ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |ನವರಾತ್ರಿಯಲ್ಲಿ ಪೂಜೆಗೊಂಬ ದೇವಿ ಅವತಾರಗಳಲ್ಲಿ ಆರನೇಯ ಅವತಾರ ಕಾತ್ಯಾಯನಿ ದೇವಿಯದ್ದಾಗಿರುತ್ತದೆ. ದೇವಿಯು ಕಾತ್ಯಾಯನೀಯಾದ ಕತೆಯನ್ನು ತಿಳಿಯೋಣ. ಹಿಂದೆ ಒಬ್ಬರು ಋಷಿಗಳಿದ್ದರು ಅವರ ಪುತ್ರ ಕಾತ್ಯನಾದನು. ಅವರ ಗೋತ್ರದಲ್ಲಿ ಹುಟ್ಟಿದವರೇ ಕಾತ್ಯಾಯನ.
ಈ ಕಾತ್ಯಾಯನರು ಭಗವತಿಯ ಕುರಿತು ತಪಸ್ಸನ್ನು ಮಾಡಿ ದೇವಿಯು ತಮ್ಮ ಮನೆಯಲ್ಲಿ ಮಗಳಾಗಿ ಜನಿಸಬೇಕೆಂಬ ವರವನ್ನು ಬೇಡಿದರು. ದೇವಿಯು ಅವರ ಬೇಡಿಕೆ ಒಪ್ಪಿದಳು. ಮುಂದೆ ಮಹಿಷಾಸುರನ ಉಪದ್ರವವು ಭೂಮಂಡಲದಲ್ಲಿ ಹೆಚ್ಚಾಗಲು ಬ್ರಹ್ಮ,ವಿಷ್ಣು, ಮಹೇಶರ ಅಂಶದಿಂದ ಭಾದ್ರಪದ ಕೃಷ್ಣ ಚತುರ್ದಶಿಯಂದು ಆವಿರ್ಭವಿಸಿ, ಆಶ್ವಯುಜ ಶುಕ್ಲ ಸಪ್ತಮಿ ಅಷ್ಟಮಿ ಮತ್ತು ನವಮಿದಿನಗಳಂದು ಕಾತ್ಯಾಯನ ಋಷಿಗಳಿಂದ ಪೂಜೆಗೊಂಡು ದಶಮಿಯ ದಿನ ಮಹಿಷಾಸುರನನ್ನು ಮರ್ದಿಸಿದಳು. ಕಾತ್ಯಾಯನ ಋಷಿಗಳಿಂದ ಪೂಜೆಗೊಂಡ ದೇವಿಯನ್ನು ಕಾತ್ಯಾಯನೀ ಎಂದು ಕರೆಯುತ್ತಾರೆ.
ನವರಾತ್ರಿಯ ಆರನೇ ದಿನ ಷಷ್ಠಿ ತಿಥಿಯಂದು ಪೂಜಿಸುವ ರೂಪ ಕಾತ್ಯಾಯನಿ ದೇವಿಯದು. ಇವಳನ್ನು ಶಕ್ತಿ ಸ್ವರೂಪಿಣಿ ಎನ್ನಲಾಗುತ್ತದೆ. ಭಕ್ತನು ಕಾತ್ಯಾಯನೀ ದೇವಿಯ ಉಪಾಸನೆ ಮಾಡುವ ಸಮಯದಲ್ಲಿ ಆಜ್ಞಾ ಚಕ್ರದಲ್ಲಿರುತ್ತಾನೆ ಈ ಚಕ್ರವು ಸಾಧನೆಯ ಹಾದಿಯಲ್ಲಿ ಬಹಳ ಮಹತ್ವದ್ದು ಈ ಯೋಗ ಸಾಧನೆಯಲ್ಲಿ ಭಕ್ತನು ಭಗವತಿಗೆ ತನ್ನ ಸರ್ವಸ್ವವನ್ನೂ ಅರ್ಪಿಸುತ್ತಾನೆ. ಭಕ್ತಿಯ ಪರಮಾವಧಿ ಎಂದರೇ ಸಂಪೂರ್ಣ ಶರಣಾಗತಿಯಾಗಿರುತ್ತದೆ. ಆದ್ದರಿಂದ ದೇವಿಯಲ್ಲಿ ತಮ್ಮ ಆತ್ಮ ಸಮರ್ಪಣೆ ಮಡಿದ ಭಕ್ತರಿಗೆ ಸಕಲ ಇಷ್ಟಾರ್ಥ ಧರ್ಮ ಅರ್ಥ ಕಾಮ ಮೋಕ್ಷಗಳನ್ನು ನೀಡುತ್ತಾಳೆ.
