ಕಲ್ಪ ಮೀಡಿಯಾ ಹೌಸ್ | ನೆಲಮಂಗಲ |
ಇನ್ನೇನು 15 ದಿನದಲ್ಲಿ ಸಂಭ್ರಮ ಮನೆ ಮಾಡಬೇಕಿದ್ದ ಕುಟುಂಬ ಅದು. ಆದರೆ, ವಿಧಿಯಾಟ ಎಲ್ಲವನ್ನೂ ಬದಲಾಯಿಸಿ, ಇಂದು ಅತ್ಯಂತ ಘೋರ ದುಃಖಕ್ಕೆ ದೂಡಿದೆ. ಇಷ್ಟಕ್ಕೂ ನಡೆದಿದ್ದು ಎಂತಹ ಘೋರ?
ಹೌದು… ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಎಡೇಹಳ್ಳಿ ಬಳಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಗರ್ಭಿಣಿ ಸಾವನ್ನಪ್ಪಿದ್ದಾರೆ. ಇದಕ್ಕೂ ಘೋರ ಎಂದರೆ ಆಕೆಯ ಹೊಟ್ಟೆ ಸೀಳಿಕೊಂಡು ಹೊರಬಂದ ಹಸುಗೂಸು ನಡು ರಸ್ತೆಯಲ್ಲಿ ವಿಲ ವಿಲ ಒದ್ದಾಡಿ ಪ್ರಾಣಬಿಟ್ಟಿದೆ.
ಮೃತ ಗರ್ಭಿಣಿಯನ್ನು ಸಿಂಚನ (39) ಎಂದು ಗುರುತಿಸಲಾಗಿದ್ದು, ಈಕೆಯೊಂದಿಗೆ ಗರ್ಭದಲ್ಲಿದ್ದ ಶಿಶುವೂ ಸಹ ಸಾವನ್ನಪ್ಪಿದೆ.
Also read: VISL ಮುಚ್ಚುವ, ಖಾಸಗೀಕರಣ ಅನುಮೋದನೆ ಹಿಂಪಡೆತ | ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದೇನು?
ಘಟನೆ ನಡೆದಿದ್ದು ಹೇಗೆ?
ಸಿಂಚನಾಗೆ ಇದೇ ಆಗಸ್ಟ್ 17ಕ್ಕೆ 8 ಮುಗಿದು 9 ತಿಂಗಳು ತುಂಬುತ್ತಿತ್ತು. ಹೀಗಾಗಿ ಹೆರಿಗೆ ಸುಸೂತ್ರವಾಗಿ ಆಗಲಿ ಎಂದು ದಂಪತಿ ಬೈಕ್’ನಲ್ಲಿ ಡಾಬಸ್ ಪೇಟೆಯಲ್ಲಿರುವ ಶಿವಗಂಗೆಯ ಗಣಪತಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಪೂಜೆ ಸಲ್ಲಿಸಿ ಮರಳಿ ತಮ್ಮೂರು ತೋಟನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಆಗ ಸಿಂಚನಾ ಬೈಕ್’ನಿಂದ ಕೆಳೆಗೆ ಬಿದ್ದಿದ್ದು, ಟಿಪ್ಪರ್ ಸಿಂಚನಾ ಮೇಲೆ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ 8 ತಿಂಗಳ ಮಗು ತಾಯಿಯ ಹೊಟ್ಟೆ ಸೀಳಿ ಹೊರಗೆ ಬಂದಿದೆ. ತಂದೆಯ ಕಣ್ಣೆದುರಲ್ಲೇ ನಡು ರಸ್ತೆಯಲ್ಲಿ ಮಗು ವಿಲವಿಲ ಒದ್ದಾಡಿ ಮೃತಪಟ್ಟಿದೆ.
ಅದೃಷ್ಟವಶಾತ್ ಸಿಂಚನಾ ಪತಿ ಮಂಜುನಾಥ್ ಅವರು ಪವಾಡಸದೃಶವಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಮುಖದ ಗುರುತೇ ಸಿಗದಂತೆ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಪತ್ನಿಯ ಶವ, 15 ದಿನ ಕಳೆದರೆ ಭೂಮಿಯ ಬೆಳಕು ಕಾಣಬೇಕಾಗಿದ್ದ ತಮ್ಮ ಕರುಳ ಕುಡಿ ಅವಧಿಗಿಂತ ಮುಂಚೆಯೇ ತಾಯಿಯ ಹೊಟ್ಟೆ ಸೀಳಿ ಹೊರಬಂದು ರಸ್ತೆಯಲ್ಲಿ ಬಿದ್ದಿದ್ದ ಹೃದಯ ವಿದ್ರಾವಕ ಸನ್ನಿವೇಶ, ಇವೆಲ್ಲವನ್ನೂ ಕಂಡು ಆಕಾಶವೇ ಭೂಮಿಗೆ ಅಪ್ಪಳಿಸಿದಂತೆ ಪತ್ನಿಯ ಅಂಗೈ ಹಿಡಿದು ರಸ್ತೆಯಲ್ಲಿ ಒದ್ದಾಡಿ ಗೋಳಾಡುತ್ತಿರುವ ಪತಿಯ ಪರಿಸ್ಥಿತಿ ಅಲ್ಲಿದ್ದವರ ಕಣ್ಣಲ್ಲಿ ನೀರು ತರಿಸಿತು.
ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post