ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಾಮರಾಜನಗರ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾನ್ಯ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಬುಧವಾರ ಮುಂಜಾನೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇ 3ರವರೆಗೆ ರಾಜ್ಯದ ಎಲ್ಲೂ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ರಾಜ್ಯಕ್ಕೆ ಇದರಿಂದ ನಷ್ಟವಾಗುತ್ತಿದ್ದರೂ ರಾಜ್ಯದ ಜನತೆ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು.
ಸಾಮಾಜಿಕ ಅಂತರವನ್ನು ಎಲ್ಲ ಕಡೆಯೂ ಕಾಯ್ದುಕೊಳ್ಳಲು ಎಷ್ಟೇ ಮನವಿ ಮಾಡಿದರೂ ಕೆಲವು ಕಡೆ ವಿಫಲವಾಗುತ್ತಿದೆ. ಇಂಥ ಸಂದರ್ಭದಲ್ಲಿ ಬಾರ್’ಗಳನ್ನು ತೆರೆದರೆ ಕಥೆ ಏನು? ಈ ನಿಟ್ಟಿನಲ್ಲಿ ಸದ್ಯಕ್ಕೆ ಈ ನಿರ್ಧಾರ ಮಾಡಲಾಗಿಲ್ಲ ಎಂದರು.
ಕೇಂದ್ರ ಸರ್ಕಾರ 1 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಬೆಂಬಲ ಬೆಲೆ (ಕನಿಷ್ಠ ಬೆಂಬಲ ಬೆಲೆ) ಆಧಾರದಲ್ಲಿ ಖರೀದಿಸಲು ಅನುಮತಿ ನೀಡಿದೆ. ತೊಗರಿಯನ್ನು ಸರ್ಕಾರದಿಂದ ಕ್ವಿಂಟಾಲ್ ಗೆ ತಲಾ 6,100 ರೂ.ಯಂತೆ (ಕೇಂದ್ರದಿಂದ 5,800 ರೂ. ಹಾಗೂ ರಾಜ್ಯದಿಂದ 300 ರೂ.ವನ್ನು) ಬೆಂಬಲ ಬೆಲೆಯಾಗಿ ಖರೀದಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇನ್ನೂ ಒಂದೂ ಪ್ರಕರಣಗಳು ಪತ್ತೆಯಾಗದ ಚಾಮರಾಜನಗರ, ಶಿವಮೊಗ್ಗ ಸೇರಿ 10 ಜಿಲ್ಲೆಗಳನ್ನು ಲಾಕ್’ಡೌನ್ ಮುಕ್ತಗೊಳಿಸುವ ಬಗ್ಗೆ ಇನ್ನು 2-3 ದಿನದಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಾನೇ ಕರೆಸಿಕೊಂಡಿದ್ದೇನೆ. ಅವರ ತಂಡ ಮೈಸೂರು ಜಿಲ್ಲೆಯಲ್ಲಿ ಸುತ್ತಾಡಿ ಪರಿಶೀಲನೆ ನಡೆಸಿದೆ. ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ಅವರು ಸೂಚಿಸಿದ್ದಲ್ಲದೆ, ವೈದ್ಯಕೀಯವಾಗಿ ಬೇಕಾಗಿರುವ ಅಗತ್ಯ ನೆರವನ್ನು ನೀಡಿದ್ದಾರೆ ಎಂದರು.
ಆಪ್ತಮಿತ್ರ ಆ್ಯಪ್ ಅನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಮೈಸೂರು ಸೇರಿ ಎಲ್ಲ ಕಡೆ ಇದರ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಬೆಂಗಳೂರಿನ ಪಾದರಾಯಣಪುರ ಘಟನೆ ಅಕ್ಷಮ್ಯ ಅಪರಾಧ. ಇಂಥದ್ದನ್ನು ಸರ್ಕಾರ ಸಹಿಸದು. ಶಾಸಕ ಜಮೀರ್ ಅಹ್ಮದ್ ಅವರನ್ನು ಕೇಳಿ ಅಲ್ಲಿಗೆ ಗೃಹಮಂತ್ರಿಗಳು ಹೋಗಬೇಕೇ ಎಂದು ಪ್ರಶ್ನಿಸಿದ ಸಚಿವರು, ಸುಶಿಕ್ಷಿತರು ಮಾಡುವಂತಹ ಕೃತ್ಯ ಇದಲ್ಲ. ಹೀಗಾಗಿ ಇವರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ರೈತರ ಸಾಲದ ವಿಚಾರಕ್ಕೆ ಸಂಬಂಧಪಟ್ಟಂತೆ ಕಳೆದ ಬಾರಿ ವಿತರಿಸಲಾಗಿರುವ 13 ಸಾವಿರ ಕೋಟಿಯಷ್ಟೇ ಮೊತ್ತವನ್ನು ಪುನಃ ಈ ಬಾರಿಯೂ ವಿತರಿಸಲಾಗುವುದು. ಇದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ವಿತರಿಸುವ ಚಿಂತನೆ ಇದ್ದು, ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
1.40 ಲಕ್ಷ ರೈತರಿಗೆ ಸಾಲಮನ್ನಾ ಮಾಡುವುದು ಬಾಕಿ ಇದ್ದು, ಅವರು ದಾಖಲಾತಿ ಸಲ್ಲಿಸಿದ ಮೇಲೆ ಪ್ರಕ್ರಿಯೆ ನಡೆಯುತ್ತಿದೆ. ಸುಸ್ತಿಮನ್ನಾ ಅವಧಿಯನ್ನೂ ವಿಸ್ತರಿಸಲಾಗಿದೆ. ಅದರ ಬಡ್ಡಿದರವನ್ನು ಈ 3 ತಿಂಗಳು ಸರ್ಕಾರವೇ ಭರಿಸುವ ತೀರ್ಮಾನ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಮೊನಿಲೆಂಡರ್’ಗಳು ಹಾಗೂ ಖಾಸಗಿ ಫೈನಾನ್ಸ್ ನವರಿಂದ ಈ ಮೂರು ತಿಂಗಳ ಅವಧಿಯಲ್ಲಿ ಯಾವುದೇ ಕಾರಣಕ್ಕೂ ರೈತರು ಸೇರಿ ನಾಗರಿಕರಿಗೆ ತೊಂದರೆ ಕೊಡಕೂಡದು ಎಂದು ರಾಜ್ಯ ಸರ್ಕಾರದಿಂದ ಆದೇಶವಾಗಿದೆ ಎಂದು ತಿಳಿಸಿದರು.
