ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಲೆಯಿಂದಾಗಿ ಕಲಾವಿದರು ವಿಜೃಂಭಿಸುವುದು ಎಷ್ಟು ಸತ್ಯವೋ ಕಲಾವಿದರಿಂದಾಗಿ ಕಲೆಯೂ ವಿಜೃಂಭಿಸುವುದು ಅಷ್ಟೇ ಸತ್ಯವಾದ ಮಾತು. ಕೆಲವು ಕಲಾವಿದರು ಆ ನಿರ್ದಿಷ್ಟವಾದ ಕಲೆಗಾಗಿಯೇ ಜನ್ಮ ತಳೆದು ಬಂದಿರುವರೋ ಏನೋ ಎಂದೆಣಿಸುತ್ತದೆ. ಹಾಗೆಯೇ ಕೆಲವು ಕಲೆಗಳು ಆ ನಿರ್ದಿಷ್ಟ ಕಲಾವಿದರಿಗಾಗಿಯೇ ಮೈತಳೆದಿವೆಯೋ ಎನ್ನುವಂತೆ ಭಾಸವಾಗುತ್ತದೆ. ಕೆಲವು ಕಲಾ ಪ್ರಕಾರಗಳು ಪಾರಂಪರಿಕವಾಗಿ ಆಯ್ದ ಕೆಲವು ಗುರುಶಿಷ್ಯರಿಗೆ, ಕುಟುಂಬ ಸದಸ್ಯರಿಗೆ, ತಂದೆ ಮಕ್ಕಳಿಗೆ ಒಲಿದು ನಿಂತಿದೆಯೋ ಎನ್ನುವಷ್ಟು ಹೊಂದಿಕೊಂಡಿರುತ್ತವೆ. ಇದನ್ನೇ ಘರನಾ, ಮಟ್ಟು, ತಿಟ್ಟು, ಶೈಲಿ, ಕ್ರಮ, ಪದ್ಧತಿಗಳೆಂದು ನಾವು ಕರೆಯುತ್ತೇವೆ. ಈ ಪರಂಪರಾಗತ ಪ್ರಸಿದ್ಧಿ ಹಾಗೂ ಜನಪ್ರಿಯತೆಗಳು ಶಾಸ್ತ್ರೀಯ, ಜಾನಪದ ಅಥವಾ ಆಧುನಿಕ ಕಲಾ ಪ್ರಕಾರಗಳಲ್ಲಿಯೂ ಮುಂದುವರೆಯುತ್ತಿದೆ. ಕೆಲವು ಕಲೆಗಳು ಪರಂಪರಾಗತವಾಗಿ ಹಲವಾರು ತಲೆಮಾರುಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿರುತ್ತದೆ.
ಮನೆತನದ ಹಿರಿಯರಿಂದ ಅನೇಕ ಕಲೆಗಳು ಕಿರಿಯರಿಗೆ ವರ್ಗಾವಣೆಗೊಳ್ಳುತ್ತ ಸಾಗುತ್ತಿರುತ್ತವೆ. ಹೀಗೆ ವರ್ಗಾವಣೆಗೊಳ್ಳಲು ಅನೇಕ ಕಾರಣಗಳಿರಬಹುದು. ಪರಂಪರಾಗತವಾಗಿ ನಡೆದು ಬಂದ ಕಲೆಯ ಕುರಿತಾದ ಒಡಲ ಒಲವು. ನಂಬಿದ ಕಲೆ ಕೈಬಿಡದೆ ಬದುಕು ಕೈಗೂಡಿಸುತ್ತದೆ ಎನ್ನುವ ರಕ್ತಗತ ನಂಬಿಕೆಯೂ ಕಾರಣವಾಗಿರಬಹುದು. ಕಲೆ ಪರಂಪರಾಗತವಾಗಿ ಬಂದಿದ್ದರೂ ಇದನ್ನು ಒಲಿಸಿಕೊಳ್ಳುವ ಕುಟುಂಬ ಸದಸ್ಯರು ಸಾಧನೆಯೆಂಬ ತಪಸ್ಸನ್ನಂತೂ ಮಾಡಲೇ ಬೇಕಾಗುತ್ತದೆ. ಯಾಕೆಂದರೆ ಮನುಷ್ಯನಿಗೆ ಮೊದಲು ತಾನು ಮಾಡುವ ಕೆಲಸದ ಮೇಲೆ ಅಚಲವಾದ ನಂಬಿಕೆ, ಶ್ರದ್ಧೆ, ಸ್ವಾಭಿಮಾನವೂ ಬೇಕಾಗುತ್ತದೆ. ಹೀಗಿದ್ದಾಗ ಮಾತ್ರ ಪರಂಪರೆಯಿಂದ ಬಂದ ಕಲೆಗಳನ್ನು ಮುಂದುವರಿಸಿಕೊಂಡು ಹೋಗುವುದು ಸಾಧ್ಯವಾಗಬಹುದು.
