2013ರಲ್ಲಿ ನಡೆದ ಎರಡು ಪಡೆಗಳ ನಡುವಿನ ಮುಖಾಮುಖಿಯಲ್ಲಿ ಕಿಮ್ನ ಪಡೆಯ ಹಲವು ಸೈನಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಕಿಮ್ನ ಪಡೆಗಳು ಮರುದಾಳಿ ನಡೆಸಿ ಜಾಂಗ್-ಸಂಗ್-ತೇಕ್ ಪಡೆಗಳ ಹಿಡಿತದಲ್ಲಿದ್ದ ಮೀನುಗಾರಿಕಾ ಕೇಂದ್ರಗಳನ್ನು ಪಡೆಸಿಕೊಂಡವು ಮತ್ತು ಜಾಂಗ್-ಸಂಗ್ನ ಇಬ್ಬರು ಪ್ರಮುಖ ಸಹಾಯಕರನ್ನು ಗಲ್ಲಿಗೇರಿಸಲಾಯಿತು.
ಡಿಸೆಂಬರ್ 8, 2013 ರಂದು ಪಕ್ಷ ವಿರೋಧಿ ಚಟುವಟಿಕೆ, ಗುಂಪುಗಾರಿಕೆ ಮತ್ತು ಅನ್ಯಮಹಿಳೆಯೊಂದಿಗೆ ಅಕ್ರಮ ಸಂಬಂಧ, ರಾಜಕೀಯವಾಗಿ ಲಾಭದ ಮಹತ್ವಾಕಾಂಕ್ಷೆಗಾಗಿ ಅವ್ಯವಹಾರ, ನ್ಯಾಯಾಂಗ, ಕಾನೂನು ಮತ್ತು ಭದ್ರತಾ ಸಂಸ್ಥೆಗಳೆಡೆಗಿನ ಪಕ್ಷದ ನೀತಿಯನ್ನು ದುರ್ಬಲಗೊಳಿಸಿದ ರಾಷ್ಟ್ರದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದ ಹೀಗೆ ಹಲವು ಆರೋಪಗಳನ್ನು ಹೊರಿಸಿ ಜಾಂಗ್-ಸಂಗ್ನನ್ನು ‘ವರ್ಕ್ರ್ಸ್ ಪಾರ್ಟಿ ಆಫ್ ಕೊರಿಯಾ’ದಿಂದ ಪಕ್ಷದ ಪಾಲಿಟ್ಬ್ಯೂರೋದ ನಿರ್ಣಯದಂತೆ ಉಚ್ಛಾಟಿಸಲಾಯಿತು. ಜಾಂಗ್-ಸಂಗ್ನನ್ನು ಪಕ್ಷದಿಂದ ಉಚ್ಛಾಟಿಸುವುದಲ್ಲದೆ ತಕ್ಷಣವೇ ಪಾಲಿಟ್ಬ್ಯೂರೋದ ಸಭೆಯಲ್ಲಿ ಬಂಧಿಸಲಾಯಿತು. ಉತ್ತರ ಕೊರಿಯಾದ ಸರ್ಕಾರಿ ದೂರದರ್ಶನ ಸಂಸ್ಥೆಯು ಇಡೀ ಘಟನೆಯನ್ನು ನೇರಪ್ರಸಾರ ಮಾಡಿತು.
1970ರ ನಂತರ ಈ ರೀತಿ ಹಿರಿಯ ಅಧಿಕಾರಿಯೊಬ್ಬನನ್ನು ಟಿ.ವಿ. ನೇರಪ್ರಸಾರದ ವೇಳೆಯೇ ಬಂಧಿಸಿದ್ದು ಇದೇ ಮೊದಲು. ಬಂಧನದ ನಂತರ ‘ನಾಯಿಗಿಂತ ಕೀಳಾದ ತುಚ್ಛವಾದ ಮನುಷ್ಯ ಜಾಂಗ್-ಸಂಗ್-ತೇಕ್, ಪಕ್ಷ ಮತ್ತು ಪಕ್ಷದ ನಾಯಕರು ತೋರಿದ ಪ್ರೀತಿಗೆ ಮೋಸ ಮಾಡಿ ವಿಶ್ವಾಸಘಾತುಕತನ ಮೆರೆದಿದ್ದಾನೆ. ಹಲವು ವರ್ಷಗಳ ಕಾಲ Democratic People’s Republic of korea ನ್ನು ಅಸ್ಥಿರಗೊಳಿಸಿ ಪಕ್ಷ ಮತ್ತು ದೇಶದ ಮೇಲೆ ಸರ್ವಾಧಿಕಾರ ಚಲಾಯಿಸುವ ಪ್ರಯತ್ನ ಪಟ್ಟಿದ್ದಾನೆ…’ ಎಂಬ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತು.
(ಮುಂದುವರೆಯುವುದು)
Discussion about this post