ಹೌದು… ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರದಲ್ಲಿದ್ದಾಗ ಸ್ತ್ರೀ ಸಂಬಂಧಿ ವಿವಾದಗಳನ್ನು ಮೈಮೇಳೆ ಎಳೆದುಕೊಂಡು ರಾಜ್ಯದ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಆದರೆ, ಈಗ ಅಂತಹುದ್ದೇ ವಿವಾದವನ್ನು ಅವರು ಮತ್ತೆ ಮೈಮೇಲೆ ಎಳೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಅವರನ್ನು ಆಧುನಿಕ ದುಶ್ಯಾಸನ ಎಂದೇ ಅಪಹಾಸ್ಯ ಮಾಡಲಾಗುತ್ತಿದೆ.
ಅಸಲಿಗೆ ಆಗಿದ್ದೇನು?
ಸೋಮವಾರ ತಮ್ಮ ಪುತ್ರ ಡಾ.ಯತೀಂದ್ರ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಮೊದಲಿಗೆ ಟಿ.ನರಸೀಪುರ ತಾಲೂಕು ಗಗ್ಸೇಶ್ವರಿ ಗ್ರಾಮದಲ್ಲಿ ಕೆಪಿಟಿಸಿಎಲ್‌ವತಿಯಿಂದ ನಿರ್ಮಿಸಲಾಗುವ ಪವರ್ ಸ್ಟೇಷನ್‌ಗೆ ಶಂಕುಸ್ಥಾಪನಾ ಕಾರ್ಯಕ್ರಮಕ್ಕೂ ಮುನ್ನ ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದರು. ಈ ವೇಳೆ ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಜಮಾಲ್ ಅರಾ ಮಾತನಾಡಿ, ತಹಶೀಲ್ದಾರ್ ಸೇರಿದಂತೆ ಯಾವ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಒಂದು ಖಾತೆ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರ ಯಾವ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲಾಗುತ್ತಿಲ್ಲ. ನಮ್ಮ ಕೆಲಸಗಳೇ ಆಗುತ್ತಿಲ್ಲ ಎಂದರೆ, ಇನ್ನು ಜನಸಾಮಾನ್ಯರ ಕೆಲಸಗಳಾಗುತ್ತವೆಯೇ ಎಂದು ಪ್ರಶ್ನಿಸಿದರು.
ಇದನ್ನು ಸಮಾಧಾನದಿಂದಲೇ ಆಲಿಸಿದ ಸಿದ್ದರಾಮಯ್ಯ ಆಯ್ತಮ್ಮ, ಇದನ್ನು ಎಂಎಲ್‌ಎ ಗಮನಕ್ಕೆ ತಂದಿದ್ದೀಯಾ ಎಂದು ಪ್ರಶ್ನಿಸಿದರು. ಎಲ್ಲಿ ಸಾರ್, ಎಂಎಲ್‌ಎ ಅವ್ರು ಕೈಗೇ ಸಿಗಲ್ಲ ಎಂದು ಸಿದ್ದರಾಮಯ್ಯ ಎದುರಿಗಿದ್ದ ಟೇಬಲ್ ಕುಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಎದ್ದು ನಿಂತು ಆಕೆಯ ಕೈಯಲ್ಲಿದ್ದ ಮೈಕ್ ಕಸಿದುಕೊಳ್ಳಲು ಹೋದಾಗ ಆಕೆ ಧರಿಸಿದ್ದ ಚೂಡಿದಾರ್‌ನ ವೇಲ್ ಮೈಕ್ ಜೊತೆಗೇ ಬಂತು. ಅದನ್ನು ಸಿದ್ದರಾಮಯ್ಯ ಆಕೆಗೆ ಎತ್ತಿಕೊಟ್ಟರು. ಆದರೂ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಮಹಿಳೆಯನ್ನು ಸಿದ್ದರಾಮಯ್ಯ ತಮ್ಮ ಎಡಗೈನಿಂದ ಆಕೆಯ ಭುಜವನ್ನು ಒತ್ತಿ ಕೂರಿಸಿದರು.
ಈ ದೃಶ್ಯಾವಳಿಗಳು ಮಾದ್ಯಮದಲ್ಲಿ ಬಿತ್ತರಗೊಂಡು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿದ್ದರಾಮಯ್ಯ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ಮಹಿಳೆ ದೀರ್ಘ ಭಾಷಣ ಮಾಡುತ್ತಿದ್ದನ್ನು ನಿಲ್ಲಿಸಲು ಹೋದಾಗ ಅಕಸ್ಮಾತ್ ನಡೆದ ಘಟನೆ ಇದು. ದುರುದ್ದೇಶದಿಂದ ಈ ಘಟನೆ ನಡೆದಿಲ್ಲ. ಜಮಾಲಾ ಅರಾ ನನಗೆ ೧೫ ವರ್ಷದಿಂದ ಪರಿಚಯ, ಆಕೆ ನನ್ನ ಸಹೋದರಿ ಸಮಾನ ಎಂದಿದ್ದಾರೆ.
