ನವದೆಹಲಿ: ಅಯೋಧ್ಯೆ ರಾಮಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ಪ್ರಕಟಿಸಿರುವ ಸಿಜೆಐ ದೀಪಕ್ ಮಿಶ್ರಾ, ನ್ಯಾ.ಅಶೋಕ್ ಭೂಷಣ್ ಹಾಗೂ ನ್ಯಾ. ಎಸ್. ಅಬ್ದುಲ್ ನಜೀರ್ ಅವರಿದ್ದ ತ್ರಿಸದಸ್ಯ ಪೀಠ ಹಳೆಯ ತೀರ್ಪನ್ನೇ ಎತ್ತಿ ಹಿಡಿದಿದೆ.
1994ರ ತೀರ್ಪನ್ನು ಎತ್ತಿ ಹಿಡಿದಿರುವ ನ್ಯಾಯಾಲಯ, ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳಿಗಾಗಿ ಜಾಗವನ್ನು ವಶಪಡಿಸಿಕೊಳ್ಳಬಹುದು. ಮಸೀದಿಯಲ್ಲೇ ಪ್ರಾರ್ಥನೆ ಸಲ್ಲಿಸಬೇಕು ಎಂಬ ನಿಯಮವೇನು ಇಸ್ಲಾಂನಲ್ಲಿ ಇಲ್ಲ ಎಂದಿದೆ.
ಮಸೀದಿಯನ್ನು ಸ್ಥಳಾಂತರ ಮಾಡುವುದರಿಂದ ಪ್ರಾರ್ಥನೆಗೆ ಧಕ್ಕೆಯಾಗುವುದಿಲ್ಲ. ಇಸ್ಲಾಂನಲ್ಲಿ ಮಸೀದಿಗೆ ಧಾರ್ಮಿಕ ಪ್ರಾಮುಖ್ಯತೆಯಿಲ್ಲ. ಬೇರೆ ಮಸೀದಿಯಲ್ಲೂ ಸಹ ನಮಾಜ್ ಮಾಡಬಹುದು ಎಂದು ಫಾರೂಖಿ ತೀರ್ಪನ್ನು ಸುಪ್ರೀಂ ಎತ್ತಿ ಹಿಡಿದಿದೆ.
ಅಲ್ಲದೇ, ಪ್ರಕರಣವನ್ನು ಯಾವುದೇ ಕಾರಣಕ್ಕೂ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವುದಿಲ್ಲ. ಫಾರೂಖಿ ತೀರ್ಪು ಹಾಗೂ ಅಯೋಧ್ಯೆ ಪ್ರಕರಣ ಎರಡೂ ಬೇರೆ ಬೇರೆ ಪ್ರಕರಣ ಎಂದು ನ್ಯಾಯಪೀಠ ಹೇಳಿದೆ.
ಇಂದು ತೀರ್ಪು ಪ್ರಕಟಿಸಿದ ತ್ರಿಸದಸ್ಯ ಪೀಠದಲ್ಲಿ ಸಿಜೆ ದೀಪಕ್ ಮಿಶ್ರಾ ಹಾಗೂ ಅಶೋಕ್ ಭೂಷಣ್ ಅವರು ನೀಡಿದ ತೀರ್ಪಿಗೆ ನನ್ನ ಸಹಮತವಿಲ್ಲ ಎಂದಿರುವ ಇನ್ನೊಬ್ಬ ನ್ಯಾಯಾಧೀಶ ಅಬ್ದುಲ್ ನಸೀರ್, ನಮಾಜ್‌ಗೆ ಮಸೀದಿ ಅವಶ್ಯಕತೆಯಿಲ್ಲ ಎಂಬ ವಿಚಾರ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಬೇಕು ಎಂದಿದ್ದಾರೆ.
ಅಯೋಧ್ಯೆ ಜಾಗದ ವಿವಾದ ವಿಚಾರಣೆ ಅಕ್ಟೋಬರ್ 29ರಿಂದ ಆರಂಭವಾಗಲಿದ್ದು, ವಿಚಾರಣೆ ನಿರಂತರವಾಗಿ ನಡೆಯಲಿದೆ ಎಂದು ನ್ಯಾಯಾಲಯ ಹೇಳಿದೆ.
Discussion about this post