ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತೀವ್ರ ಹೃದಯಾಘಾತದಿಂದ ಶುಕ್ರವಾರ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್(46) ಅವರ ಅಂತ್ಯಸಂಸ್ಕಾರ ಅವರ ತಂದೆ ಡಾ|ರಾಜಕುಮಾರ್ ಅವರ ಸಮಾಧಿ ಪಕ್ಕದಲ್ಲಿಯೇ ಇಂದು ನೆರವೇರಿತು.
ಕಂಠೀರವ ಸ್ಟುಡಿಯೋದಲ್ಲಿರುವ ರಾಜಕುಮಾರ್ ಅವರ ಸಮಾಧಿ ಪಕ್ಕದಲ್ಲಿಯೇ ಅಪ್ಪು ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ರಾಘವೇಂದ್ರ ರಾಜಕುಮಾರ್ ಪುತ್ರ ವಿನಯ್ ಅವರು ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಿದರು. ತಂದೆಯ ಸಮಾಧಿ ಪಕ್ಕದಲ್ಲಿಯೇ ಪುನೀತ್ ಅಂತ್ಯಸಂಸ್ಕಾರ ನಡೆದಿದ್ದು, ಈ ಸ್ಥಳದಲ್ಲಿಯೇ ಸಮಾಧಿ ನಿರ್ಮಿಸಲಾಗುತ್ತದೆ.
ಅಂತಿಮ ವಿಧಿವಿಧಾನದ ವೇಳೆ ಪುನೀತ್ ಪತ್ನಿ, ಪುತ್ರಿಯರು, ಶಿವರಾಜ್ ಕುಮಾರ್ ಸೇರಿದಂತೆ ಕುಟುಂಬಸ್ಥರಲ್ಲಿ ದುಃಖದ ಕಟ್ಟೆ ಒಡೆದಿತ್ತು. ಕೊನೆಯ ಬಾರಿ ಕುಟುಂಬಸ್ಥರು ತಮ್ಮ ಮುದ್ದಿನ ಅಪ್ಪುವನ್ನು ಅಪ್ಪಿ ಬೀಳ್ಕೊಟ್ಟರು. ತಮ್ಮ ಕಣ್ಣಮುಂದೆಯೇ ಪ್ರೀತಿಯ ತಮ್ಮನ ಅಂತ್ಯಸಂಸ್ಕಾರ ಕಂಡು ಶಿವರಾಜಕುಮಾರ್ ಅಕ್ಷರಶಃ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಕರಳುಹಿಂಡುವಂತಿತ್ತು.
ಅಂತ್ಯಸಂಸ್ಕಾರಕ್ಕೂ ಮುನ್ನ ಸಕಲ ಸರ್ಕಾರಿ ಗೌವರ ಸಲ್ಲಿಸಿ, ರಾಷ್ಟ್ರಧ್ವಜವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.
ಅಂತ್ಯಸಂಸ್ಕಾರದ ವೇಳೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಆರ್. ಅಶೋಕ್ ಸೇರಿ ಹಲವು ಸಚಿವರು, ನಟರಾದ ರವಿಚಂದ್ರನ್, ಯಶ್, ಶಶಿಕುಮಾರ್, ಸುದೀಪ್, ಉಪೇಂದ್ರ, ವಿಜಯ ರಾಘವೇಂದ್ರ, ಶ್ರೀಮುರಳಿ, ಸುಧಾರಾಣಿ, ನಿರ್ಮಾಪಕ ರಾಕ್’ಲೈನ್ ವೆಂಕಟೇಶ್ ಸೇರಿದಂತೆ ಗಣ್ಯಾತಿಗಣ್ಯರು ಪಾಲ್ಗೊಂಡು ಕನ್ನಡದ ಅಪ್ಪುವನ್ನು ಕಣ್ಣಿರಿನಿಂದ ಬೀಳ್ಕೊಟ್ಟರು. ಕಂಠೀರವ ಸ್ಟುಡಿಯೋ ಒಳಗೆ ಕುಟುಂಬಸ್ತರಿಗೆ ಹಾಗೂ ಗಣ್ಯಾತಿಗಣ್ಯರಿಗೆ ಮಾತ್ರ ಪ್ರವೇಶ ಒದಗಿಸಲಾಗಿತ್ತು.
ಸಿಎಂ ಬೊಮ್ಮಾಯಿ, ಮಾಜಿ ಸಿಎಂಗಳು, ಉಪಸ್ಥಿತರಿದ್ದ ನಟರು ಚಿತ್ರರಂಗದ ಗಣ್ಯರುಗಳೆಲ್ಲರೂ ಅಪ್ಪು ಅಂತ್ಯಸಂಸ್ಕಾರದ ವೇಳೆ ಹಿಡಿ ಮಣ್ಣು ಹಾಕುವ ಮೂಲಕ ವಿಧಾನ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post