ಇಲ್ಲಿ ವಿಚಾರ ಏನೆಂದರೆ, ದೃಶ್ಯಾವಳಿಗಳನ್ನು ಗಮನಿಸಿದರೆ ಸಿದ್ದರಾಮಯ್ಯ ಕೋಪದಿಂದ ಮೈಕ್ ಕಿತ್ತುಕೊಳ್ಳುವ ಭರದಲ್ಲಿ ಆ ಮಹಿಳೆಯ ವೇಲ್ ಸಹ ಬಂದಿದೆಯೇ ಹೊರತು, ಬೇಕೆಂತಲೇ ಎಳೆದಿದ್ದಾರೆ ಎಂದೇನೂ ತೋರುವುದಿಲ್ಲ. ಆದರೆ, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಪ್ರಮುಖವಾಗಿ ಮಹಿಳೆಯರೊಂದಿಗೆ ಸಂಭಾಷಿಸುವಾಗ, ವ್ಯವಹರಿಸುವಾಗ ಹೇಗಿರಬೇಕು? ಎಷ್ಟು ಜಾಗರೂಕರಾಗಿರಬೇಕು ಎಂಬ ಕನಿಷ್ಠ ಜ್ಞಾನ 5 ವರ್ಷ ಮುಖ್ಯಮಂತ್ರಿಯಾಗಿದ್ದವರಿಗೆ ಇಲ್ಲ ಎಂದರೆ ಅದು ನಿಜಕ್ಕೂ ದುರಹಂಕಾರದ ಪರಮಾವಧಿಯೇ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸ್ತ್ರೀ ಸಂಬಂಧ ವಿಚಾರಗಳಲ್ಲಿನ ಅವರ ವರ್ತನೆ, ಈಗಲೂ ಸಹ ಅವರ ಕುರಿತಾಗಿ ಶಾಶ್ವತ ಟೀಕೆ ವ್ಯಕ್ತವಾಗುವಂತೆ ಮಾಡಿದೆ.
ಘಟನೆ 1: 2016ರ ಜೂನ್’ನಲ್ಲಿ ಕುರುಬ ಸಮಾಜ ಆಯೋಜನೆ ಮಾಡಿದ್ದ ಬೃಹತ್ ಕಾರ್ಯಕ್ರಮವೊಂದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪಂಚಾಯತ್ ಸದಸ್ಯೆ ಗಿರಿಜಾ ಶ್ರೀನಿವಾಸ್ ಎಂಬಾಕೆ ಸಾವಿರಾರು ಮಂದಿಯ ಮುಂದೆ ವೇದಿಕೆಯ ಮೇಲೆಯೇ ಸಿದ್ದರಾಮಯ್ಯ ಕೆನ್ನೆಗೆ ಮುತ್ತು ನೀಡಿದ್ದರು. ಆಕೆ, ಹಾಗೆ ಮಾಡಿದ್ದು ಸಿದ್ದರಾಮಯ್ಯರಿಗೂ ಅನಿರೀಕ್ಷಿತವೇ ಇರಬಹುದು. ಆದರೆ, ಪರಸ್ತ್ರೀ ಓರ್ವಳು ಹಾಗೆ ಚುಂಬಿಸುವಾಗ ಸಭ್ಯ ಗಂಡಸು ಅದನ್ನು ವಿರೋಧಿಸಬೇಕು. ಆದರೆ, ಆಕೆ ಚುಂಬಿಸುವಾಗ ಆಕೆಯ ತಲೆಯನ್ನು(ಫೋಟೋ ನೋಡಿ) ಸಿದ್ದರಾಮಯ್ಯ ಹಿಡಿದುಕೊಂಡ ರೀತಿ ಅವರ ನೈತಕತೆಯನ್ನು ಪ್ರಶ್ನೆ ಮಾಡುತ್ತದೆ.
ಘಟನೆ 2: 2017ರ ನವೆಂಬರ್’ನಲ್ಲಿ ಮಂಗಳೂರಿನಲ್ಲಿ ನಡೆದ ಕರಾಟೆ ಚಾಂಪಿಯನ್’ಶಿಪ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಆ ವೇಳೆ ಮಹಿಳೆಯೊಬ್ಬರೊಂದಿಗೆ ಕರಾಟೆ ಪಟ್ಟುಗಳನ್ನು ಹಾಸ್ಯಕ್ಕೆ ಪ್ರದರ್ಶಿಸಿದ್ದ ಸಿದ್ದರಾಮಯ್ಯ ಆಕೆಯನ್ನು ಅಸಭ್ಯ ರೀತಿಯಲ್ಲಿ ಮುಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು.
