ಕಲ್ಪ ಮೀಡಿಯಾ ಹೌಸ್ | ಮುಂಬೈ |
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈ ಮತ್ತು ಹೊಸಪೇಟೆ (Mumbai-Hospete) ನಡುವೆ ಪ್ರತಿದಿನ ಸಂಚರಿಸುವ ಎಕ್ಸ್ಪ್ರೆಸ್ ರೈಲುಗಳ (Express Train) ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿ ಸುದ್ದಿ ನೀಡಿದೆ. ರೈಲುಗಳ ಹಳೆಯ ಐಸಿಎಫ್ ಬೋಗಿಗಳನ್ನು ಬದಲಾಯಿಸಿ, ಆಧುನಿಕ ತಂತ್ರಜ್ಞಾನ ಹೊಂದಿರುವ ಎಲ್ಎಚ್ಬಿ (LHB) ಬೋಗಿಗಳನ್ನು ಅಳವಡಿಸಲು ಮಧ್ಯ ರೈಲ್ವೆ ನಿರ್ಧರಿಸಿದೆ.
ಈ ಬದಲಾವಣೆಯ ಹಿನ್ನೆಲೆಯಲ್ಲಿ ರೈಲು ಸಂಖ್ಯೆ 11139 ಸಿಎಸ್ಎಂಟಿ ಮುಂಬೈ–ಹೊಸಪೇಟೆ ಎಕ್ಸ್ಪ್ರೆಸ್ ರೈಲು 2027ರ ಜನವರಿ 10ರಿಂದ ಮುಂಬೈನಿಂದ ಹೊಸ ಎಲ್ಎಚ್ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 11140 ಹೊಸಪೇಟೆ–ಸಿಎಸ್ಎಂಟಿ ಮುಂಬೈ ಎಕ್ಸ್ಪ್ರೆಸ್ ರೈಲು 2027ರ ಜನವರಿ 11ರಿಂದ ಹೊಸಪೇಟೆಯಿಂದ ನೂತನ ಬೋಗಿಗಳೊಂದಿಗೆ ತನ್ನ ಸೇವೆ ಆರಂಭಿಸಲಿದೆ.

18 ಎಲ್ಎಚ್ಬಿ ಬೋಗಿಗಳ ವ್ಯವಸ್ಥೆ
ಪ್ರಸ್ತುತ ಸಂಚರಿಸುತ್ತಿರುವ ಐಸಿಎಫ್ ಬೋಗಿಗಳ ರೇಕ್ ಬದಲಿಗೆ ಒಟ್ಟು 18 ಎಲ್ಎಚ್ಬಿ ಬೋಗಿಗಳ ರೇಕ್ ರೈಲಿಗೆ ಅಳವಡಿಕೆಯಾಗಲಿದೆ. ಇದರಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ದರ್ಜೆಯ ಬೋಗಿಗಳನ್ನು ವ್ಯವಸ್ಥೆಗೊಳಿಸಲಾಗಿದೆ.
Also Read>> ತಿಪಟೂರು ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ರೈಲ್ವೆ ಸಚಿವ ವಿ. ಸೋಮಣ್ಣ
ನೂತನ ರೇಕ್ನಲ್ಲಿ 1 ಎಸಿ 2-ಟೈರ್, 3 ಎಸಿ 3-ಟೈರ್, 6 ಸ್ಲೀಪರ್ ಕ್ಲಾಸ್ ಹಾಗೂ 6 ದ್ವಿತೀಯ ದರ್ಜೆಯ ಬೋಗಿಗಳು ಇರಲಿವೆ. ಇದರೊಂದಿಗೆ 1 ಲಗೇಜ್-ಕಮ್-ಬ್ರೇಕ್ ವ್ಯಾನ್ ಮತ್ತು ಜನರೇಟರ್ ಕಾರ್ ಹಾಗೂ ವಿಕಲಚೇತನ ಸ್ನೇಹಿ ಸೌಲಭ್ಯ ಹೊಂದಿರುವ 1 ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ ಕೂಡ ಇರಲಿದೆ.
ಈ ಬದಲಾವಣೆಯಿಂದ ಮುಂಬೈ ಮತ್ತು ಹೊಸಪೇಟೆ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಆಧುನಿಕ ಎಲ್ಎಚ್ಬಿ ಬೋಗಿಗಳಲ್ಲಿ ಸಂಚರಿಸುವ ಅವಕಾಶ ದೊರೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