ಎಸ್’ಪಿಬಿ ನೆನೆದು ಕಣ್ಣೀರು ಹಾಕಿದ ಎಸ್. ಜಾನಕಿ ಹೇಳಿದ್ದೇನು?
ಹಿರಿಯರ ಅಭಿರುಚಿಗಳು ಬೆಳೆಯುವ ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ಹಿರಿಯರು ಕಲಾಭಿರುಚಿಗಳನ್ನು ಬೆಳೆಸಿಕೊಂಡಾಗ ಮಕ್ಕಳಿಂದಲೂ ಕಲೆ, ಸಂಗೀತ, ಸಾಹಿತ್ಯದ ಸಂರಚನೆಗಳು ಮೂಡಿಬರಲು ಸಾಧ್ಯವೆಂದು ತಿಳಿದವರು ಅಭಿಪ್ರಾಯ ಪಡುತ್ತಾರೆ. ಈ ಕಿರಿಯರ ಮೇಲೂ ಮಹತ್ತರವಾದ ಜವಾಬ್ದಾರಿಯೊಂದು ಇದೆ. ಹಿರಿಯರಿಂದ ಬಳುವಳಿಯಾಗಿ ಬಂದ ಕಲೆಯನ್ನು ಉಳಿಸಿ ಬೆಳೆಸಿಕೊಳ್ಳುವುದರ ಜೊತೆಗೆ ಅದನ್ನು ಮುಂದಿನ ತಲೆಮಾರಿಗೂ ಪರಿಚಯಿಸಬೇಕಾಗಿದೆ. ಕಲೆಯನ್ನು ಮನುಷ್ಯರ ಆಲೋಚನೆಯ ವಿಶೇಷ ಸಾಮರ್ಥ್ಯವೆಂದು ಪರಿಗಣಿಸಲಾಗುತ್ತದೆ. ಅಥವಾ ಸಾಮಾನ್ಯವಾಗಿ ಕಲೆಯು ಯೋಚನೆ ಮತ್ತು ಭಾವನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಸೃಜಿಸಲ್ಪಡುತ್ತದೆ ಎನ್ನಲಾಗುತ್ತದೆ.