ಇವಳು ಕೂಡ ಚತುರ್ಭುಜೆಯಾಗಿದ್ದು, ಬಲ ಗೈ ಮೇಲಿನ ಕೈ ಅಭಯ ಮುದ್ರೆಯಲ್ಲಿದೆ, ಕೆಳಗಿನ ಕೈ ವರಮುದ್ರೆಯಲ್ಲಿದೆ ಎಡಗೈ ಮೇಲಿನ ಕೈಲಿ ಖಡ್ಗವಿದೆ. ಕೆಳಗಿನ ಕೈಲಿ ಕಮಲ ಹಾಗೂ ತ್ರಿಶೂಲಗಳನ್ನು ಧರಿಸಿರುತ್ತಾಳೆ. ಸಿಂಹ ವಾಹನೆಯಾಗಿರುವ ದೇವಿಗೆ ಜೇನು ತುಪ್ಪವೆಂದರೆ ಬಹು ಪ್ರೀತಿ. ಕೇಸರಿ ಬಣ್ಣದ ವಸ್ತ್ರವನ್ನು ಧರಿಸಿರುತ್ತಾಳೆ. ಆದರೆ ಬೂದು ಬಣ್ಣ ಅವಳ ಪ್ರೀತಿಯ ಬಣ್ಣವಾಗಿದೆ. ದೇವಿಗೆ ಕೆಂಪು ಬಣ್ಣದ ಪುಷ್ಟಪಗಳು ಪ್ರಿಯವಾದವು. ದೇವಿಯನ್ನು ಪೂಜಿಸುವ ಮಂತ್ರ “ಓಂ ಕಾತ್ಯಾಯನಿನೈ ನಮಃ” ಆದರೆ ಪಥಿಸುವ ಸ್ತುತಿ ” ಯಾ ದೇವಿ ಸರ್ವ ಭೂತೇಷು ಕಾತ್ಯಾಯನೀ ರೂಪೇಣ ಸಂಸ್ಥಿತಾ ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ” ಎಂದು ಇದೆ.
ಕಾತ್ಯಾಯನೀ ವ್ರತ
ನವರಾತ್ರಿಯ ಷಷ್ಠಿ ದಿನ ಮಾಡುವ ವಿಶೇಷವಾಗಿ ಮಾಡುವ ವ್ರತವೇ ಕಾತ್ಯಾಯನೀ ವ್ರತವಾಗಿದೆ. ಈ ಕಾತ್ಯಾಯನೀ ವ್ರತವನ್ನು ಮಾಡಿ ಎಲ್ಲ ಗೋಪಿಕಾ ಸ್ತ್ರೀಯರು ಶ್ರೀಕೃಷ್ಣ ಪರಮಾತ್ಮನ ಪತ್ನಿಯರಾದರು. ಕಾತ್ಯಾಯನೀ ವ್ರತವನ್ನು ಆಶ್ವಯುಜ ಶುಕ್ಲ ಷಷ್ಠಿಯಂದು ನದೀ ತೀರದಲ್ಲಿ ಮಾಡಬೇಕು. ಗೋಪಿಕಾ ಸ್ತ್ರೀಯರು ಯಮುನಾ ನದಿಯ ತಟದಲ್ಲಿ ಮಾಡಿದ್ದರು. ಅಂದು ನದಿಯಲ್ಲಿ ಮಿಂದು ಮಡಿಯುಟ್ಟು ಕಾತ್ಯಾಯನೀ ದೇವಿಯ ಮಣ್ಣಿನ ಪ್ರತಿಮೆಯೊಂದಿಗೆ ಕಲಶ ಸ್ಥಾಪನೆ ಮಾಡಿ ಷೋಡಶೋಪಚಾರಗಳಿಂದ ಪೂಜಿಸಿ, ನೈವೇದ್ಯಕ್ಕೆ ಪಾನಕ ಕೊಸಂಬರಿ ಉಂಡೆಗಳನ್ನು ಮಾಡಿ ಅರ್ಪಿಸಿ 6 ಪ್ರದಕ್ಷಿಣೆ ಅಥವಾ ಆರಕ್ಕಿಂತ ಹೆಚ್ಚು ಪ್ರದಕ್ಷಿಣೆಯನ್ನು ಹಾಕಬೇಕು. ಹೀಗೆ ಭಕ್ತಿಯಿಂಧ ಪೂಜಿಸಿದ ಕನ್ಯೆಯರಿಗೆ ಮನೋವಾಂಛಿತ ಪತಿ ದೊರೆತರೆ, ವಿವಾಹಿತ ಸ್ತ್ರೀಯರಿಗೆ ಪುತ್ತಪೌತ್ರಾದಿ ಸಂಪತ್ತು ದೊರೆಯುವುದು. ಇದು ನವರಾತ್ರಿಯಲ್ಲಿ ಕಾತ್ಯಾಯನಿ ದೇವಿಯ ಪೂಜೆಯಾದರೂ ಸಾಮಾನ್ಯವಾಗಿ ಕಾತ್ಯಾಯನಿ ವ್ರತ ಎಂದರೆ ಪ್ರಸಿದ್ಧಿ ಮಾರ್ಗಶಿರ ಮಾಸದ ಪೂಜೆಯದ್ದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post