ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಅನಾರೋಗ್ಯದ ನಡುವೆಯೂ ರಾಜ್ಯಸಭೆಯಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು #H D Devegowda ಇಡೀ ರಾಷ್ಟ್ರದ ಎಲ್ಲಾ ವರ್ಗಗಳ ಜನರಿಗೆ ಶಕ್ತಿ ತುಂಬುವ ಆಯವ್ಯಯ ಮಂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆ ಸಂದರ್ಭದಲ್ಲಿ ಸದನದಲ್ಲಿಯೇ ಹಾಜರಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಪ್ರಧಾನಿಗಳು; ಎಲ್ಲರಿಗೂ ಅನುಕೂಲ ಆಗುವಂತಹ, ದೇಶದ ಅಭಿವೃದ್ಧಿಗೆ ದೂರದೃಷ್ಟಿಯ ಕೊಡುಗೆ ನೀಡುವಂತಹ ಬಜೆಟ್ ಮಂಡಿಸಿದ್ದೀರಿ ಎಂದರು.

ನಗರಗಳಿಗೆ ವಲಸೆ ಬಗ್ಗೆ ಕಳವಳ:
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಿಂದ ಯುವಜನರು ನಗರಗಳಿಗೆ ವಲಸೆ ಬರುವವರ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ದೇವೇಗೌಡರು ಕಳವಳ ವ್ಯಕ್ತಪಡಿಸಿದರು.

ಸಮತೋಲಿತ ಜೀವನೋಪಾಯ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು (MSME) ಬೆಂಬಲಿಸಲು ಹೆಚ್ಚು ಸೂಕ್ತವಾದ ಉಪಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ಮಾಜಿ ಪ್ರಧಾನಿಗಳು ಒತ್ತಿ ಹೇಳಿದರು.

Also read: ಬೆಂಗಳೂರು | ಇಂದಿನಿಂದ 3 ದಿನ ಅನುಗ್ರಹ ಸಂಗೀತ – ನೃತ್ಯ ಮಹೋತ್ಸವ
ಅತಿ ಸಣ್ಣ, ಸಣ್ಣ ಕೈಗಾರಿಕೆಗಳಿಗೆ ಸಾಲದ ಅನುಮೋದನೆ ನೀಡುವಾಗ ಸಿಬಿಲ್ (CIBIL) ಸ್ಕೋರ್ ಮಾನದಂಡವನ್ನು ಪರಿಗಣಿಸಬಾರದು. ಬಡ್ಡಿದರಗಳನ್ನು ಶೇ.7ರಿಂದ 8ಕ್ಕೆ ಇಳಿಸಬೇಕು ಮತ್ತು ಆರಂಭಿಕ ಸಾಲ ಮರುಪಾವತಿಗಾಗಿ ಸ್ವತ್ತುಗಳ ಮರುಸ್ವಾಧೀನ ದಂಡ ಪ್ರಯೋಗವನ್ನು ಕೈಬಿಡಬೇಕು ಎಂದು ದೇವೇಗೌಡರು ಸರಕಾರವನ್ನು ಒತ್ತಾಯಿಸಿದರು.

ಕೃಷಿ ಉತ್ಪನ್ನಗಳಿಗೆ ನಾವು ಹೆಚ್ಚು ಬೆಂಬಲ ನೀಡುವುದನ್ನು ನಾವು ಮುಂದುವರಿಸಬೇಕು. ಬಿಹಾರದಲ್ಲಿ ಮಖಾನಾ ಮಂಡಳಿ ರಚನೆ ಮಾಡಿರುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದ ದೇವೇಗೌಡರು, ಅದೇ ರೀತಿ ಹಲಸಿನ ಹಣ್ಣು, ನೇರಳೆ, ಹುಣಸೆಹಣ್ಣು ಮಂಡಳಿ ರಚಿಸಬೇಕು ಎಂದು ಒತ್ತಾಯ ಮಾಡಿದರು.
ಅತಿ ಕಡಿಮೆ ಬಂಡವಾಳದಿಂದ ಮಖಾನಾ ಬೆಳೆಯಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲ ಆಗುತ್ತಿದೆ. ಮಂಡಳಿ ರಚನೆಯಿಂದ ಮತ್ತಷ್ಟು ಅನುಕೂಲ ಆಗುತ್ತದೆ. ಹೀಗಿದ್ದ ಮೇಲೆ ಕನಿಷ್ಠ ಬಂಡವಾಳದಿಂದ ನೈಸರ್ಗಿಕವಾಗಿ ಬೆಳೆಯಲಾಗುವ ಹಲಸಿನ ಹಣ್ಣು, ನೇರಳೆ ಹಾಗೂ ಹುಣಸೆಹಣ್ಣು ಮಂಡಳಿಯನ್ನು ರಚಿಸಬಾರದೇಕೆ ಎಂದು ಮಾಜಿ ಪ್ರಧಾನಿಗಳು ಸಲಹೆ ನೀಡಿದರು.