ಈ ಎರಡೂ ಘಟನೆಗಳ ನಂತರ ಈಗ ಮೂರನೆಯ ಘಟನೆ ತೀರಾ ವಿವಾದಕ್ಕೆ ಕಾರಣವಾಗಿದೆ. ನಿನ್ನೆ ಸಿದ್ಧರಾಮಯ್ಯ ಸೆರಗು ಎಳೆದಿದ್ದ ಆಕಸ್ಮಿಕವೇ. ಆದರೆ, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಪರಸ್ತ್ರೀಯರೊಂದಿಗೆ ಸಂಭಾಷಿಸುವಾಗ, ವ್ಯವಹರಿಸುವಾಗ ಹೇಗಿರಬೇಕು ಎಂಬ ಕನಿಷ್ಠ ಜ್ಞಾನ ಹಾಗೂ ತಾಳ್ಮೆ ಇರಬೇಕು.
ಆತ, ಸಾರ್ವಜನಿಕ ಜೀವನದಲ್ಲಿ ಇರಲಿ ಅಥವಾ ಇಲ್ಲದಿರಲಿ ಪರಸ್ತ್ರೀಯರೊಂದಿಗೆ ಸಂಭಾಷಿಸುವಾಗ ಆಕೆಯನ್ನು ಕೊಂಚ ಅಂತರದಲ್ಲಿ ನಿಲ್ಲಿಸಿ/ಕೂರಿಸಿ, ಪ್ರಮುಖವಾಗಿ ಮುಖ ನೋಡಿಕೊಂಡು ಮಾತನಾಡುವುದು ಸಭ್ಯತೆಯ ಲಕ್ಷಣ. ಹಾಗೆಯೇ, ಇಂತಹ ಸಂದರ್ಭದಲ್ಲಿ ಪುರುಷರ ಕೈಕಾಲುಗಳ ಚಲನವಲನ ಜಾಗರೂಕತೆಯಿಂದ ಇರಬೇಕಾಗದ್ದು ಅಗತ್ಯ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ. ದೇಶದ ಯಾವುದೇ ಪ್ರದೇಶಕ್ಕೆ ಅವರ ತೆರಳಿದರೂ ಅಲ್ಲಿ ಸ್ವಾಗತಿಸಲು ನಿಂತಿರುವ ಸ್ತ್ರೀಯರಿಗೆ ಅಂತರದಿಂದಲೇ ಕೈಮುಗಿದು ಗೌರವ ನೀಡುತ್ತಾರೆ. ಮಹಿಳಾ ಭದ್ರತಾ ಅಧಿಕಾರಿಗಳು ಇದ್ದಾಗ ಮಾತ್ರ ಶಿಷ್ಟಾಚಾರ ಹಾಗೂ ನಿಯಮದಂತೆ ಶೇಕ್ ಹ್ಯಾಂಡ್ ನೀಡಿದ ಉದಾಹರಣೆಗಳಿವೆ. ಆದರೆ, ಮಹಿಳಾ ಮೇಯರ್’ಗಳು ಹಾಗೂ ಸಾಧಕ ಮಹಿಳೆಯರು ಇದ್ದ ಸಂದರ್ಭದಲ್ಲಿ ಸ್ವತಃ ಮೋದಿಯವರೇ ಆಕೆಗೆ ತಲೆಬಾಗಿ ವಂದಿಸಿದ ಪರಿ ಅವರಲ್ಲಿನ ಸಂಸ್ಕಾರವನ್ನು ತೋರುತ್ತದೆ.
ಈ ವಿಚಾರದಲ್ಲಿ ನಾನು ಹತ್ತಿರದಿಂದ ಕಂಡಂತೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರದ್ದೂ ಸಹ ಅನುಕರಣೀಯ ವ್ಯಕ್ತಿತ್ವ. ಯಾವುದೇ ಮಹಿಳೆ ಅವರ ಕಚೇರಿ ಅಥವಾ ನಿವಾಸಕ್ಕೆ ಬಂದರೂ ಅಂತರದಲ್ಲೆ ಕೂರಿಸಿ, ಮಾತನಾಡಿಸಿ ಕಳುಹಿಸುವ ಮೂಲಕ ಸ್ತ್ರೀಯರಿಗೆ ನೀಡಬೇಕಾದ ಅಗತ್ಯ ಗೌರವ ನೀಡುತ್ತಾರೆ.
