ಹೌದು… ನಾನೂ ಸಹ ಇದೇನು ಚಿತ್ರ ಬಿಡು ನೋಡೋದು ಎಂದು ಕೊಂಚ ತಾತ್ಸಾರ ಮಾಡಿದ್ದೆ.. ಆದರೆ, ಮೊನ್ನೆ ಏಕೋ ಹಲವು ಬಾರಿ ಟ್ರೇಲರ್ ನೋಡಿದ ಮೇಲೆ ಚಿತ್ರವನ್ನೊಮ್ಮೆ ನೋಡಲೇಬೇಕು ಎಂಬ ಕುತೂಹಲದಿಂದ ವೀಕ್ಷಿಸಿದೆ.
ನಿಜಕ್ಕೂ ಹೇಳುತ್ತೇನೆ, ಈ ಚಿತ್ರವನ್ನು ನಾನು ನೋಡಿರದೇ ಇದ್ದರೆ ಮನೋರಂಜನೆ, ಜ್ಞಾನ ಹಾಗೂ ಸಾಮಾಜಿಕ ಜಾಗೃತಿ ವಿಚಾರದಲ್ಲಿ ನನಗೇ ದೊಡ್ಡ ನಷ್ಟವಾಗುತ್ತಿತ್ತು. ಹೀಗಾಗಿಯೇ, ಈ ಚಿತ್ರ ಬಿಡುಗಡೆಯಾಗಿ ಇಷ್ಟು ದಿನದ ನಂತರ ಬರೆಯುತ್ತಿದ್ದೇನೆ.
ಓರ್ವ ಸ್ಟಾರ್ ನಟ, ನಟಿ, ರೊಮ್ಯಾನ್ಸ್, ಪ್ರೇಮ ಗೀತೆಗಳು, ಫೈಟ್, ರಕ್ತ, ಸ್ಟಂಟ್ಸ್ ಯಾವುದೂ ಇಲ್ಲದೇ ಒಂದು ಚಿತ್ರವನ್ನು ಮನಮುಟ್ಟುವಂತೆ ಸಿದ್ದಪಡಿಸಬಹುದು ಎಂಬುದಕ್ಕೆ ಉದಾಹರಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ರಾಮಣ್ಣ ರೈ ಕೊಡುಗೆ…
ಹೌದು, ಇಂದು ಕರುನಾಡಿನಲ್ಲೇ ಕನ್ನಡವನ್ನು ಉಳಿಸಿ ಎಂದು ಹೋರಾಟ ಮಾಡಬೇಕಾಗಿ ಬಂದಿರುವುದು ನಮ್ಮ ದುರಂತ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯದ ಗಡಿ ಪ್ರದೇಶಗಳಲ್ಲಿ ಹಾಗೂ ರಾಜ್ಯಗಳ ಒಳಗೆ ಕನ್ನಡ ಶಾಲೆಗಳ ದುಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ ಎಂಬುದರ ಪ್ರತಿಫಲನವೇ ಈ ಚಿತ್ರ.
ನಾವು ಕನ್ನಡಿಗರು ಸಹೃದಯರು, ವಿಶಾಲ ಮನೋಭಾವದವರು ಹಾಗೂ ಎಲ್ಲರನ್ನೂ ಕರೆದು ನಮ್ಮ ಒಡಲಲ್ಲಿ ಜಾಗ, ನೀರು, ಅನ್ನ ನೀಡಿ ಪೋಷಿಸುತ್ತಿರುವವರು. ಆದರೆ, ಅದೇ ರೀತಿಯಲ್ಲಿ ಅವರ ರಾಜ್ಯಗಳಲ್ಲೂ ಸಹ ಕನ್ನಡಕ್ಕೆ ಇಷ್ಟೇ ಸ್ಥಾನವಿದೆಯೇ? ಇಲ್ಲ ಎಂಬುದು ನಿರ್ವಿವಾದ.
ಪ್ರಮುಖವಾಗಿ ಕರ್ನಾಟಕ ಹಾಗೂ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಗಡಿ ಪ್ರದೇಶಗಳಲ್ಲಿರುವ ಕನ್ನಡ ಶಾಳೆಗಳ ದುಸ್ಥಿತಿಯನ್ನು ಚಿತ್ರದಲ್ಲಿ ಎಳೆಎಳೆಯಾಗಿ ಬಿಡಿಸಿಡಲಾಗಿದೆ. ಈ ಶಾಲೆಗಳ ವಿರುದ್ಧದ ಅಲ್ಲಿನ ಅಧಿಕಾರಿ ಹಾಗೂ ರಾಜಕಾರಣಿಗಳ ವ್ಯವಸ್ಥಿತ ಸಂಚನ್ನು ಬಿಡಿಸಿಡುವ ಮೊದಲು ಮಕ್ಕಳು ಹಾಗೂ ಶಾಲೆಗಳ ನಡುವಿನ ಬಾಂಧವ್ಯ ಹೇಗಿರುತ್ತದೆ ಎಂಬುದನ್ನು ಚಿತ್ರಿಸಿರುವ ರೀತಿಯನ್ನು ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಮ್ಮ ಶಾಲಾ ದಿನಗಳನ್ನು ನೆನಪಿಸುತ್ತದೆ.
