ಈ ಮೊದಲೇ ಹೇಳಿದಂತೆ ಉತ್ತರ ಕೊರಿಯಾದ ಹಲವು ನಾಗರಿಕರು ಉತ್ತರ ಕೊರಿಯಾ ಎಂಬ ನರಕದಿಂದ ತಪ್ಪಿಸಿಕೊಂಡು ಹೋಗಿ ಬೇರೆಡೆ ಜೀವನ ಕಟ್ಟಿಕೊಳ್ಳುವ ಪ್ರಯತ್ನಿಸುತ್ತಾರೆ. ಸಾಕಷ್ಟು ಜನ ಸಫಲರೂ ಆಗುತ್ತಾರೆ. ಇಂತಹ ಪ್ರಯತ್ನ ಮಾಡಿ ಸಫಲತೆ ಕಂಡವರಲ್ಲಿ ಕಿಮ್-ಜಾಂಗ್-ಇಲ್‌ನ ಮೊದಲ ಮಗ ಕೂಡ ಒಬ್ಬ ಅಂದರೆ ನೀವು ನಂಬಲೇಬೇಕು. ಈ ಹಿಂದಿನ ಸರ್ವಾಧಿಕಾರಿ ಕಿಮ್-ಜಾಂಗ್ ಇಲ್‌ನ ಮೊದಲ ಹೆಂಡತಿಯ ಮಗನೆಯ ‘ಕಿಮ್-ಜಾಂಗ್-ನಾಮ್.
1994ರಲ್ಲಿ ಜಾಂಗ್ -ಇಲ್ ಅಧಿಕಾರಕ್ಕೆ ಬಂದಂದಿನಿಂದ 2001ರವರೆಗೂ ‘ಜಾಂಗ್-ನಾಮ್‌ನನ್ನೇ ಉತ್ತರ ಕೊರಿಯಾದ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿತ್ತು. ಆದರೆ ಆತನ ಹೊಸತನಕ್ಕೆ ಬದಲಾವಣೆಗೆ ಹಾತೊರೆಯುತ್ತಿದ್ದ ಮನಸ್ಥಿತಿ ಮತ್ತು ಸ್ವಲ್ಪ ದೂರದೃಷ್ಟಿಯ ಕೊರತೆ ಇಂದು ಆತ ದೇಶಭ್ರಷ್ಟನಾಗಿ ಚೀನಾದಲ್ಲಿ ವಾಸಿಸುವಂತೆ ಮಾಡಿದೆ. ಕೇವಲ ಇದು ಆತನ ವೈಯಕ್ತಿಕ ಜೀವನದ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಬದಲಾಗಿ ಉತ್ತರ ಕೊರಿಯಾದ ಜನರ ಜೀವನಮಟ್ಟ ಸುಧಾರಿಸಿ, ಸ್ವತಂತ್ರವಾಗಿ ಬದುಕಲು ಇದ್ದ ಒಂದು ಅವಕಾಶವನ್ನು ಮತ್ತು ಉತ್ತರ ಕೊರಿಯಾದೊಂದಿಗಿನ ಇತರ ದೇಶಗಳ ಸಂಬಂಧ, ಬಾಂಧವ್ಯ ವೃದ್ಧಿ ಎಲ್ಲವೂ ಜಾಂಗ್-ನಾಮ್‌ನ ಆತುರದಿಂದಾಗಿ ಮಣ್ಣು ಸೇರಿದೆ.
ಸ್ವಿಜ್ಜರ್‌ಲ್ಯಾಂಡ್‌ನಲ್ಲಿ ಓದಿ ಬಂದಿದ್ದ ಜಾಂಗ್-ನಾಮ್ ಉತ್ತರ ಕೊರಿಯಾಕ್ಕೆ ಹೊರಗಿನಿಂದ ಬಂಡವಾಳ ತರುವ ಮೂಲಕ ದೇಶವನ್ನು ಹೊಸದಿಕ್ಕಿನೆಡೆಗೆ ನಡೆಸಬೇಕೆಂದು ಬಯಸಿದ್ದ. ಹಾಗಂತ ಆತ ರಾಜಕೀಯದಲ್ಲಿ ಜಾಂಗ್-ಇಲ್‌ನ ಉತ್ತರಾಧಿಕಾರಿಯಾಗುವ ವಿಚಾರದಲ್ಲಿ ಹೆಚ್ಚೇನೂ ಆಸಕ್ತಿ ಹೊಂದಿರಲಿಲ್ಲ. ಯಾಕೆಂದರೆ, ಮೊದಲಿನಿಂದಲೂ ಜಾಂಗ್-ನಾಮ್‌ಗೆ ಸಿನಿಮಾದ ಬಗ್ಗೆ ಅಪಾರ ಆಸಕ್ತಿಯಿತ್ತು. ಜಾಂಗ್-ನಾಮ್‌ನ ತಾಯಿ ಸಾಂಗ್ -ಹೇ-ರಿಮ್ ಸ್ವತಃ ಒಬ್ಬ ನಟಿಯಾಗಿದ್ದಳು. ತಂದೆಯ ವಿರೋಧ ಕಟ್ಟಿಕೊಂಡು ಕದ್ದು ಮುಚ್ಚಿ ಮದುವೆಯಾಗಿದ್ದರ ಫಲವೇ ಜಾಂಗ್-ನಾಮ್.
ಮೊದಲ ಮಗ ಜಾಂಗ್-ನಾಮ್ ಬಗ್ಗೆ ಸ್ವಲ್ಪ ಹೆಚ್ಚೇ ಪ್ರೀತಿ ಹೊಂದಿದ್ದ ಜಾಂಗ್-ಇಲ್ ಮಗನಲ್ಲಿರುವ ಸಿನಿಮಾ ಆಸಕ್ತಿ ನೋಡಿ ಮಗನಿಗಾಗಿ ಒಂದು ಪುಟ್ಟ ಮೂವಿ ಸೆಟ್‌ನ್ನು ನಿರ್ಮಿಸಿಕೊಟ್ಟಿದ್ದ. ಈ ವೇಳೆಗಾಗಲೇ ಸಾಕಷ್ಟು ಸಿನಿಮಾ ಸ್ಕ್ರಿಪ್ಟ್ ಗಳನ್ನು ಬರೆದಿದ್ದ ಮತ್ತು ಶಾರ್ಟ್ ಫಿಲ್‌ಮ್ಗಳನ್ನು ನಿರ್ಮಿಸಿದ್ದ ಜಾಂಗ್-ನಾಮ್ ಉತ್ತರ ಕೊರಿಯಾದ ಉತ್ತರಾಧಿಕಾರಿಯಾಗುವ ವಿಚಾರದಲ್ಲಿ ಆಸಕ್ತಿ ಕಳೆದುಕೊಂಡಿದ್ದ. ಈ ವಿಚಾರವನ್ನು ಜಾಂಗ್-ನಾಮ್‌ನ ದೊಡ್ಡಮ್ಮ ‘ಸಾಂಗ್-ಹೇ- ರಾಂಗ್’ 2000ರಲ್ಲಿ ಖಚಿತಪಡಿಸಿದ್ದಳು. ಸಿನಿಮಾ ಆಸಕ್ತಿಯಿಂದಾಗಿ ಜಾಂಗ್-ನಾಮ್ ಆಗಾಗ ಜಪಾನ್‌ಗೆ ಪ್ರಯಾಣ ಬೆಳೆಸುತ್ತಿದ್ದ.
(ಮುಂದುವರೆಯುವುದು)