ರಾಜ್ಯಸಭೆಯಲ್ಲಿ ಮತ್ತೊಮ್ಮೆ ಬೆಂಗಳೂರಿನ ಕುಡಿಯುವ ನೀರಿನ ಬವಣೆಯ ಬಗ್ಗೆ ಗಮನ ಸೆಳೆದರು ಮಾಜಿ ಪ್ರಧಾನಿಗಳು.
ಬೆಂಗಳೂರಿನಲ್ಲಿ ನೀರಿನ ಟ್ಯಾಂಕರ್‌ಗಳು ಬಡ ನಿವಾಸಿಗಳನ್ನು ಶೋಷಿಸುತ್ತಿವೆ ಎಂಬ ಅಂಶವನ್ನು ಸದನದ ಗಮನಕ್ಕೆ ತಂದ ಅವರು; ಹಣಕಾಸು ಸಚಿವರು ಕುಡಿಯುವ ನೀರಿನ ಯೋಜನೆಗಳಿಗೆ ₹1,400 ಕೋಟಿ ಮಂಜೂರು ಮಾಡಿದ್ದಾರೆ. ಆದರೆ ದೀರ್ಘಾವಧಿಯ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಗೋದಾವರಿ-ಕಾವೇರಿ ಜೋಡಣೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.
ನದಿ ಜಲ ಸಂಪನ್ಮೂಲ ಸದ್ವಿಯೋಗಕ್ಕೆ ಎಲ್ಲಾ ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ. ಅದಕ್ಕೆ ದೀರ್ಘಾವಧಿ ಕಾರ್ಯಕ್ರಮಗಳ ಅನುಷ್ಠಾನ ಅಗತ್ಯವಿದೆ. ಈ ನಿಟ್ಟಿನಲ್ಲಿ ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ತಮ್ಮ ಭಾಷಣದ ಕೊನೆಯಲ್ಲಿ ದೀರ್ಘಾವಧಿಯ ಆರ್ಥಿಕ ಸ್ಥಿರತೆಯತ್ತ ಗಮನ ಹರಿಸುವಂತೆ ಸರಕಾರಕ್ಕೆ ಸಲಹೆ ನೀಡಿದರಲ್ಲದೆ; ನಾವು ಅಲ್ಪಾವಧಿಯ ಜನಪರ ಕ್ರಮಗಳನ್ನು ಮೀರಿ ಮುನ್ನಡೆಯಬೇಕು ಮತ್ತು ಭವಿಷ್ಯದ ಪೀಳಿಗೆಗೆ ಆಸ್ತಿಗಳನ್ನು ನಿರ್ಮಿಸಬೇಕು ಎಂದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಸಣ್ಣ ಅತಿ ಸಣ್ಣ ಕೈಗಾರಿಕೆಗಳಿಗೆ ಬೆಂಬಲ ಹಾಗೂ ಅತ್ಯಂತ ಪ್ರಮುಖವಾದ ನೀರಿನ ಭದ್ರತೆಗೆ ಸರಕಾರದ ಕಡೆಯಿಂದ ತಕ್ಷಣದ ಕ್ರಮಗಳು ಆಗಬೇಕಿದೆ ಎಂದು ಅವರು ಪ್ರತಿಪಾದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post