ಚಿತ್ರ ಪ್ರಮುಖ ಕಥಾಹಂದರವನ್ನು ಹೇಳುವುದಾದರೆ ಯಾವುದೇ ರೀತಿಯ ದೊಡ್ಡ ತೊಂದರೆಗಳಿಲ್ಲದೇ ನಡೆಯುತ್ತಿರುವ ಶಾಲೆಯನ್ನು ದಿಢೀರ್ ಎಂದು ಮಕ್ಕಳ ಭವಿಷ್ಯವನ್ನೂ ಸಹ ನೋಡದೇ ಮುಚ್ಚುವ ಸ್ಥಿತಿ ಎದುರಾಗುತ್ತದೆ. ಏಕೆ ಇಂತಹ ಸ್ಥಿತಿ ಎದುರಾಗುತ್ತದೆ ಎಂಬುದನ್ನು ನೀವು ಚಿತ್ರದಲ್ಲಿ ನೋಡಿಯೇ ತಿಳಿಯಬೇಕು.
ಈ ರೀತಿ ಮುಚ್ಚುವ ಶಾಲೆಯನ್ನು ಉಳಿಸಿಕೊಳ್ಳಲು ಅದೇ ಶಾಲೆಯ ಮಕ್ಕಳು ಹೇಗೆಲ್ಲಾ ಪ್ರಯತ್ನಿಸಿ, ಯಶಸ್ಸು ಗಳಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಓದಿನ ಕಡೆ ಗಮನ ಕೊಡದೆ, ಪಲ್ಲವಿಯನ್ನು ನೋಡುತ್ತಲೇ ಅರ್ಧ ಕಾಲ ಕಳೆಯುವ ‘ದಡ್ಡ’ ಪ್ರವೀಣನ ಪಾತ್ರ ಹದಿಹರೆದ ಮಕ್ಕಳಲ್ಲಿ ಹೇಗೆಲ್ಲಾ ಭಾವನೆಗಳು ಮೂಡುತ್ತವೆ ಎನ್ನುವುದನ್ನು ತೋರಿದ್ದರೆ, ರಾಮಣ್ಣ ರೈ ಕೊಡುಗೆ ಮೇಲೆ ಸದಾ ಕಣ್ಣಿಟ್ಟಿರುವ ಮಮ್ಮುಟಿ, ಟಾಪರ್ ರಾಹುಲ್, ಮಹೇಂದ್ರನ ಕಾಮಿಡಿ ಟೈಮಿಂಗ್… ಸೇರಿದಂತೆ ಎಲ್ಲಾ ಮಕ್ಕಳ ನಟನೆ ಮಾತ್ರ ಸೂಪರ್.
ಇಂಟರ್‌ವಲ್ ಆದ ಮೇಲೆ ಎಂಟ್ರಿ ಕೊಡುವ ಅನಂತನಾಗ್ ಅವರ ಅಭಿನಯ ಅಂದು ಗೌರಿ ಗಣೇಶ, ಗಣೇಶನ ಮದುವೆಯಂತಹ ಎವರ್ ಗ್ರೀನ್ ಚಿತ್ರಗಳಲ್ಲಿ ಇದ್ದಂತಹ ಅದ್ಬುತ ನಟನೆಯನ್ನೇ ಇಲ್ಲೂ ವ್ಯಕ್ತಪಡಿಸಿರುವುದು ಅನಂತ್ ಅವರ ನಟನೆಯ ತೂಕವನ್ನು ಹೆಚ್ಚಿಸಿದೆ.
