ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಐಸಿಸಿ ವಿಶ್ವಕಪ್ ವಿಜೇತ ಮಹಿಳಾ ತಂಡದೊಂದಿಗೆ #Worldcup Winning Women Team ಪ್ರಧಾನಿ ನರೇಂದ್ರ ಮೋದಿ #PM Narendra Modi ಹೃದಯಸ್ಪರ್ಶಿ ಸಂವಾದ ನಡೆಸಿದ್ದಾರೆ. ಈ ವೇಳೆ ಹಲವು ಸ್ವಾರಸ್ಯಕರ ವಿಚಾರಗಳು ಸಂವಾದದಲ್ಲಿ ಚರ್ಚೆಯಾಗಿದ್ದು, ಆಟಗಾರ್ತಿಯರು ಪ್ರಧಾನಿ ಮೋದಿ ಅವರಿಗೆ ಕೇಳಿದ ಪ್ರಶ್ನೆ ಗಮನ ಸೆಳೆದಿದೆ.
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಹರ್ಲೀನ್ ಡಿಯೋಲ್, ‘ಸರ್.. ನೀವು ತುಂಬಾ ಹೊಳೆಯುತ್ತೀರಿ. ನಿಮ್ಮ ತ್ವಚೆ ಆರೈಕೆಯ ದಿನಚರಿಯೇನು’ ಮೋದಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆಕೆಯ ಅನಿರೀಕ್ಷಿತ ಪ್ರಶ್ನೆ ಪ್ರಧಾನಿ ಸೇರಿದಂತೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಮೋದಿ ಇನ್ನೂ ಖುಷಿಯಿಂದ, ‘ನಾನು ಅದೆಲ್ಲದರ ಬಗ್ಗೆ ಯೋಚಿಸುವುದಿಲ್ಲ’ ಎಂದು ಉತ್ತರಿಸಿದರು.
ತಂಡದ ಮತ್ತೊಬ್ಬ ಆಟಗಾರ್ತಿ, ‘ಸರ್, ದೇಶವಾಸಿಗಳ ಪ್ರೀತಿಯೇ ನಿಮ್ಮನ್ನು ಪ್ರಕಾಶಮಾನಗೊಳಿಸುತ್ತದೆ’ ಎಂದು ಹೇಳಿದರು. ಈ ಮಾತು ಇನ್ನಷ್ಟು ನಗುವನ್ನು ಪ್ರೇರೇಪಿಸಿತು. ಮತ್ತೆ ಮಾತನಾಡಿದ ಮೋದಿ, ಖಂಡಿತ ಹೌದು. ಇದು ಶಕ್ತಿಯ ದೊಡ್ಡ ಮೂಲವಾಗಿದೆ. ನಾನು ಸರ್ಕಾರದಲ್ಲಿ ಹಲವು ವರ್ಷಗಳನ್ನು ಕಳೆದಿದ್ದೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಐತಿಹಾಸಿಕ ಗೆಲುವಿನ ಕ್ಯಾಚ್ ಹಿಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಚೆಂಡನ್ನು ತಮ್ಮ ಜೇಬಿನಲ್ಲಿಟ್ಟುಕೊಂಡರು. ಅದು ಯಾಕೆ ಎಂಬ ಬಗ್ಗೆ ಪ್ರಧಾನಿಗಳ ಜೊತೆ ಮಾತನಾಡಿದ್ದಾರೆ.
ಇದು ಕೂಡ ದೇವರ ಯೋಜನೆಯೇ ಸರ್. ಇದು ಇದ್ದಕ್ಕಿದ್ದಂತೆ ಆಯಿತು. ಕೊನೆಯ ಕ್ಯಾಚ್ ನನಗೇ ಬರುತ್ತದೆ ಅಂತ ಅಂದುಕೊಂಡಿರಲಿಲ್ಲ. ಇಷ್ಟು ವರ್ಷಗಳ ಕಠಿಣ ಪರಿಶ್ರಮದ ನಂತರ, ಅದು ಆದಾಗ, ಆ ಬಾಲ್ ನನ್ನೊಂದಿಗೆ ಇರಬೇಕೆಂದು ನನಗೆ ಅನಿಸಿತು ಎಂದು ಕೌರ್ ನಗುತ್ತಾ ಪ್ರಧಾನಿ ಬಳಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ 299 ರನ್ ಚೇಸಿಂಗ್‌ನಲ್ಲಿ ಕೊನೆಯ ಭರವಸೆಯಾಗಿ ನಾಡಿನ್ ಡಿ ಕ್ಲರ್ಕ್ ಇದ್ದರು. ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಕ್ಲರ್ಕ್ ಹೊಡೆದ ಚೆಂಡು ಹರ್ಮನ್‌ಪ್ರೀತ್ ಕಡೆಗೆ ಹೋಯಿತು. ಗೆಲುವಿನ ಕ್ಯಾಚ್ ಮೂಲಕ ಭಾರತಕ್ಕೆ ಮೊದಲ ಮಹಿಳಾ ODI ವಿಶ್ವಕಪ್ ಪ್ರಶಸ್ತಿಯನ್ನು ಕ್ಯಾಪ್ಟನ್ ತಂದುಕೊಟ್ಟರು. ಸಂಭ್ರಮಾಚರಣೆಯ ನಡುವೆ, ಅವರು ಸದ್ದಿಲ್ಲದೆ ಚೆಂಡನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡರು. ಇದು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವ ಸ್ಮರಣೀಯ ಕ್ಷಣವಾಗಿತ್ತು. ಆ ಸುಂದರ ಕ್ಷಣವನ್ನು ಪ್ರಧಾನಿ ಮೋದಿ ಅವರ ಜೊತೆ ಹಂಚಿಕೊಂಡರು.
ಭಾನುವಾರ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ನವಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ತಮ್ಮ ಮೊದಲ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಅನ್ನು ಗೆದ್ದುಕೊಂಡಿತು. ವಿಶ್ವಕಪ್ ಗೆದ್ದ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ ಅವರು ಆಟಗಾರರೊಂದಿಗೆ ಸಂವಾದ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