ಸಾತ್ವಿಕ್ ನೆಲ್ಲಿತೀರ್ಥ ಅವರು ತಮ್ಮ ವಿದ್ಯಾರ್ಥಿ ದೆಸೆಯಲ್ಲಿಯೇ ಹಲವು ಮಹತ್ತರವಾದ ಕಲಾಕೃತಿಗಳನ್ನು ಸೃಜಿಸಿದವರು. ಸಾತ್ವಿಕ್ ಅವರ ತಂದೆ ದಿವಂಗತ ಭಾಸ್ಕರ ನೆಲ್ಲಿತೀರ್ಥ ಹಾಗೂ ತಾಯಿ ವಿಶಾಲ ಅವರು ಸದ್ಗೃಹಿಣಿ. ಅಣ್ಣ ಸವಿನಯ. ಸಾತ್ವಿಕ್ ಅವರ ಪರಿವಾರ ಮೂಡಬಿದ್ರೆ ಸಮೀಪದ ಮಿಜಾರಿನಲ್ಲಿ ನೆಲೆಸಿದೆ. ಸಾತ್ವಿಕ್ ನೆಲ್ಲಿತೀರ್ಥ ಅವರು ಜನಿಸಿದ್ದು ಕುದುರೆಮುಖದಲ್ಲಿ. ಕುದುರೆಮುಖದ ಗಿರಿ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಿಂದ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದವರು. ಪ್ರೌಢ ಶಿಕ್ಷಣವನ್ನು ಮಹಾತ್ಮ ಗಾಂಧಿ ಆಂಗ್ಲ ಮಾಧ್ಯಮ ಶಾಲೆ, ಬೋಂದೆಲ್, ಮಂಗಳೂರು ಇಲ್ಲಿಂದ ಮಾಡಿದವರು. ಪದವಿ ಪೂರ್ವ ಶಿಕ್ಷಣವನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದವರು. ಪ್ರಸ್ತುತ ಆಳ್ವಾಸ್ ಕಾಲೇಜಿನ ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಸ್ನಾತಕ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿ. ಸಾತ್ವಿಕ್ ಅವರು ಬೆಳೆದು ಬಂದ ಕೌಟುಂಬಿಕ ಹಿನ್ನೆಲೆಯಲ್ಲಿಯೇ ಸಾಂಸ್ಕೃತಿಕ ಕಲರವವಿದೆ. ಸಾತ್ವಿಕ್ ಅವರ ತಂದೆ ಭಾಸ್ಕರ್ ನೆಲ್ಲಿತೀರ್ಥ ಅವರು ಹಿರಿಯ ರಂಗಭೂಮಿ ಕಲಾವಿದರಾಗಿ, ತುಳು ವಿದ್ವಾಂಸರಾಗಿ,ಯಕ್ಷಗಾನ ತಾಳಮದ್ದಲೆ ಅರ್ಥಧಾರಿಯಾಗಿ, ಚಲನಚಿತ್ರ ನಟರಾಗಿಯೂ ಇದ್ದವರು.
ಸಾತ್ವಿಕ್ ಅವರು ಹುಟ್ಟಿ, ಬೆಳೆಯುತ್ತ ಕಣ್ತೆರೆದದ್ದು ಸಾಂಸ್ಕೃತಿಕ ವಾತಾವರಣದ ಕೌಟುಂಬಿಕ ವಲಯದಲ್ಲಿ. ಅವರ ತಂದೆಯ ಸೋದರಾದ ಅಚ್ಯುತ ಅವರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು. ಜಯಾನಂದ, ಪದ್ಮನಾಭ, ಸಂತೋಷ ಇವರೆಲ್ಲ ನಟನೆ ಮುಂತಾದ ಒಂದಲ್ಲ ಒಂದು ಕಲಾ ಕೈಂಕರ್ಯದಲ್ಲಿ ತೊಡಗಿಸಿಕೊಂಡವರು. ಆದ್ದರಿಂದ ಸಾತ್ವಿಕ್ ಅವರು ಒಂದಲ್ಲ ಎರಡಲ್ಲ ಹಲವು ಹವ್ಯಾಸಗಳನ್ನು ಮೈಗೊಡಿಸಿಗೊಂಡೇ ಬಾಲ್ಯ, ಕೌಮಾರ್ಯವನ್ನು ದಾಟುತ್ತ ಯುವಾವಸ್ಥೆಗೆ ಕಾಲಿಟ್ಟವರು. ಅಣ್ಣ ಸವಿನಯ ಅವರೂ ಯಕ್ಷಗಾನದ ಹಿಮ್ಮೇಳ ಮುಮ್ಮೇಳ ಕಲಾವಿದರು. ತಂದೆ ಹಾಗೂ ಅಣ್ಣನ ಕೈಹಿಡಿದು ಸಾಗಿದ ಸಾತ್ವಿಕ್ ಅವರನ್ನು ಯಕ್ಷಗಾನ ಕೈಬೀಸಿ ಕರೆಯಿತು. ನಾಟಕ, ಚಿತ್ರಕಲೆ, ಛಾಯಾಗ್ರಹಣ, ಶಿಲ್ಪರಚನೆ, ಯಕ್ಷಗಾನದ ಬಣ್ಣದ ವೇಷದ ಮುಖವರ್ಣಿಕೆಗಳನ್ನು ತಯಾರಿಸುವುದು. ಕಿರುತೆರೆ, ತುಳು ಚಲನಚಿತ್ರ ಮುಂತಾದ ಕ್ಷೇತ್ರಗಳನ್ನು ತಮ್ಮ ಸ್ವಂತ ಸಾಧನೆಯ ಬಲ್ಪಿನಿಂದ ಒಳಹೊಕ್ಕವರು.
