ಬೆಂಗಳೂರು: ಇಹಲೋಕ ತ್ಯಜಿಸಿದರುವ ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತಿಮಸಂಸ್ಕಾರಕ್ಕೆ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ.
ಪುರೋಹಿತರಾದ ಶ್ರೀನಾಥ್ ಶರ್ಮಾ ಅವರ ನೇತೃತ್ವದಲ್ಲಿ ವೈದಿಕರ ತಂಡ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ.
ಈ ಕುರಿತಂತೆ ಮಾತನಾಡಿರುವ ಎಂ.ಜಿ. ಶ್ರೀನಾಥ್ ಶರ್ಮಾ, ಸಂಪ್ರದಾಯದಂತೆ ಅವರ ಪತ್ನಿಯವರ ಅನುಮತಿ ಪಡೆದು ಕರ್ತೃಗಳ ಮುಖಾಂತರ ಎಲ್ಲ ಕಾರ್ಯಗಳನ್ನು ನಡೆಸಲಾಗುತ್ತದೆ. ಹಿಂದೂ ವೇಳೆ ಲೆಕ್ಕಾಚಾರಗಳ ಪ್ರಕಾರ ಅನಂತಕುಮಾರ್ ಅವರು ನಿಧನರಾಗಿ ಇಂದಿಗೆ ಮೂರು ದಿನಗಳಾಗುತ್ತದೆ. ಹೀಗಾಗಿ, ಒಂದು ಹಾಗೂ ಎರಡನೆಯ ದಿನ ನಡೆಸುವ ಕಾರ್ಯಗಳು ವಿಳಂಬವಾದ ಹಿನ್ನೆಲೆಯಲ್ಲಿ ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡು ಸಂಸ್ಕಾರಗಳನ್ನು ನಡೆಸಲಾಗುತ್ತದೆ ಎಂದರು.
ಋಗ್ವೇದ ಪೂರ್ವಪರ ಪ್ರಯೋಗಳನ್ನು ನಡೆಸಲಿದ್ದು, ಒಟ್ಟು 45 ನಿಮಿಷಗಳ ಕಾಲ ಸಂಸ್ಕಾರ ಕಾರ್ಯ ನಡೆಯಲಿದೆ. ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ, ಅವರ ಸಹೋದರ ನಂದಕುಮಾರ್ ಅವರು ಪುತ್ರ ಸ್ಥಾನದಲ್ಲಿ ಎಲ್ಲ ಕಾರ್ಯಗಳನ್ನು ಮಾಡಲಿದ್ದಾರೆ ಎಂದರು.
ಅಂತಿಮ ಸಂಸ್ಕಾರಕ್ಕೆ 35 ಕೆಜಿ ತುಪ್ಪ, 1 ಟನ್ ಸರ್ವೆ ಮರದ ಕಟ್ಟಿಗೆ, 5 ಕೆಜಿ ಕರ್ಫೂರ ಬಳಕೆ ಮಾಡಲಿದ್ದು, ತತ್ಸಂಬಂಧಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಅಂತ್ಯಕ್ರಿಯೆ ವೇಳೆ 50 ಜನ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಸೇರಿದಂತೆ ರಾಜ್ಯ ಮಟ್ಟದ ಕೆಲವು ನಾಯಕರಿಗೆ ಮಾತ್ರ ಒಳಗಡೆ ಅವಕಾಶ ಕಲ್ಪಿಸಲಾಗಿದೆ.
ಇನ್ನು, ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಸಾರ್ವಜನಿಕರು ವೀಕ್ಷಿಸಲು ರುದ್ರಭೂಮಿಯ ಹೊರಭಾಗದಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಅಂತ್ಯಸಂಸ್ಕಾರದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಇಡಿಯ ಪ್ರದೇಶದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
Discussion about this post