ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪಾವಗಡ: ವಿದ್ಯಾರ್ಥಿಗಳು ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಆಧುನಿಕ ಜಗತ್ತಿನಲ್ಲಿ ಧೈರ್ಯವಾಗಿ ಬದುಕುವ ಜೀವನದ ಮೌಲ್ಯಗಳನ್ನು ಕಲಿಸುವ ಕಾರ್ಯವಾಗಬೇಕಾಗಿದೆ ಎಂದು ಪ್ರಾಂಶುಪಾಲರಾದ ಆರ್.ಆದಿಶೇಷರಾವ್ ತಿಳಿಸಿದರು.
ನಗರದ ಶೃಂಗೇರಿ ಶ್ರೀಸರಸ್ವತಿ ವಿದ್ಯಾಪೀಠದ ಆವರಣದಲ್ಲಿ ಶಾಲಾ ವಾರ್ಷಿಕೋತ್ಸವದ ಹೊಂಗಿರಣ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಮಾಜದಲ್ಲಿ ಬದುಕಲು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಹಾಗೂ ಕೌಶಲ್ಯಗಳು ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಎಲ್ಕರಿಗಿಂತ ವಿಭಿನ್ನವಾಗಿ ಕಾಣುವ ಬಯಕೆಯಿದೆ. ಇದರಂತೆ ಗುಣಾತ್ಮಕ ಶಿಕ್ಷಣದ ಜೊತೆಗೆ ವಿದೇಯತೆ, ವಿನಮ್ರತೆ ಹಾಗೂ ವಿಶ್ವಾಸವನ್ನು ಗಳಿಸುವ ಕೌಶಲಗಳನ್ನು ಕಲಿಸಬೇಕಾಗಿದೆ. ಶಿಕ್ಷಕರು ಪ್ರಾಮಾಣಿಕ ಪ್ರಯತ್ನಕ್ಕೆ ಪೂರಕವಾಗಿ ಪೋಷಕರು ಕೈಜೋಡಿಸಿ ಶ್ರಮಿಸಿದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಈ ರಾಷ್ಟ್ರದ ಸತ್ಪ್ರಜೆಗಳಾಗಿ ರೂಪಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಾಲೆಯ ಕಾರ್ಯದರ್ಶಿ ಪಿ.ಮಂಜುಳಾ ಮಾತನಾಡಿ, ಕಳೆದ 20 ವರ್ಷಗಳಿಂದ ತಾಲ್ಲೂಕಿನ ಸಾವಿರಾರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಈ ಶಾಲೆಯು ಅವಿರತವಾಗಿ ಶ್ರಮಿಸಿದೆ. ಈ ಶಾಲೆಯಲ್ಲಿ ಕಲಿತಂತಹ ಸಾಕಷ್ಟು ವಿದ್ಯಾರ್ಥಿಗಳು ಇಂದು ರಾಜ್ಯದ ವಿವಿದೆಡೆಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕನಿಷ್ಟ ಶುಲ್ಕದಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವ ಎಲ್ಲಾ ಆಯಾಮಗಳಲ್ಲಿ ಶಿಕ್ಷಣವನ್ನು ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಶಾಲಾ ಆಡಳಿತ ಮಂಡಳಿಯು ಮಾಡುತ್ತಿದೆ. ನಿಮ್ಮೆಲ್ಲರ ಸಹಕಾರದಿಂದ ಮತ್ತಷ್ಟು ಗುಣಾತ್ಮಕ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ವಾಣಿಜ್ಯೋದ್ಯಮಿ ಜಿ.ಟಿ.ಗಿರೀಶ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಸರೆಯಾಗಬಲ್ಲ ಶಿಕ್ಷಣದ ಜೊತೆಗೆ ಆಧುನಿಕ ತಂತ್ರಜ್ಞಾನ ಆಧಾರಿತವಾದ ಎಲ್ಲಾ ತರಬೇತಿಗಳನ್ನು ನೀಡಲು ಶಿಕ್ಷಕರು ಸಿದ್ಧರಿದ್ದಾರೆ. ಮಕ್ಕಳ ಕಲಿಕಾಸಕ್ತಿಗೆ ಅನುಗುಣವಾಗಿ ಅವರ ಕಲಿಕಾ ದಾಹವನ್ನು ನೀಗಿಸಲು ಶಕ್ತಿಮೀರಿ ಪ್ರಯತ್ನಿಸಲಾಗುವುದು. ತಾವು ನೀಡುವ ಶುಲ್ಕಕ್ಕಿಂತಲೂ ಹೆಚ್ಚಿನ ಮೌಲ್ಯದ ಶಿಕ್ಷಣವನ್ನು ನೀಡಲು ಈ ಶಾಲೆಯ ಆಡಳಿತ ಮಂಡಳಿಯು ಶ್ರಮಿಸಲು ಸಿದ್ಧವಾಗಿದೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶನವನ್ನು ನೀಡಲಾಯಿತು. ತರಗತಿವಾರು ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹೊಂಗಿರಣ ವೇದಿಕೆಯಲ್ಲಿ ಅಭಿನಂಧಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರಾದ ಶ್ರೀರಾಮ್, ಪ್ರಾಂಶುಪಾಲರಾದ ಬಿ.ಎಸ್.ರಾಜಶೇಖರ್, ಮಧುಕರ್ ಸೂಡ, ಇಸಿಒ ಶಿವಮೂರ್ತಿ ನಾಯ್ಕ್ ಮಕ್ಕಳ ಶಿಕ್ಷಣದ ಪ್ರಗತಿಯ ಬಗ್ಗೆ ವೇದಿಕೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ದಯಾನಂದ್, ಹನುಮಂತರಾಯಪ್ಪ, ಬಿ.ಆರ್.ಪಿ ಮಾರತೇಶ್ ಶಾಲೆಯ ನಿರ್ದೇಶಕರಾದ ರಾಮಕೃಷ್ಣಪ್ಪ, ಗೌರಮ್ಮ, ಜಿ.ಆರ್.ನಂಜೇಗೌಡ, ಜಿ.ಆರ್.ಶ್ರೀನಿವಾಸ್, ಎ.ಎಸ್.ಜಗನ್ನಾಥ್, ಕಲ್ಪನಾ, ಅನಿತಾಲಕ್ಷ್ಮಿ, ಶೃತಿ, ಪ್ರಾಧ್ಯಾಪಕರಾದ ಡಾ.ಪಿ.ಟಿ.ಶ್ರೀನಿವಾಸನಾಯಕ್, ನಿವೃತ್ತ ಪ್ರಾಂಶುಪಾಲರಾದ ಸಣ್ಣ ನಾಗಪ್ಪ, ಮುಖಂಡರಾದ ಮೈಲಾರೆಡ್ಡಿ, ಸುಧಾಕರರೆಡ್ಡಿ, ಈಶ್ವರಪ್ಪ, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಪಾವಗಡ)
Get in Touch With Us info@kalpa.news Whatsapp: 9481252093
Discussion about this post