ತಂದೆ ಹಾಗೂ ದೊಡ್ಡಪ್ಪ, ಚಿಕ್ಕಪ್ಪಂದಿರ ಪ್ರೇರಣೆಯಿಂದಲೂ ತನ್ನೊಳಗಿರುವ ಕಲೆಯ ಮೇಲಿನ ತುಡಿತದಿಂದಲೂ ಸಾತ್ವಿಕ್ ಅವರು ಮುಂದುವರಿದು ಸ್ಥೂಲ ಛಾಯಾಗ್ರಹಣ (Marco Photography), ಪ್ರಕೃತಿ ಛಾಯಾಗ್ರಹಣ (Nature Photography) ವ್ಯಕ್ತಿಚಿತ್ರ (Portrait) ಸಮಕಾಲೀನ ಚಿತ್ರಕಲೆ (Contemporary Painting) ಭಿತ್ತಿಚಿತ್ರ (Painting) ಮಿಶ್ರಿತ ಮಾಧ್ಯಮ ಕಲೆ (Mixed Media Works) ಮರಳಿನಲ್ಲಿ ಕಲೆ (Sand Arts) ಪಾರಂಪರಿಕ ಮರದ ಕಲಾಕೃತಿ (Wood Arts) ಮೊದಲಾದ ಕ್ಷೇತ್ರಗಳಲ್ಲಿ ಪರಿಣತಿಯನ್ನು ಪಡೆದವರು. ಗಣೇಶೋತ್ಸವಕ್ಕಾಗಿ ಸ್ತಬ್ಧ ಚಿತ್ರ (Tableau) ಗಳನ್ನು ತಯಾರಿಸುತ್ತಾರೆ. ಮೂಡಬಿದ್ರೆ ಗಣೇಶೋತ್ಸವಕ್ಕಾಗಿ ರಚಿಸಿದ ಭಗವಾನ್ ನಿತ್ಯಾನಂದರ ಸ್ತಬ್ಧಚಿತ್ರ ನೋಡುಗರ ಕಣ್ಮನ ಸೆಳೆದಿತ್ತು. ಸಾತ್ವಿಕ್ ಅವರು ಯಕ್ಷಗಾನ ಕ್ಷೇತ್ರದಲ್ಲಿ ಹವ್ಯಾಸಿ ಕಲಾವಿದನಾಗಿ ಹಲವು ಮೇಳಗಳಲ್ಲಿ ಭಾಗವಹಿಸಿದ್ದಾರೆ. ಯಕ್ಷಗಾನದ ಪ್ರಸಾದನ ಕಲೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಯಕ್ಷಗಾನದಲ್ಲಿ ಮಹಿಷಾಸುರ, ಶುಂಭ, ನಿಶುಂಭ, ದೇವೇಂದ್ರ, ಶೂರ್ಪನಕಿ, ತಾಟಕಿ, ರಾವಣ, ದೇವಿ, ಈಶ್ವರ, ರುಕ್ಮಾಂಗ, ಶುಭಾಂಗ, ವಿದ್ಯುನ್ಮಾಲಿ ಹೀಗೆ ನೂರೈವತ್ತಕ್ಕೂ ಅಧಿಕ ಪಾತ್ರಗಳಿಗೆ ಜೀವ ತುಂಬಿದ ಅನುಭವಿ ಕಲಾವಿದ.