ಇನ್ನು, ಪ್ರಮೋದ್ ಶೆಟ್ಟಿ ಅವರ ನಟನೆ ಹಾಗೂ ಉಗ್ರ ಹೋರಾಟ ಉಂಟು ಬಾರಾ… ಎಂಬುದು ಚಿತ್ರಮಂದಿರದಿಂದ ಹೊರಕ್ಕೆ ಬಂದ ನಂತರವೂ ಸಹ ಕಾಡುತ್ತದೆ. ಅತ್ಯಂತ ಮಹತ್ವದ ಸಂಗತಿ ಎಂದರೆ ಮಮ್ಮುಟ್ಟಿಯ ಪಾತ್ರ ಆ ಬಾಲ ನಟನ ಅದ್ಬುತ ನಟನೆ, ಡೈಲಾಗ್ ಹೇಳುವ ರೀತಿ ಹಾಗೂ ಸಂಭಾಷಣೆಯಿಂದಲೇ ನಂಗೆ ರಾಮಣ್ಣನ ಮೇಲೆ ಕ್ರಷ್ ಆಗಿದೆ, ಎಂತ ದೊಡ್ಡ ಜನ ಮಾರಾಯಾ, ಇಡೀ ಊರೆ ರಾಮಣ್ಣ ರೈ ಕೊಡುಗೆ ಎಂದು ಹೇಳುವುದು ಚಿತ್ರ ನೋಡಿ ಮೂರು ನಾಲ್ಕು ದಿನಗಳು ಕಳೆದರೂ ಮನಸ್ಸಿನಲ್ಲಿ ಗುನುಗುತ್ತದೆ. ಅಲ್ಲದೇ, ಈ ಪಾತ್ರದ ಮೂಲಕ ದೊಡ್ಡವರನ್ನು ನೋಡಿ ಮಕ್ಕಳು ಹೇಗೆ ಅನುಕರಿಸುತ್ತಾರೆ, ಹೇಗೆಲ್ಲಾ ಕನಸು ಕಟ್ಟಿಕೊಳ್ಳುತ್ತಾರೆ ಎಂಬುದನ್ನು ಪ್ರತಿಬಿಂಬಿಸಲಾಗಿದೆ.
ಇನ್ನು, ಚಿತ್ರೀಕರಣದ ಕುರಿತಾಗಿ ಹೇಳುವುದಾದರೆ, ಚಿತ್ರ ನೋಡಿ ಹೊರಬಂದ ಮೇಲೆ ನಾವೇ ಸ್ವತಃ ಕರಾವಳಿ ಹಾಗೂ ಕೇರಳಕ್ಕೆ ಹೋಗಿ ಬಂದೆವೇನೋ ಎಂಬಂತೆ ಭಾಸವಾಗುತ್ತದೆ. ಇದಕ್ಕೆ ವೆಂಕಟೇಶ್ ಅವರ ಕ್ಯಾಮೆರಾ ಕೈಚಳಕವೂ ಸಹ ಮಹತ್ವದ ಕೊಡುಗೆ ನೀಡಿದೆ.
ಚಿತ್ರದಲ್ಲಿರುವ ಹಾಡುಗಳಲ್ಲಿ ಮನಸ್ಸಿನಲ್ಲಿ ಉಳಿಯುವುದು ಹೇ ಶಾರದೆಯ ಗೀತೆ…
ಒಟ್ಟಾರೆ ಚಿತ್ರ ಪ್ರತಿಯೊಬ್ಬರೂ ನೋಡಲೇಬೇಕಾದ್ದು… ಅಂತಿಮವಾಗಿ ಚಿತ್ರ ನಮ್ಮಲ್ಲಿ ಕನ್ನಡಾಭಿಮಾನವನ್ನು ಹೆಚ್ಚಿಸಿ, ಇಂದಿನ ಕನ್ನಡ ಶಾಳೆಗಳ ಸ್ಥಿತಿಯನ್ನು ತೆರೆದಿಡುತ್ತದೆ.
ಇನ್ನೂ, ನೀವು ಚಿತ್ರ ನೋಡಿಲ್ಲವೇ? ಹಾಗಾದರೆ ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ರಾಮಣ್ಣ ರೈ ಕೊಡುಗೆಯನ್ನು ನೋಡಿ ಬನ್ನಿ.
ತಾರಾಗಣ: ಅನಂತ್ ನಾಗ್, ಮಾ.ರಂಜನ್, ಮಾ.ಸಂಪತ್, ಮಾ.ಮಹೇಂದ್ರ, ಪ್ರಮೋದ್ ಶೆಟ್ಟಿ, ಪ್ರಕಾಶ್ ತೂಮಿನಾಡ್ ಮತ್ತು ಇತರರು
ನಿರ್ದೇಶನ: ರಿಷಬ್ ಶೆಟ್ಟಿ
ಸಂಗೀತ: ವಾಸುಕಿ ವೈಭವ್
ಛಾಯಾಗ್ರಹಣ: ವೆಂಕಟೇಶ್ ಅಂಗುರಾಜ್
ಸಂಭಾಷಣೆ: ಅಭಿಜಿತ್ ಮಹೇಶ್, ರಾಜ್ ಬಿ. ಶೆಟ್ಟಿ
-ಎಸ್.ಆರ್. ಅನಿರುದ್ಧ ವಸಿಷ್ಠ
9008761663
Discussion about this post