ನವದೆಹಲಿ: ಇಡಿಯ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯವನ್ನು ಎತ್ತಿ ಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಆರ್ ಬಾನುಮತಿ ಹಾಗೂ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠ, ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು ಎಂದು ಕೋರಿ ಮೂವರು ಅಪರಾಧಿಗಳು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಇಂದು ವಜಾಗೊಳಿಸಿದೆ.
ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದ್ದು, ಈ ಹಿಂದೆಯೇ ಸುಪ್ರೀಂ ಕೋರ್ಟ್ ಎಲ್ಲಾ ಅಂಶಗಳನ್ನು ಗಮನಿಸಿಯೇ ತೀರ್ಪು ನೀಡಿದೆ. ಈಗ ಮತ್ತೆ ನ್ಯಾಯಾಲಯದ ಸಮಯ ಹಾಳು ಮಾಡುವುದು ಸರಿಯಲ್ಲ. ತೀರ್ಪನ್ನು ಮರುಪರಿಶೀಲನೆ ಮಾಡಲು ಕಾರಣಗಳಿಲ್ಲ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿರುವ ನಿರ್ಭಯಾ ತಾಯಿ, ಆಶಾ ದೇವಿ, ನಮಗೆ ನ್ಯಾಯ ದೊರಕಿದೆ. ಆದರೆ, ವಿಳಂಬವಾಗಿ ದೊರೆತಿದೆ. ಅಪರಾಧಿಗಳನ್ನು ಶೀಘ್ರ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮ ಹೋರಾಟ ಇಲ್ಲಿಗೇ ಕೊನೆಗೊಂಡಿಲ್ಲ ಎಂದಿರುವ ಆಕೆ, ನ್ಯಾಯಾಲಯ ತೀರ್ಪು ವಿಳಂಬವಾಗಿದೆ. ಇದು ಸಮಾಜದ ಇತರ ಹೆಣ್ಣು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದು ನಾನು ವಿನಂತಿಸುತ್ತೇನೆ. ಆದಷ್ಟು ಬೇಗ ದೋಷಿಗಳನ್ನು ಗಲ್ಲಿಗೇರಿಸಿ ನಿರ್ಭಯಾಗೆ ನ್ಯಾಯ ಒದಗಿಸಿ. 2012ರಲ್ಲಿ ನಡೆದ ಪೈಶಾಚಿಕ ಘಟನೆಯ ನಂತರ ಸರ್ಕಾರ ಎಚ್ಚೆತ್ತುಕೊಂಡು ಕಾನೂನನ್ನು ತಿದ್ದುಪಡಿ ಮಾಡಿತ್ತು. ಅದೊಂದು ನನಗೆ ನೆಮ್ಮದಿಯಿಂದ ಇರಲು ಸಹಾಯ ಮಾಡಲಿದೆ ಎಂದಿದ್ದಾರೆ.
2012ರ ಡಿಸೆಂಬರ್ 16ರಂದು ರಾಷ್ಟ್ರ ರಾಜಧಾನಿ ನವದೆಹಲಿಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯನ್ನು ಚಲಿಸುವ ಬಸ್ ನಲ್ಲೇ ಭೀಕರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ, ಅತ್ಯಂತ ಬರ್ಭರವಾಗಿ ಆಕೆಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಇಡಿಯ ದೇಶದಲ್ಲಿ ಭಾರೀ ಆಕ್ರೋಶ ಹಾಗೂ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು.
ಇನ್ನು, ಪ್ರಕರಣದ ಇನ್ನೊಬ್ಬ ಆರೋಪಿ ಅಕ್ಷಯ್ ಕುಮಾರ್ ಸಿಂಗ್‌ಗೆ ಈಗಾಗಲೇ ಗಲ್ಲು ಶಿಕ್ಷೆ ಘೋಷಣೆಯಾಗಿದ್ದು, ಆತ ಮರುಪರಿಶೀಲನಾ ಅರ್ಜಿ ಸಲ್ಲಿಸಿಲ್ಲ. ಆದರೆ, ಸದ್ಯದಲ್ಲೇ ಆತನ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಇನ್ನೊಬ್ಬ ಆರೋಪಿಯನ್ನು ಬಾಲಾಪರಾಧಿ ಎಂದು ಪರಿಗಣಿಸಲಾಗಿದ್ದು, ಆತನನ್ನು ಜ್ಯುವೆನಲ್ ಜಸ್ಟೀಸ್ ಬೋರ್ಡ್‌ಗೆ ಒಪ್ಪಿಸಲಾಗಿದೆ.
Discussion about this post