ಎಪಿಎಂಸಿ ಆವರಣದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅಲ್ಲದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ರೈತರು ಹಾಗೂ ವರ್ತಕರಿಗೆ ಕಡ್ಡಾಯವಾಗಿ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರೈತರು ಹಾಗೂ ವರ್ತಕರ ಬಳಿ ತೆರಳಿ ವಹಿವಾಟಿನ ಬಗ್ಗೆ ಮಾಹಿತಿ ಪಡೆದರು. ಮಾರುಕಟ್ಟೆಗೆ ಉತ್ಪನ್ನಗಳ ಸಾಗಾಟ ವೇಳೆ ಚೆಕ್ ಪೋಸ್ಟ್ ಇಲ್ಲವೇ ಪೊಲೀಸರಿಂದ ತೊಂದರೆಯಾದರೆ ನನ್ನ ಗಮನಕ್ಕೆ ತಂದರೆ ಕ್ರಮವಹಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಶಾಸಕರಾದ ನಿರಂಜನ, ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳಾದ ಎಚ್.ಡಿ. ಆನಂದ್ ಕುಮಾರ್ ಇದ್ದರು. ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರತಿ ಜಿಲ್ಲೆಯ ಎಪಿಎಂಸಿಗೆ ಭೇಟಿ: ಸಚಿವ ಸೋಮಶೇಖರ್
ಪ್ರತಿ ಜಿಲ್ಲೆಗಳ ಎಪಿಎಂಸಿಗೆ ಭೇಟಿ ನೀಡುತ್ತಿದ್ದೇನೆ. ಗುಂಡ್ಲುಪೇಟೆ ಎಪಿಎಂಸಿಗೆ ಭೇಟಿ ಕೊಟ್ಟು ತರಕಾರಿ ಸಾಗಾಟ ಹಾಗೂ ದರ ಸಿಗುತ್ತಿದೆಯೇ ಎಂದು ಪ್ರಶ್ನಿಸಿ ತಿಳಿದುಕೊಂಡಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಕೊಡಲಾಗಿದೆ. ಇಲ್ಲಿ ಕೋಲ್ಡ್ ಸ್ಟೋರೇಜ್ ಬೇಕೆಂಬ ಮನವಿ ಬಂದಿದೆ. ಪ್ರಸ್ತಾವನೆ ಸಲ್ಲಿಸಿದರೆ ತತ್ ಕ್ಷಣವೇ ಮಂಜೂರು ಮಾಡಿಕೊಡುತ್ತೇನೆ ಎಂದರು.
ಕೇರಳ ಸೇರಿ ಅಂತಾರಾಜ್ಯ ಗಡಿಗಳಿಂದ ಬರುವ ವಾಹನ ಹಾಗೂ ಚಾಲಕರನ್ನು ಪರೀಕ್ಷೆಗೊಳಪಡಿಸಿ ರೋಗಲಕ್ಷಣಗಳು ಕಂಡುಬಂದರೆ ಅವರನ್ನು ವಾಪಸ್ ಕಳುಹಿಸುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ಬೆಲ್ಲದ ಮಾರಾಟ ಹೇಗಿದೆ? ತರಕಾರಿಗಳ ಕೊಳ್ಳುವಿಕೆಯಲ್ಲಿ ತೊಂದರೆಯಾಗುತ್ತಿದೆಯೇ? ಎಂಬ ಬಗ್ಗೆ ಸಚಿವರು ಖುದ್ದು ಮಾಹಿತಿ ಪಡೆದುಕೊಂಡರು.
(ವರದಿ: ಡಿ.ಎಲ್. ಹರೀಶ್, ಸಹಕಾರ ಸಚಿವರ ಮಾಧ್ಯಮ ಕಾರ್ಯದರ್ಶಿ)
(ವರದಿ: ಡಿ.ಎಲ್. ಹರೀಶ್, ಸಹಕಾರ ಸಚಿವರ ಮಾಧ್ಯಮ ಕಾರ್ಯದರ್ಶಿ)
Get in Touch With Us info@kalpa.news Whatsapp: 9481252093
Discussion about this post