಲ್ಕ ಪರಿಷ್ಕರಣೆಯು ಸರ್ಕಾರದ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆವಾಂತರದಿಂದ ಸ್ನಾತಕೋತ್ತರ ಪದವಿ #MasterDegree ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರವೇಶಾತಿ ಮುಗಿದ ನಂತರ ಶುಲ್ಕ ಪರಿಷ್ಕರಿಸಿ ಹೆಚ್ಚಳ ಮಾಡಿರುವುದು ಕಾಲೇಜು ಶಿಕ್ಷಣ ಇಲಾಖೆಯ ಬೇಜಾವಾಬ್ದಾರಿತನವಾಗಿದೆ ಎಂದು ಟೀಕಿಸಿದರು.
2023 -24 ನೇ ಸಾಲಿನದ್ದ ಶುಲ್ಕವನ್ನೇ 2024 – 25 ನೇ ಸಾಲಿಗೂ ಮುಂದುವರಿಸುವ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಆದೇಶ ಹೊರಡಿಸಿದ ಒಂದೂವರೆ ತಿಂಗಳಲ್ಲಿ ಯೇ ಬೋಧನ ಶುಲ್ಕ, ಪ್ರಯೋಗಾಲಯ, ಕಾಲೇಜು ಅಭಿವೃದ್ದಿ ಶುಲ್ಕ ಸೇರಿ ಇತರ ಶುಲ್ಕಗಳನ್ನೂ ಪರಿಷ್ಕರಣೆ ಮಾಡಿದೆ. ಈಗಾಗಲೇ ರಾಜ್ಯಾದ್ಯಂತ ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಪ್ರಕ್ರಿಯೆಯು ಕಳೆದ ಅಕ್ಟೋಬರ್, ನವೆಂಬರ್ ತಿಂಗಳಲ್ಲಿಯೇ ಬಹುತೇಕ ಮುಗಿದಿದ್ದು, ತರಗತಿಗಳು ಆರಂಭವಾಗಿವೆ. ಆದರೆ, ಈಗ ಕಾಲೇಜು ಶಿಕ್ಷಣ ಇಲಾಖೆಯು ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಶುಲ್ಕ ಪರಿಷ್ಕರಿಸಿ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವುದು ಬಹುತೇಕ ಆರ್ಥಿಕ ಬಡ ವಿದ್ಯಾರ್ಥಿಗಳೇ ಹೆಚ್ಚಿರುವ ಸರ್ಕಾರಿ ಕಾಲೇಜುಗಳಲ್ಲಿ ಮತ್ತೊಮ್ಮೆ ಹೆಚ್ಚುವರಿ ಶುಲ್ಕ ಪಾವತಿಸಬೇಕೆಂಬುದು ಬಡ ವಿದ್ಯಾರ್ಥಿಗಳಿಗೆ ಆತಂಕವನ್ನು ಉಂಟು ಮಾಡಿದೆ ಎಂದು ಸರ್ಕಾರದ ಗಮನಕ್ಕೆ ತಂದರು.
ಕಾಲೇಜು ಶಿಕ್ಷಣ ಇಲಾಖೆ ಮತ್ತು ಸರ್ಕಾರ ನವೆಂಬರ್ 7 ಮತ್ತು 8 ರಂದು ಸರ್ಕಾರ ಮತ್ತು ಆಯಕ್ತಾಲಯದ ಹಂತದಲ್ಲಿ ಶುಲ್ಕ ಪರಿಷ್ಕರಣೆ ಆದೇಶ ಆಗಿದ್ದರೂ ಆದೇಶವನ್ನು ಮುಚ್ಚಿಟ್ಟು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ತರಗತಿ ಆರಂಭವಾದ ನಂತರ ಪ್ರಕಟಿಸಿರುವುದು ಅನುಮಾನವನ್ನು ಹುಟ್ಟಿಸುತ್ತಿದೆ. ಗೊಂದಲಮಯವಾದ ಹಾಗೂ ಬಡ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾದ ಶುಲ್ಕಪರಿಷ್ಕರಣೆ ಆದೇಶವನ್ನು ವಿಳಂಬ ಮಾಡದೇ ವಾಪಾಸು ಪಡೆದು ವಿದ್ಯಾರ್ಥಿಗಳ ಹಿತ ಕಾಪಾಡುವಂತೆ ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post