ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ರಾಮಾನುಜಂ, ಅಂಬೇಡ್ಕರ್, ಅಬ್ದುಲ್ ಕಲಾಂ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದವರೆಲ್ಲರೂ ಉತ್ತಮ ಗಣಿತ ಜ್ಞಾನ ಹೊಂದಿದ್ದರು. ಅಂಕಿಸಂಖ್ಯೆಗಳ ಜ್ಞಾನ ತಾಂತ್ರಿಕವಾಗಿ ವಿಷಯಗಳನ್ನು ಕಲಿಯಲು ಅಗತ್ಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಭೂತಸೌಕರ್ಯ ಅಭಿವೃದ್ಧಿಗೆ ನೀಡಿರುವ ನೆರವಿನಿಂದ ಆರಂಭಿಸಿರುವ ಸಂಶೋಧನಾ ಪ್ರಯೋಗಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧಿವಂತರೆಲ್ಲರೂ ಗಣಿತದ ಜ್ಞಾನವನ್ನು ಬಲ್ಲವರಾಗಿರುತ್ತಾರೆ. ಸೊನ್ನೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ. ಡಾ. ಅಂಬೇಡ್ಕರ್ ಅವರಿಗೆ ಅಂಕಿ-ಸಂಖ್ಯೆಗಳ ಜ್ಞಾನವಿದಿದ್ದರಿಂದಲೇ ಅವರು ಅರ್ಥಶಾಸ್ತ್ರದಲ್ಲಿ ವಿದ್ವಾಂಸರಾಗಲು ಸಾಧ್ಯವಾಯಿತು. ಮೂಲವಿಜ್ಞಾನ, ಸಮಾಜವಿಜ್ಞಾನ ಸೇರಿದಂತೆ ಎಲ್ಲ ಶಿಸ್ತಿನ ವಿದ್ಯಾರ್ಥಿಗಳು ತಮ್ಮ ವಿಷಯಕ್ಕೆ ಸೀಮಿತರಾಗದೆ ಗಣಿತ ವಿಷಯದ ಪರಿಣಿತಿಯನ್ನು ಬೆಳೆಸಿಕೊಳ್ಳಲು ಮುಂದಾಗಬೇಕು. ಅಂತಹ ಅಧ್ಯಯನದಿಂದ ಮಾತ್ರ ಯಶಸ್ಸು ಸಾಧ್ಯ ಎಂದರು.
ಇಲಾಖೆ ನೀಡಿದ ಅನುದಾನದಲ್ಲಿ 15 ಕಂಪ್ಯೂಟರ್‌ಗಳು ಮತ್ತು ಪ್ರತ್ಯೇಕ ಸರ್ವರ್ ಒಳಗೊಂಡ ಸಂಶೋಧನಾ ಪ್ರಯೋಗಾಲಯ ತೆರೆಯಲಾಗಿದೆ. ಕುವೆಂಪು ವಿವಿಯು ವಿದ್ಯಾರ್ಥಿಗಳ ಬೌದ್ಧಿಕ ಅಭಿವೃದ್ಧಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಈ ಸಾಲಿನ ಪ್ರವೇಶಾತಿಯಲ್ಲಿ ಮೂಲವಿಜ್ಞಾನ ವಿಷಯಗಳಿಗೆ ಅತಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದದ್ದು ನಮ್ಮ ಉತ್ಸಾಹ ಹೆಚ್ಚಿಸಿದೆ. ಉಪನ್ಯಾಸಕರ ಸಹಕಾರದಿಂದ ಹೆಚ್ಚಿನ ಜ್ಞಾನವನ್ನು ಪಡೆದು ಅಂತರರಾಷ್ಟ್ರೀಯ ಮಟ್ಟಕ್ಕೆ ಕೀರ್ತಿಯನ್ನು ಕೊಂಡೊಯ್ಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮಲ್ಲಿ ವಿಭಾಗದ ಉಪನ್ಯಾಸಕ ಡಾ.ಬಿ.ಜೆ. ಗಿರೀಶ್, ಡಾ.ಪಿ. ವೆಂಕಟೇಶ್ ಹಾಗೂ ಇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post