ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜನನ ಹಾಗೂ ಪೂರ್ವಾಶ್ರಮ
ಸುಬ್ರಹ್ಮಣ್ಯ ಸಮೀಪದ ರಾಮಕುಂಜದ ಮೀಯಾರು ನಿವಾಸಿಗಳಾಗಿದ್ದ ಎಂ. ನಾರಾಯಣಾಚಾರ್ಯ ಹಾಗೂ ಕಮಲಮ್ಮ ದಂಪತಿಗಳ ಎರಡನೇ ಪುತ್ರರಾಗಿ 1931ರ ಆಗಸ್ಟ್ 27ರಂದು ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ವೆಂಕಟರಾಮು.
ರಾಮಕುಂಜೇಶ್ವರ ಎಂಬ ಹಳ್ಳಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೆಂಕಟರಮಣರಿಗೆ ಏಳನೆಯ ವಯಸ್ಸಿನಲ್ಲಿ ಬ್ರಹ್ಮೋಪದೇಶವಾಯಿತು. ನಂತರ ಒಮ್ಮೆ ರಾಮಕುಂಜಕ್ಕೆ ಆಗಮಿಸಿದ್ದ ಪೇಜಾವರ ಮಠದ ಶ್ರೀ ವಿಶ್ವಮಾನ್ಯ ತೀರ್ಥರು, ವೆಂಕಟರಾಮುವನ್ನು ಕರೆದು ಸನ್ಯಾಸಿಯಾಗುತ್ತೀಯಾ? ಎಂದು ಕೇಳಿದ ಪ್ರಶ್ನೆಗೆ, ತಕ್ಷಣವೇ ‘ಹ್ಞೂಂ’ ಎಂಬ ಉತ್ತರ ಬಂತು.
ಸನ್ಯಾಸ ದೀಕ್ಷೆ
ಸರಿ, ತಕ್ಷಣವೇ ನಿರ್ಧಾರ ಕೈಗೊಂಡ ಗುರುಗಳು, 1938ರ ಡಿಸೆಂಬರ್ 3ರಂದು ಹಂಪಿಯ ಚಕ್ರತೀರ್ಥದಲ್ಲಿ ವೆಂಕಟರಾಮುವಿಗೆ 8ನೆಯ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ನೀಡಿ, ವಿಶ್ವೇಶ ತೀರ್ಥರೆಂದು ನಾಮಾಂಕಿತವನ್ನಿತ್ತರು. ಅಲ್ಲಿಂದ ನಡೆದದ್ದು ವೈಭವೋಪೇತ ಇತಿಹಾಸವೇ ಸರಿ.
ಶ್ರೀ ವಿದ್ಯಾಮಾನ್ಯರು ವಿದ್ವತ್ ಸಭೆಯೊಂದನ್ನು ನಡೆಸುತ್ತಿದ್ದರು. ಬಾಲ ಯತಿಯಾಗಿದ್ದ ಶ್ರೀಗಳನ್ನು ಒಮ್ಮೆ ಸಭೆಯ ಅಧ್ಯಕ್ಷರನ್ನಾಗಿ ಗುರುಗಳು ನೇಮಿಸಿದ್ದರು. ನಾಡಿನೆಲ್ಲೆಡೆಯಿಂದ ಆಗಮಿಸಿದ್ದ ಹಿರಿಯ ವಿದ್ವಾಂಸರ ಹಾಜರಿದ್ದ ಸಭೆಯಲ್ಲಿ, ಬಾಲ ಯತಿ ವಿಶ್ವೇಶ ತೀರ್ಥರು, ಶಾರ್ದೂಲ ವಿಕ್ರೀಡಿತದಲ್ಲಿ ರಚಿಸಿದ ಪದ್ಯ ಇಡೀ ಸಭೆಯನ್ನು ಬೆರಗುಗೊಳಿಸಿತು. ನಂತರ ಗುರು ವಿದ್ಯಾಮಾನ್ಯರಲ್ಲಿ ಅಧ್ಯಯನ ಆರಂಭಿಸಿದ ಶ್ರೀಗಳು, ಸುಮಾರು ಎಂಟು ವರ್ಷಗಳ ಕಾಲ ಸತತವಾಗಿ ಧಾರ್ಮಿಕ ಗ್ರಂಥಗಳ ಅಧ್ಯಯನ ನಡೆಸಿದರು.
1951ರಲ್ಲಿ ನಂಜನಗೂಡಿನಲ್ಲಿ ಆಗಮತ್ರಯ ವಿದ್ವಾಂಸರ ಸಮ್ಮೇಳನ ಅಂದಿನ ಮೈಸೂರು ಅರಸರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಉಪಸ್ಥಿತಿಯಲ್ಲಿ ನಡೆಯಿತು. ಆಗ 20 ವರ್ಷದ ತರುಣ ಯತಿ ವಿಶ್ವೇಶ ತೀರ್ಥರ ಪಾಂಡಿತ್ಯ ಕಂಡು ತಲೆದೂಗಿದ್ದ ಅರಸರು, ಶ್ರೀಗಳನ್ನು ಅರಮನೆಗೆ ಕರೆಸಿ, ಅವರಿಂದ ಪೂಜೆ ಮಾಡಿಸಿದರು.
ಅಲ್ಲಿಂದ ಆರಂಭವಾದ ಶ್ರೀಗಳ ಒಂದೊಂದು ದಿನದ ಮಹತ್ಕಾರ್ಯವೂ ಒಂದೊಂದು ಇತಿಹಾಸವಾಗುತ್ತಾ ಬಂದಿವೆ. ಸರಳವೂ, ಗಂಭೀರವೂ, ಮಗುವಿನಂತೆ ಮುಗ್ದತ್ವವನ್ನೂ ಹೊಂದಿರುವ ಶ್ರೀಗಳನ್ನು ಬಹುಷಃ ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಎನ್ನುವುದು ಶ್ರೀಗಳನ್ನು ಹತ್ತಿರದಿಂದ ಬಲ್ಲವರ ನುಡಿ.
ಸಕಲರನ್ನೂ ಆಕರ್ಷಿಸುವ ಸೌಜನ್ಯ, ಜ್ಞಾನದ ಪಾಂಡಿತ್ಯ, ವ್ಯಾವಹಾರಿಕ ಕೌಶಲ, ದೀನ ದಲಿತರ ಬಗೆಗಿನ ಅನುಕಂಪ ಸೇರಿದಂತೆ ಮಾನವತೆಯೇ ಮೇಳೈಸಿರುವಂತೆ ನಡೆದಾಡುವ ದೇವರಾಗಿ ಆಸ್ತಿಕರ ಆಸ್ತಿಯಾಗಿ ಕಂಗೊಳಿಸುತ್ತಿರುವ ಪೇಜಾವರ ಶ್ರೀಗಳನ್ನು ಕಂಡು ಆಕರ್ಷಿತರಾಗದವರೇ ಇಲ್ಲ ಎನ್ನಬಹುದು. ಹಾಗೊಮ್ಮೆ ಇದ್ದರೆ, ಅದು ಅಂತಹ ವ್ಯಕ್ತಿಗಳ ದುರ್ದೈವವೇ ಸರಿ.
Get in Touch With Us info@kalpa.news Whatsapp: 9481252093
Discussion about this post