ಹೌದು… ಅಂತಹುದ್ದೊಂದು ಬಲವಾದ ಅನುಮಾನ ಹಾಗೂ ಕುತೂಹಲಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರ ಹಾಗೂ ಭಾರತೀಯ ಸೇನೆಯ ನಡೆಗಳು ಹುಟ್ಟುಹಾಕಿವೆ. ನಿರೀಕ್ಷೆ ನಿಜವೇ ಆದರೆ, ಶೀಘ್ರದಲ್ಲೇ 2016ರಲ್ಲಿ ನಡೆದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಯುವ ಸಾಧ್ಯತೆಯಿದೆ.
ಮತ್ತೊಂದು ದೊಡ್ಡ ಸರ್ಜಿಕಲ್ ಸ್ಟ್ರೈಕ್ ನಡೆಯುವ ಸಾಧ್ಯತೆಯ ಅನುಮಾನಗಳನ್ನು ಹುಟ್ಟುಹಾಕಿರುವ ಸಂದರ್ಭಗಳ ವಿಶ್ಲೇಷಣೆ ಹೀಗಿದೆ ನೋಡಿ:
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ದೊಡ್ಡ ಉದ್ದೇಶಗಳನ್ನು ಇಟ್ಟುಕೊಂಡಿದ್ದ ಬಿಜೆಪಿ 2016ರಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಪಡೆಯಲು ಸಾಧ್ಯವಾಗದಿದ್ದರೂ ಪಿಡಿಪಿಗೆ ಬೆಂಬಲ ನೀಡಿ, ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ಹಿಡಿಯಿತು. ಈ ಮೂಲಕ ಯಾವಾಗಲೂ ಹೊತ್ತಿ ಉರಿಯುವ ಕಾಶ್ಮೀರವನ್ನು ಹಿಡಿತಕ್ಕೆ ತೆಗೆದುಕೊಳ್ಳಬಹುದು ಎಂಬ ಬಿಜೆಪಿಯ ಆಸೆಗೆ ಮುಖ್ಯಮಂತ್ರಿಯಾಗಿದ್ದ ಮೆಹಬೂಬಾ ಮುಫ್ತಿ ತಣ್ಣೀರು ಎರಚುತ್ತಾ ಬಂದರು.
ಈಗ ರಂಜಾನ್ ತಿಂಗಳಲ್ಲಿ ಶತ್ರುಗಳಿಂದ ನಡೆದ ದಾಳಿಗೆ ಭಾರತದ ಪ್ರತಿದಾಳಿ ಹಾಗೂ ರಂಜಾನ್ ಮುಗಿದೊಡನೆಯೇ ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ಬೇಟೆಯಾಡುವ ಸೇನಾ ಕಾರ್ಯಾಚರಣೆಯನ್ನು ಪುನರಾರಂಭಿಸುವ ಕೇಂದ್ರ ಸರ್ಕಾರದ ನಿರ್ಧಾರ ಪಿಡಿಪಿ ಮುಖ್ಯಸ್ಥೆ ಮತ್ತು ಸಿಎಂ ಮೆಹಬೂಬ ಮುಫ್ತಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಅಲ್ಲಿಗೆ ಮುಫ್ತಿ ಮುಖ್ಯಮಂತ್ರಿಯಾಗಿರುವವರೆಗೂ ತಮ್ಮ ಕಾರ್ಯಾಚರಣೆಗೆ ಅವರ ತೊಡಕಾಗುತ್ತಾರೆ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಜೆಪಿಗೆ ಸ್ಪಷ್ಟವಾಗಿತ್ತು. ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಒಪ್ಪದ ಮೋದಿಯವರ ಇಚ್ಛೆಯಂತೆ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ವಾಪಾಸು ಪಡೆದ ತತಕ್ಷಣ, ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಅರ್ಥಾತ್ ಕೇಂದ್ರ ಸರ್ಕಾರ ಹಿಡಿತ ಸಿಕ್ಕಂತಾಯಿತು. ಅಲ್ಲಿಗೆ, ಉಗ್ರರ ವಿರುದ್ದ ಕಾರ್ಯಾಚರಣೆಗೆ ಅಡ್ಡಿಯಿಲ್ಲ ಎಂದಾಯಿತು.
