ಶಿವಮೊಗ್ಗ: ಜಿಲ್ಲಾ ಕೇಂದ್ರ ಕಾರಾಗೃಹ ಹೊಸ ಸ್ಥಳಕ್ಕೆ ಸ್ಥಳಾಂತರಗೊಂಡ ನಂತರ ಹಳೇ ಜೈಲು ಸ್ಥಳದಲ್ಲಿ ಈ ಬಾರಿಯಿಂದ ದಸರಾ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ.
ಹೀಗಾಗಿ, ಈ ಸ್ಥಳವನ್ನು ಹಳೇ ಜೈಲು ಸ್ಥಳ ಎಂದು ಕರೆಯದೇ ಫ್ರೀಂಡ ಪಾರ್ಕ್ ಎಂದು ಕರೆಯಲು ಈಗಾಗಲೇ ಪಾಲಿಕೆ ನಿರ್ಧರಿಸಿದೆ. ಆದರೆ, ಈ ಸ್ಥಳಕ್ಕೆ ಮಾರ್ನವಮಿ ಬಯಲು ಎಂದು ನಾಮಕರಣ ಮಾಡಬೇಕು ಎಂಬ ಬೇಡಿಕೆ ಕೇಳಿಬಂದಿದೆ.
ಶಿವಮೊಗ್ಗ ನಗರದ ಎನ್‌ಟಿ ರಸ್ತೆಯ ಟೆಂಪೊ ಸ್ಟಾಂಡ್ ಬಲ ಭಾಗದಲ್ಲಿರುವ ಜಯಚಾಮ ರಾಜೇಂದ್ರ ನಗರ ಇತಿಹಾಸದಲ್ಲಿನ ಮಾರ್ನವಮಿ ಬಯಲು, ಇಂದಿಗೂ ಅದೇ ಹೆಸರು ಪ್ರಚಲಿತದಲ್ಲಿದೆ. ಸುಮಾರು 40-50 ವರುಷಗಳ ಹಿಂದೆ ನವರಾತ್ರಿಯಲ್ಲಿನೆ ಬನ್ನಿ ಮುಡಿಯುವ ಕಾರ್ಯಕ್ರಮ ಇದೇ ಜಾಗದಲ್ಲಿ ಆಚರಿಸುತ್ತಿದ್ದರಂತೆ. ಆದ್ದರಿಂದ ಈ ವಠಾರವನ್ನು ಮಾರ್ನವಮಿ ಬಯಲು ಎಂದು ಕರೆಯುತ್ತಿದ್ದರಂತೆ. ಇಂದಿಗೂ ಈ ಭಾಗಕ್ಕೆ ಇದೇ ಹೆಸರು ಪ್ರಚಲಿತದಲ್ಲಿದೆ.
ಇಂತಹ ಹೆಸರನ್ನು ಹಳೇ ಜೈಲು ಜಾಗಕ್ಕೆ ನಾಮಕರಣ ಮಾಡಬೇಕು ಎಂಬ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ನಗರದ ಜನರ ಅಭಿಲಾಶೆಯೂ ಸಹ ಇದೇ ಆಗಿದೆ. ಈ ವರ್ಷದಿಂದ ಹಳೇ ಜೈಲು ಸ್ಥಳದಲ್ಲೇ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯುವುದರಿಂದ ಈ ಸ್ಥಳಕ್ಕೆ ಮಾರ್ನವಮಿ ಬಯಲು ಎಂದೇ ನಾಮಕರಣ ಮಾಡಿದರೆ ನಗರದ ಇತಿಹಾಸಕ್ಕೊಂದು ಗೌರವ ಕೊಟ್ಟಂತಾಗುತ್ತದೆ ಎಂಬುದು ನಾಗರಿಕ ಅಭಿಪ್ರಾಯ.
Discussion about this post