ಆದರೆ, ಸಿದ್ಧರಾಮಯ್ಯರ ಹಿಂದಿನ ಎರಡೂ ಘಟನೆಗಳು ಅವರಲ್ಲಿನ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ನಿನ್ನೆ ಆಕೆಯ ಕೈಯಿಂದ ಮೈಕ್ ಕಸಿದುಕೊಳ್ಳುವಾಗ ಆಕಸ್ಮಿಕವಾಗಿ ಸೆರಗು ಬಂದಿದ್ದು ನಿಜವೇ ಆದರೂ, ಮಹಿಳೆಯರೊಂದಿಗೆ ವ್ಯವಹರಿಸುವಾಗ ಅಂತರ ಕಾಯ್ದುಕೊಳ್ಳುವುದನ್ನು ಕಲಿಯಿರಿ ಸ್ವಾಮಿ. ಅದಕ್ಕೂ ಮಿಗಿಲಾಗಿ, ನೀವೊಬ್ಬ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಎಂತಹುದ್ದೆ ಸಂದರ್ಭಗಳು, ಟೀಕೆ-ಟಿಪ್ಪಣಿಗಳು, ಆರೋಪಗಳು ಬಂದರೂ ಸಹ ವ್ಯವಧಾನ ಕಳೆದುಕೊಳ್ಳದೇ ನಗುತ್ತಲೇ ಉತ್ತರಿಸುವುದು, ತಾಳ್ಮೆಯಿಂದ ಸಮಸ್ಯೆ ಪರಿಹಾರ ಮಾಡಬೇಕಾದ ಗುಣ ಇರಬೇಕು.
ಸಂದರ್ಭ ಸಿಕ್ಕಾಗಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಿರಲ್ಲಾ.. ಮೋದಿಯವರು ಸಾರ್ವಜನಿಕವಾಗಿ ಒಂದೇ ಒಂದು ಬಾರಿ ತಾಳ್ಮೆ ಕಳೆದುಕೊಂಡು ಸಿಟ್ಟು ಮಾಡಿದ ಉದಾಹರಣೆ ಇದ್ದರೆ ತೋರಿಸಿ.. ಅದು ನಾಯಕನಿಗೆ ಇರಬೇಕಾದ ಗುಣ.
ನಿಮ್ಮ ಮಗನ ವಿರುದ್ಧ ದೂರು ಹೇಳಿದರೂ ಎಂದ ಮಾತ್ರಕ್ಕೆ ನೀವು ಇಷ್ಟು ಸಿಟ್ಟಿಗೆದ್ದು, ಆಕೆಯ ವಿರುದ್ಧ ಬಲಪ್ರಯೋಗ ಮಾಡಲು ಮುಂದಾಗುತ್ತೀರಿ ಎಂದರೆ, ಅದು ನಿಮ್ಮ ಸಂಸ್ಕಾರವನ್ನು ತೋರುತ್ತದೆ.
ಎಷ್ಟಾದರೂ ನಿಮ್ಮದು ನೆಹರೂ ಪ್ರಣೀತ ಸಂಸ್ಕಾರದ ಪಕ್ಷವಲ್ಲವೇ! ಸಾರ್ವಜನಿಕವಾಗಿ ಪರಸ್ತ್ರೀಯರೊಂದಿಗೆ ನೆಹರೂ ಹೇಗೆ ವರ್ತಿಸುತ್ತಿದ್ದರು ಎಂಬುದನ್ನು ಇತಿಹಾಸದ ಫೋಟೋಗಳು ಸಾರಿ ಸಾರಿ ಹೇಳುತ್ತವೆ. ನಿಮ್ಮದೂ ಸಹ ಅದೇ ಪ್ರಣೀತವಲ್ಲವೇ!
ನೀವು ಮುಖ್ಯಮಂತ್ರಿಯಿಂದ ಮಾಜಿ ಆಗಿರಬಹುದು. ಆದರೂ, ನಿಮಗೆ ರಾಜ್ಯದಲ್ಲಿ ಒಂದು ಸಾರ್ವಜನಿಕ ಜೀವನವಿದೆ. ಅದನ್ನು ಅರಿತುಕೊಳ್ಳಿ. ಇನ್ನು ಮುಂದಾದರೂ ಕೊಂಚ ತಾಳ್ಮೆ, ವ್ಯವಧಾನ, ಪರಸ್ತ್ರೀಯರನ್ನು ಅಂತರದಿಂದಲೇ ಮಾತನಾಡುವುದನ್ನು ಕಲಿಯಿರಿ. ಇಲ್ಲದೇ ಹೋದಲ್ಲಿ, ಸಾಮಾಜಿಕ ಜಾಲತಾಣಗಲ್ಲಿ ಕಿಚಾಯಿಸುತ್ತಿರುವಂತೆ ಆಧುನಿಕ ದುಶ್ಯಾಸನ ಎಂಬ ಅಪಕೀರ್ತಿ ನಿಮಗೆ ಶಾಶ್ವತವಾಗುವ ಅಪಾಯವಿದೆ. ನಿಮ್ಮ ಒಳ್ಳೆಯದಕ್ಕೆ ಹೇಳುತ್ತಾನೆ ಅರ್ಥ ಮಾಡಿಕೊಳ್ಳಿ.
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post