ಗಡಿಯಲ್ಲಿ ಪಾಕ್ ಸೇನೆ ಹಾಗೂ ಉಗ್ರರ ಉಪಟಳ ತೀರಾ ಹೆಚ್ಚಾಗಿದ್ದು, ಸಚಿವ ರವಿಶಂಕರ್ ಪ್ರಸಾದ್ ನೀಡಿರುವ ಅಂಕಿಅಂಶದಂತೆ 2017ರಲ್ಲಿ 217 ಹಾಗೂ 2018ರ ಮೇ ತಿಂಗಳವರೆಗೂ 75 ಉಗ್ರರನ್ನು ಬೇಟೆಯಾಡಲಾಗಿದೆ. ಇದೇ ವೇಳೆ ನಮ್ಮ ಸೈನಿಕರಲ್ಲಿ ಹಲವರು ವೀರಸ್ವರ್ಗವನ್ನೂ ಸೇರಿದ್ದಾರೆ. ಗಡಿಯಲ್ಲಿ ಇವರ ಉಪಟಳವಾದರೆ, ರಾಜ್ಯದೊಳಗೆ ಪ್ರತ್ಯೇಕತಾವಾದಿಗಳ ಹಾವಳಿಯಿದೆ. ಸೈನಿಕರಿಗೆ ಕಲ್ಲು ಹೊಡೆಯುವುದು, ದಾಂಧಲೆ ಎಬ್ಬಿಸುವುದು ಹೀಗೆ.
ಇನ್ನು, ಮುಫ್ತಿ ಸರ್ಕಾರ ಪತನಗೊಳ್ಳುವ ಮುನ್ನ ಬಿಜೆಪಿ ಕಚೇರಿಯಲ್ಲಿ ರಾಜಕೀಯ ತಂತ್ರಗಾರಿಕೆಯ ಸಭೆ ನಡೆದಿದ್ದು, ಅದೇ ವೇಳೆ ಗೃಹ ಸಚಿವ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಉಪಸ್ಥಿತಿಯಲ್ಲಿ ಸಭೆ ನಡೆದಿದ್ದು, ಇದರ ಬೆನ್ನಲ್ಲೇ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂತೆಗೆದಿದ್ದು ನೋಡಿದರೆ ಆಶ್ಚರ್ಯವೆನಿಸುತ್ತದೆ.
ಇನ್ನೊಂದೆಡೆ, ಅಮರನಾಥ ಯಾತ್ರೆ ಆರಂಭವಾಗಿದ್ದು, ಮೋಸ್‌ಟ್ ವಾಂಟೆಡ್ ಎನಿಸಿರುವ ಸುಮಾರು 21 ಉಗ್ರ ನಾಯಕರ ನೇತೃತ್ವದಲ್ಲಿ ಭಯೋತ್ಪಾದಕರು ದಾಳಿ ನಡೆಸಲು ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದಕ್ಕಾಗಿ ಬಿಎಸ್‌ಎಫ್ ಸ್ನೈಪರ್ ತಂಡವನ್ನು ವಿಶೇಷವಾಗಿ ತರಬೇತುಗೊಳಿಸಿ ನಿಯೋಜನೆ ಮಾಡಲಾಗುತ್ತಿದೆ.
ಮತ್ತೊಂದೆಡೆ, ಇದ್ದಕ್ಕಿಂದತೆಯೇ, ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ) ಯ ಸುಮಾರು 14 ಯೋಧರಿಗೆ ಸ್ನೈಪರ್ ವಿಶೇಷ ತರಬೇತಿ ಆರಂಭವಾಗಿದ್ದು, ಸುಮಾರು 100 ಯೋಧರಿಗೆ ಇನ್ನೊಂದು ತಿಂಗಳ ಒಳಗಾಗಿ ಈ ತರಬೇತಿ ನೀಡಲಾಗುತ್ತದೆ ಎಂದು ವರದಿಯಾಗಿದೆ.
ಎಲ್ಲಕ್ಕೂ ಪ್ರಮುಖವಾಗಿ, ಜಮ್ಮು ಕಾಶ್ಮೀರದ ರಾಜ್ಯಪಾಲರ ಸಲಹೆಗಾರರನ್ನಾಗಿ ನಿವೃತ್ತ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಅವರನ್ನು ಮೋದಿ ಸರ್ಕಾರ ನೇಮಿಸಿದೆ.
ವಿಜಯ್ ಕುಮಾರ್: ಈ ಹೆಸರು ಕೇಳಿದರೇ ಕ್ರಿಮಿನಲ್‌ಗಳ ಚೆಡ್ಡಿ ಒದ್ದೆಯಾಗುತ್ತದೆ. ಹೌದು ಆ ವ್ಯಕ್ತಿ ದಕ್ಷಿಣ ಭಾರತವನ್ನೇ ನಡುಗಿಸಿ, 35 ವರ್ಷಗಳ ಕಾಲ ಮೂರು ರಾಜ್ಯಗಳಿಗೆ ತಲೆ ನೋವಾಗಿ ಪರಿಣಮಿಸಿ, ಇನ್ನಿಲ್ಲದಂತೆ ಕಾಡಿದ್ದ ನರಹಂತಕ, ದಂತಚೋರ ವೀರಪ್ಪನ್ ನನ್ನು ತಮ್ಮ ಬುದ್ದಿವಂತಿಕೆಯಿಂದ ಅರಣ್ಯದಿಂದ ಹೊರಕ್ಕೆ ಬರುವಂತೆ ಮಾಡಿ ಹೊಡೆದುರುಳಿಸಿದ ದಕ್ಷ ಹಾಗೂ ಚಾಣಾಕ್ಷ ಅಧಿಕಾರಿ ಇವರು.
