ಧುಲೆ: ಕಣಿವೆ ರಾಜ್ಯದ ಪುಲ್ವಾಮದಲ್ಲಿ ಕ್ರೂರ ದಾಳಿ ನಡೆಸಿ ಸಿಆರ್’ಪಿಎಫ್’ನ 42 ಯೋಧರನ್ನು ಬಲಿ ಪಡೆದ ಉಗ್ರರಿಗೆ ಸೇರಿದಂತೆ ಪಾಕಿಸ್ಥಾನಕ್ಕೂ ಎಚ್ಚರಿಕೆ ಸಂದೇಶ ರವಾನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸೇನೆಗೆ ನಾವು ಸಂಪೂರ್ಣ ಸ್ವಾತಂತ್ರವನ್ನು ನೀಡಿದ್ದೇವೆ. ಯಾವುದೇ ಕಾರಣಕ್ಕೂ ನಿಮ್ಮನ್ನು ಬಿಡುವುದಿಲ್ಲ. ನಮ್ಮ ಯೋಧರು ನುಗ್ಗಿ ನಿಮ್ಮನ್ನು ಭೇಟಿಯಾಡಲಿದ್ದಾರೆ ಎಂದು ಘರ್ಜನೆ ಮಾಡಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ವೀರಸ್ವರ್ಗ ಸೇರಿದ ಮಹಾರಾಷ್ಟ್ರದ ಯೋಧರಿಗೆ ಅಂತಿಮ ನಮನ ಸಲ್ಲಿಸಿ ಅವರು ಮಾತನಾಡಿದರು.
ನಾವು ನಮ್ಮ ಯೋಧರು ಹಾಗೂ ಸೇನೆಯ ಬಗ್ಗೆ ಸಂಪೂರ್ಣವಾಗಿ ನಂಬಿಕೆಯಿಟ್ಟಿದ್ದೇವೆ. ನಮ್ಮ ಸೇನೆಯ ಬಲದ ಬಗ್ಗೆ ನಮಗೆ ಪೂರ್ಣ ವಿಶ್ವಾಸವಿದೆ. ನಮ್ಮ ಯೋಧರ ತ್ಯಾಗವನ್ನು ನಾವು ಎಂದಿಗೂ ಸ್ಮರಿಸುತ್ತೇವೆ ಹಾಗೂ ಅದನ್ನು ವ್ಯರ್ಥವಾಗಲು ನಾವು ಬಿಡುವುದಿಲ್ಲ ಎಂದಿದ್ದಾರೆ.
ಅಲ್ಲಿ ನರೆದಿದ್ದ ರೈತರು ಹಾಗೂ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನೀವು ಯಾವುದೇ ಕಾರಣಕ್ಕೂ ಚಿಂತಿಸುವ ಅಗತ್ಯವಿಲ್ಲ. ನಮ್ಮ ಸೈನಿಕರು ಶತ್ರುಗಳ ಸ್ಥಳಕ್ಕೆ ನುಗ್ಗಿ ಅವರನ್ನು ಭೇಟೆಯಾಡಲಿದ್ದಾರೆ. ನಮ್ಮ ಸೇನೆಯ ಬಗ್ಗೆ ನಮಗೆ ಸಂಪೂರ್ಣ ನಂಬಿಕೆಯಿದೆ ಎಂದಿದ್ದಾರೆ.
ಶತ್ರುಗಳ ವಿರುದ್ಧದ ಹೋರಾಟವನ್ನು ಯಾವಾಗ ಆರಂಭಿಸಬೇಕು, ಹೇಗೆ ದಾಳಿ ನಡೆಸಬೇಕು ಎಂಬುದನ್ನು ನಮ್ಮ ಭದ್ರತಾ ಪಡೆಗಳ ನಿರ್ಧಾರಕ್ಕೆ ಬಿಟ್ಟಿದ್ದೇವೆ. ದೇಶವಾಸಿಗಳ ಆಶಯದಂತೆ ಶತ್ರುಗಳನ್ನು ನಮ್ಮ ಸೈನಿಕರು ಬಲಿ ಹಾಕುವುದು ನಿಶ್ಚಿತ ಎಂದು ಭರವಸೆ ನೀಡಿದ್ದಾರೆ.
Discussion about this post