ಸಾಗರ: ಮಂಗನ ಕಾಯಿಲೆಯಿಂದ ಆಗಿರುವ ಸಮಸ್ಯೆಗಳ ಕುರಿತಾಗಿ ಸಮರ್ಪಕವಾಗಿ ಮಾಹಿತಿ ನೀಡಲು ತಡವರಿಸಿದ ಅಧಿಕಾರಿಯನ್ನು ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಮಂಗನ ಕಾಯಿಲೆ ಹರಡುವುದನ್ನು ತಡೆಗಟ್ಟುವ ಸಲುವಾಗಿ ತಾಪಂ ಸಭಾಂಗಣದಲ್ಲಿ ನಡೆದ ಸಭೆಗೆ ಮಾಹಿತಿ ಇಲ್ಲದೇ ಬಂದಿದ್ದ ಮಂಗನ ಕಾಯಿಲೆ ವಿಭಾಗದ ಡೆಪ್ಯೂಟಿ ಡೈರೆಕ್ಟರ್ ರವಿಕುಮಾರ್ ಅವರನ್ನು ಕಾಂತೇಶ್ ತರಾಟೆಗೆ ತೆಗೆದುಕೊಂಡರು.
ನಾವಿಲ್ಲಿಗೆ ಶೋಕಿ ಮಾಡಲು ಬಂದಿದ್ದೇವೆ ಎಂದು ತಿಳಿದಿದ್ದೀರಾರಾ? ಸಭೆಗೆ ಬರುವಾಗ ಸಂಪೂರ್ಣ ಮಾಹಿತಿ ಹಾಗೂ ಅಂಕಿ ಅಂಶ ತರಬೇಕು ಎಂದು ತಿಳಿದಿಲ್ಲವೇ? ಜನರ ಜೀವದ ಜೊತೆಯಲ್ಲಿ ಆಟವಾಡುತ್ತೀರಾ ಎಂದು ಚಾಟಿ ಬೀಸಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿನ ಚಿಕಿತ್ಸೆಯ ಬಗ್ಗೆ ರೋಗಿಗಳಿಗೆ ಸಮಾಧಾನ ಇಲ್ಲದ ಕಾರಣ ಅವರನ್ನೆಲ್ಲಾ ಮಣಿಪಾಲಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಅಧಿಕಾರಿ ವೆಂಕಟೇಶ್ ನೀಡಿದ ಮಾಹಿತಿಗೆ ಕೆಂಡಾಮಂಡಲರಾದ ಕಾಂತೇಶ್, ಜಿಲ್ಲಾ ಸರ್ಕಾರಿ ಆಸ್ಪತ್ರೆ ಸರಿಯಾಗಿಲ್ಲ, ಕಳಪೆ ಎಂಬ ತೀರ್ಮಾನಕ್ಕೆ ನೀವೇ ಬಂದಿದ್ದಿÃರಾ ಎಂದು ಖಾರವಾಗಿ ಪ್ರಶ್ನಿಸಿದರು.
ಮಂಗನ ಕಾಯಿಲೆಯಿಂದಾಗಿ ಸಾಗರ ತಾಲೂಕಿನಲ್ಲಿ ಈಗಾಗಲೇ ಆರು ಮಂದಿ ಮೃತರಾಗಿದ್ದಾರೆ. ಇನ್ನು ಮುಂದೆ ಒಬ್ಬನೇ ಒಬ್ಬ ವ್ಯಕ್ತಿ ಇದರಿಂದಾಗಿ ಮೃತಪಟ್ಟರೆ ನಾನೇ ಸ್ವತಃ ನಿಮ್ಮ ಕಚೇರಿ ಎದುರಿಗೆ ಧರಣಿ ನಡೆಸಬೇಕಾಗುತ್ತದೆ. ಮಾತ್ರವಲ್ಲ, ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Discussion about this post