ಇವರ ಬುದ್ದಿವಂತಿಕೆಗೆ ಹಾಗೂ ಸೇವೆಯನ್ನು ಪರಿಗಣಿಸಿದ್ದ ಮೋದಿ ಸರ್ಕಾರ ಅವರನ್ನು ಕೇಂದ್ರ ಗೃಹ ಸಚಿವಾಲಯದಲ್ಲಿ ಹಿರಿಯ ಭದ್ರತಾ ಸಲಹೆಗಾರರಗಾಗಿ ಸೇವೆ ಸಲ್ಲಿಸಿಕೊಂಡಿತ್ತು. ಇಂತಹ ಅಧಿಕಾರಿಯನ್ನು ಏಕಾಏಕಿ ಜಮ್ಮು ಕಾಶ್ಮೀರಕ್ಕೆ ಸರ್ಕಾರ ನೇಮಿಸಿರುವ ಹಿಂದೆ ದೊಡ್ಡ ಮಟ್ಟದ ಗುರಿ ಇದ್ದಿರಲೇಬೇಕು.
ಈ ಎಲ್ಲಾ ವಿಚಾರಗಳ ಜೊತೆಯಲ್ಲಿ ಕಳೆದ ಒಂದು ವಾರದಿಂದ ಗಡಿಯಲ್ಲಿ ಉಗ್ರರ ಹಾವಳಿ ಹೆಚ್ಚಾಗಿದೆ. ಇಂದು ಒಂದೇ ದಿನ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಅಟ್ಟಾಡಿಸಿ ಕೊಂದಿದೆ. ಅಲ್ಲಿಗೆ ಸೇನೆ ಶತ್ರುಗಳ ವಿರುದ್ಧ ವ್ಯಘ್ರಗೊಂಡಿದೆ.
ಇನ್ನೊಂದೆಡೆ, ಹೇಗಾದರೂ ಮಾಡಿ ಕಾಶ್ಮೀರವನ್ನು ಹತೋಟಿಗೆ ತೆಗೆದುಕೊಂಡು, ಶಾಂತಿ ನೆಲೆಸುವಂತೆ ಮಾಡಬೇಕು ಎಂಬ ಗುರಿಯನ್ನು ಮೋದಿ ಸರ್ಕಾರ ಹೊಂದಿದೆ.
ಈ ಎಲ್ಲ ಅಂಶಗಳನ್ನು ಕೂಲಂಕಶವಾಗಿ ಚಿಂತಿಸಿದರೆ, ಶೀಘ್ರದಲ್ಲೇ ದೊಡ್ಡ ಮಟ್ಟದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ತಡೆದುಕೊಳ್ಳಲಾರದ ಪೆಟ್ಟು ನೀಡಿ, ಶತ್ರುಗಳ ಹೆಡೆಮುರಿ ಕಟ್ಟಲು ಮೋದಿ ಸರ್ಕಾರ ಹಾಗೂ ಸೇನೆ ಯೋಜನೆ ರೂಪಿಸಿದೆ ಎಂಬ ಬಲವಾದ ಅನುಮಾನಗಳು ವ್ಯಕ್ತವಾಗುತ್ತವೆ.
ಒಂದು ವೇಳೆ ಇದು ನಿಜವೇ ಆದರೆ, ಈ ಬಾರಿ ಇಡಿಯ ವಿಶ್ವವೇ ತಿರುಗಿ ನೋಡುವಂತೆ ಶತ್ರುಗಳನ್ನು ಹುಟ್ಟಡಗಿಸಲಿದೆ ಸೇನೆ. ಆ ಮೂಲಕ ಕಾಶ್ಮೀರವನ್ನು ಕೇಂದ್ರ ಸರ್ಕಾರ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡರೂ ಆಶ್ಚರ್ಯವಿಲ್ಲ.
ಏನಾಗಲಿದೆ? ಕಾದು ನೋಡಬೇಕಷ್ಟೇ!!
-ಎಸ್.ಆರ್. ಅನಿರುದ್ಧ ವಸಿಷ್ಠ
9008761663
Discussion about this post