ಬೆಂಗಳೂರು: ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಸ್ಪರ್ಧೆಯಿಂದ ಇಡಿಯ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಸೋಲು ನಿಶ್ಚಿತ ಎಂದು ಗುಪ್ತಚರ ಇಲಾಖೆ ವರದಿ ಮಾಡಿದೆ ಎನ್ನಲಾಗಿದೆ.
ಮಂಡ್ಯ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯಿಂದ ಮಾಹಿತಿ ತರಿಸಿಕೊಂಡಿರುವ ಸಿಎಂ, ತಮ್ಮ ಪುತ್ರನ ಸೋಲು ನಿಶ್ಚಿತ ಎಂಬ ಹಿನ್ನೆಲೆಯಲ್ಲಿ ಎಪ್ರಿಲ್ 21ರಿಂದಲೇ ಹೆಚ್ಚು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ.
ಇನ್ನು, ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗನಗೌಡ ಲೋಕಸಭೆ ಚುನಾವಣೆ ವರದಿ ಸಲ್ಲಿಸಿದ್ದು, ಪಕ್ಷೇತರ ಅಭ್ಯರ್ಥಿ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಷ್ ಅವರು ಸುಮಾರು 45 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗಿದ್ದು, ಈ ವಿಚಾರವೂ ಸಹ ಸಿಎಂ ತಲೆ ಕೆಡಿಸಿದೆ.
ಪ್ರಮುಖವಾಗಿ ಗುಪ್ತಚರ ಇಲಾಖೆಯ ವರದಿಯಂತೆ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ಕ್ಷೇತ್ರಗಳಲ್ಲಿ ನಿಖಿಲ್’ಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ ಎಂಬ ಕಾರಣದಿಂದ ಈ ಮೂರೂ ಕ್ಷೇತ್ರದ ಶಾಸಕರನ್ನು ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
Discussion about this post