ಸುಹಾನ್ ಪ್ರಸಾದ್ ನಿರ್ದೇಶನದ ’ರಂಗ್’ ತುಳು ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಿರುತೆರೆಯ ಹಿಂದಿ ಧಾರಾವಾಹಿ ’ಪೋರಸ್’, ಸ್ಪಂದನ ವಾಹಿನಿಯ ’ಕುಕ್ಕುದಕಟ್ಟೆ ಕುಸಾಲ್’ ಕಾರ್ಯಕ್ರಮಗಳಲ್ಲಿ ಅಭಿನಯಿಸಿದ್ದಾರೆ. ಕೆ.ಡಿ. ಕ್ರಿಯೇಷನ್ ಅವರ ’ತಾಯಿಯೇ’ ಎಂಬ ಅಲ್ಬಂನಲ್ಲಿ ಅಭಿನಯಿಸಿದ್ದಾರೆ. ಹುತ್ತವ ಬಡಿದರೆ, ಅಳಿಲು ರಾಮಾಯಣ, ನವರಸಭಾರತ, ನಂದಗೋಕುಲದ ನಂದಾದೀಪ ಮುಂತಾದ ನಾಟಕ ಹಾಗೂ ರೂಪಕಗಳಲ್ಲಿ ಅಭಿನಯಿಸಿದ್ದಾರೆ. ನೇಪಥ್ಯ ಕಲಾವಿದನಾಗಿಯೂ ಅನುಭವಿ. ಹಲವು ದೂರದರ್ಶನ ವಾಹಿನಿಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಸಾತ್ವಿಕ್ ಹಾಗೂ ಅವರಂತಿರುವ ಕಲಾವಿದರ ಸುಪ್ತವಾದ ಪ್ರತಿಭೆಯನ್ನು ಲೋಕಮುಖಗೊಳಿಸುವಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಸಂಸ್ಥೆಯು ಕಟಿಬದ್ಧವಾಗಿ ನಿಂತಿದೆ. ಆಳ್ವಾಸ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವ ಹಾಗೂ ವಿಶ್ವಸ್ಥರಾಗಿರುವ ವಿವೇಕ್ ಆಳ್ವರ ನಿರಂತರ ಪ್ರೋತ್ಸಾಹ ಹಾಗೂ ಮೆಚ್ಚುಗೆಯ ನುಡಿಗಳು ನನ್ನನ್ನು ಸದಾ ಪ್ರೇರೇಪಿಸುತ್ತದೆ ಎನ್ನುತ್ತಾರೆ.
ವಾರ ಭವಿಷ್ಯ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 27.09.2020 ರಿಂದ 03.10.2020
ಸಾಧನೆಗೆ ಸಂದ ಗೌರವಗಳು
ಅಂತರ್ ಕಾಲೇಜು ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ. ಗೋವಿಂದಾಸ್ ಕಾಲೇಜಿನಲ್ಲಿ ನಡೆದಿದ್ದ ಯಕ್ಷಗಾನ 2019 ರಲ್ಲಿ ಪಾಂಚಜನ್ಯ ಪ್ರಸಂಗದ ’ಪಂಚಜನ’ ಬಣ್ಣದ ವೇಷಕ್ಕೆ ಪ್ರಥಮ ಬಹುಮಾನ. ಎಸ್’ಡಿಎಂ ಕಾನೂನು ಕಾಲೇಜ್ ಇಲ್ಲಿ ನಡೆದ ಯಕ್ಷೋತ್ಸವ 2020 ಸ್ಪರ್ಧೆಯಲ್ಲಿ ತರಣಿಸೇನ ಕಾಳಗ ಪ್ರಸಂಗದ ’ರಾವಣ’ ಪಾತ್ರಕ್ಕೆ ಪ್ರೋತ್ಸಾಹಕರ ಬಹುಮಾನ. ಅಂತರ್ ಕಾಲೇಜು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ. ಸುರತ್ಕಲ್ ನ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ನಡೆದ ಮುಖವರ್ಣಿಕೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
ಮೂಡಬಿದರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವರ್ಷಂಪ್ರತಿಯಂತೆ ಚೌಟರಾಣಿ ಅಬ್ಬಕ್ಕನ ಸಂಸ್ಕರಣೆ ನಡೆಯುತ್ತದೆ. 74ನೆಯ ಸ್ವಾತಂತ್ರ್ಯ ದಿನದ ಸಲುವಾಗಿ ಜವನೆರ್ ಬೆದ್ರ ತಂಡದ ಕೋರಿಕೆಯಂತೆ ಸಾತ್ವಿಕ್ ಅವರು ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕನ ಪ್ರತಿಕೃತಿ ರಚಿಸಿದ್ದಾರೆ. ಈ ಕಲಾಕೃತಿ ಆ್ಯಕ್ರಲಿಕ್ ಪೇಂಟಿಂಗ್ ನಲ್ಲಿ ಪಡಿಮೂಡಿದೆ. ಪೋರ್ಚುಗೀಸರೊಂದಿಗೆ ಹೋರಾಟ ನಡೆಸುವ ಸನ್ನಿವೇಶದ ಈ ಕಲಾಕೃತಿಯಲ್ಲಿ ರಾಣಿ ಅಬ್ಬಕ್ಕ ಧವಳ ವಸ್ತ್ರದಲ್ಲಿ ವೀರ ಗಂಡುಕಚ್ಛೆ ಧರಿಸಿ ವೀರಾವೇಶದಿಂದ ಹೇಷಾರವ ಮಾಡುತ್ತಿರುವ ತುರಗದ ಬೆನ್ನೇರಿ ಕೈಯಲ್ಲಿ ದಗಿಸುವ ಪಂಜು ಹಿಡಿದು ಕುಳಿತಿದ್ದಾಳೆ. ಸಾತ್ವಿಕ್ ಅವರ ಕೈಚಳಕ ಹಾಗೂ ಸರ್ವ ಪ್ರಯತ್ನಗಳ ಮೂಲಕ ಸೃಜಿಸಲ್ಪಟ್ಟ ಈ ಕಲಾಕೃತಿಯು ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಕೋವಿಡ್ 19ರ ಕಾರಣದಿಂದ ಕಾರ್ಯಕ್ರಮ ಮುಂದೂಡಲ್ಪಟ್ಟಿದ್ದು ಕಲಾಕೃತಿಯನ್ನು ಅಬ್ಬಕ್ಕನ ವಂಶಸ್ಥರಾದ ಕುಲದೀಪ್ ಎಂ. ಅವರಿಗೆ ಹಸ್ತಾಂತರಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾದ ಈ ಅಪೂರ್ವವಾದ ಕಲಾಕೃತಿ ಸಾಕಷ್ಟು ವೈರಲ್ ಆಗಿ ಮೆಚ್ಚುಗೆ ಪ್ರಾಪ್ತಿಯಾಗಿದೆ.
ಈ ವರ್ಷ BVA ಸ್ನಾತಕ ಪದವಿಯನ್ನು ಪೂರ್ಣಗೊಳಿಸಲಿರುವ ಸಾತ್ವಿಕ್ ನೆಲ್ಲಿತೀರ್ಥ ಅವರು ಕಲಾ ಜಗತ್ತಿನಲ್ಲಿ ಒಬ್ಬ ಒಳ್ಳೆಯ ಕಲಾವಿದನಾಗಿಯೂ, ಚಲನಚಿತ್ರ ನಟನಾಗಿಯೂ ಗುರುತಿಸಿಕೊಳ್ಳುವ ಕನಸನ್ನು ಹೊಂದಿದ್ದಾರೆ. ತನ್ನ ಎಲ್ಲ ಕಲಾ ಸಾಧನೆಯ ಹಿಂದೆ ಗುರು ಸ್ಥಾನದಲ್ಲಿದ್ದ ತಂದೆಯವರ ಆಶೀರ್ವಾದವಿದೆ ಎಂದು ವಿನಮ್ರವಾಗಿ ನುಡಿಯುತ್ತಾರೆ. ಸಾತ್ವಿಕ್ ಅವರ ಎಲ್ಲ ಹಿರಿದಾದ ಕನಸುಗಳು ನನಸಾಗಲಿ. ಕಲಾದೇವಿ ಸರ್ವ ರೀತಿಯಿಂದ ಅನುಗ್ರಹಿಸಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post