ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |ನವರಾತ್ರಿಯಲ್ಲಿ ನವದೇವಿಯರ ಪೂಜೆಯ ಪರ್ವ ದೇವಿಯನ್ನು 9 ರೂಪಗಳಲ್ಲಿ ಪೂಜಿಸಲಾಗುತ್ತದೆ. ಒಂದೊಂದು ದಿವಸದಲ್ಲೂ ಒಂದು ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಮೊದಲನೆಯ ದಿನ ಶೈಲಪುತ್ರಿ, ಎರಡನೆಯ ದಿನ ಬ್ರಹ್ಮಚಾರಿಣಿ ಮೂರನೆಯ ದಿನ ಚಂದ್ರಘಂಟಾ ದೇವಿ, ನಾಲ್ಕನೆಯ ದಿನ ಕೂಷ್ಮಾಂಡಾ ದೇವಿ, ಐದನೆಯ ದಿನ ಸ್ಕಂದಮಾತಾ, ಆರನೆಯ ದಿನ ಕ್ಯಾತ್ಯಾಯನಿ, ಏಳನೆಯ ದಿನ ಕಾಲರಾತ್ರಿ, ಎಂಟನೆಯ ದಿನ ಮಹಾಗೌರಿ, ಒಂಭತ್ತನೇಯ ದಿನ ಸಿದ್ಧಿಧಾತ್ರಿ ಎಂದು ಪೂಜೆಯನ್ನು ಮಾಡಲಾಗುತ್ತದೆ.
ವಂದೇ ವಾಂಛಿತಲಾಭಾಯ್ಚಂದ್ರಾರ್ಧಕೃತಶೇಖರಾಮ್|
ವೃಷಾರೂಢಾಂ ಶೂಲಧರಾಂ ಶೈಲಪುತ್ರಿಂ ಯಶಸ್ವಿವಿನೀಮ್||
ಮೊದಲನೇ ದಿನ ಪಾಡ್ಯದಂದು ಶೈಲಪುತ್ರಿಯನ್ನು ಪೂಜಿಸುತ್ತೇವೆ. ಶೈಲಪುತ್ರಿ ಎಂದರೆ ಹಿಮವಂತ ರಾಜನ ಮಗಳು ಎಂದು ಪಾರ್ವತಿ ದೇವಿಯ ಅಂಶವಾಗಿದ್ದಾಳೆ. ಪತಿಯನ್ನು ಅವಮಾನ ಮಾಡಿದ ತಂದೆಯಾದ ದಕ್ಷ ಪ್ರಜಾಪತಿಯ ಹೋಮದಲ್ಲಿ ಸತಿದೇವಿಯು ಹೋಮಕುಂಡದಲ್ಲಿ ಜಗಿದು ಭಸ್ಮಳಾದ ನಂತರದಲ್ಲಿ ಹಿಮವಂತ ರಾಜನ ಕುಮಾರಿಯಾಗಿ, ಮೊದಲಿಗೆ ಶೈಲಪುತ್ರಿಯಾಗಿ ಜನಿಸಿ ಶಿವನ ಕುರಿತು ತಪಸ್ಸು ಮಾಡುತ್ತಾಳೆ. ಅವಳ ತಪಸ್ಸಿಗೆ ಮೆಚ್ಚಿ ಒಲಿದು ಬಂದ ಶಿವ ಅವಳನ್ನು ಪರೀಕ್ಷಿಸಿ ವಿವಾಹವಾಗುತ್ತಾನೆ.
ಉಪನಿಷತ್ತುಗಳ ಪ್ರಕಾರ ಶೈಲಪುತ್ರಿಯು ಮೂಲಾಧಾರ ಚಕ್ರವನ್ನು ಪ್ರತಿನಿಧಿಸುತ್ತಾಳೆ. ಶ್ವೇತ ವಸ್ತ್ರವನ್ನು ಧರಿಸಿರುತ್ತಾಳೆ ಅವಳಿಗೆ ಶ್ವೇತ ವರ್ಣ ಪ್ರಿಯ ವರ್ಣ. ಆದ್ದರಿಂದಲೇ ಇಂದು ಬಿಳಿ ಬಣ್ಣವನ್ನು ಧರಿಸುವ ದಿನವೆಂದು ಆಚರಿಸುತ್ತಿದ್ದಾರೆ. ಶ್ಲೋಕದಲ್ಲೇ ಹೇಳಿರುವಂತೆ ವೃಷಾರೂಢಳು ಅಂದರೆ ನಂದಿ ಅವಳ ವಾಹನ ಮತ್ತು ಅವಳು ತಲೆಯಲ್ಲಿ ಅರ್ಧ ಚಂದ್ರಾಕೃತಿಯನ್ನು ಧರಿಸಿರುತ್ತಾಳೆ. ಒಂದು ಕೈಯಲ್ಲಿ ತ್ರಿಶೂಲ ಇನ್ನೊಂದು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಮಲ್ಲಿಗೆ ಹೂವು ಶೈಲಪುತ್ರಿಗೆ ಬಹು ಪ್ರಿಯವಾದ ಹೂವಾಗಿದೆ. ಶೈಲ ಪುತ್ರಿಯ ಮಂತ್ರ “ಓಂ ದೇವಿ ಶೈಲಪುತ್ರೈ ನಮಃ” ಎಂದಾಗಿದೆ.
ತುಪ್ಪವನ್ನು ಅರ್ಪಿಸಿ ಅವಳ ಪ್ರೀತಿಗೆ ಪಾತ್ರರಾಗಿ ಉತ್ತಮ ಅರೋಗ್ಯವನ್ನು ಬೇಡುತ್ತಾರೆ. ಯೋಗಿಗಳು ತಮ್ಮ ಮನದ ಮೂಲಾಧಾರ ಚಕ್ರವನ್ನು ಜಾಗೃತಗೊಳಿಸಿ ಶೈಲಪುತ್ರಿಯ ಆರಾಧನೆಯನ್ನು ಮಾಡುತ್ತಾರೆ. ಇಲ್ಲಿಂದ ಅರಂಭವಾಗಿ ಅವರ ಯೋಗ ಸಾಧನೆಯು ಮುಂದುವರೆಸುತ್ತಾರೆ.
ಪರ್ವತ ರಾಜ ಹಿಮವಂತನ ಮಗಳಾದ್ದರಿಂದ ಅವಳು ಸ್ಥಿರತೆ ಮತ್ತು ಬಲಕ್ಕೆ ಪ್ರತೀಕಳಾಗಿದ್ದಾಳೆ, ತಾಳ್ಮೆಯ ಪ್ರತೀಕಳೂ ಆಗಿರುವಳು. ಎತ್ತರವಾದ ಉನ್ನತ ವ್ಯಕ್ತಿತ್ವದವಳು, ಶುಭ್ರ ಶುದ್ಧತೆಯ ಪ್ರತೀಕಳು, ಭಕ್ತರ ನಂಬಿಕೆಗೂ ಸ್ಥಿರವಾಗಿಟ್ಟುಕೊಂಡು ತಮ್ಮ ಸಾಧನೆಯ ಆರಂಭಕ್ಕೆ ಪ್ರೇರಣಾದಾಯಕಳು ಮತ್ತು ಆಧ್ಯಾತ್ಮ ಜೀವನದ ಮೂಲ ಪ್ರೇರಕಳೂ ಆಗಿರುತ್ತಾಳೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post