ಕಲ್ಪ ಮೀಡಿಯಾ ಹೌಸ್ | ಮೈಸೂರು |
ದಸರಾ ಮಹೋತ್ಸವ ಉದ್ಘಾಟಿಸಿದ ಪ್ರಪ್ರಥಮ ರಾಷ್ಟ್ರಪತಿ ಎಂಬ ಗೌರವಕ್ಕೆ ಪಾತ್ರರಾದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿನಲ್ಲೇ ತಯಾರಾದ ಮೈಸೂರು ರೇಷ್ಮೆ ಸೀರೆ ಧರಿಸಿ, ದಸರಾ ಉದ್ಘಾಟಿಸುವ ಮೂಲಕ ಮೈಸೂರಿಗೆ ವಿಶೇಷ ಗೌರವ ನೀಡಿದ್ದಾರೆ.
ರಾಷ್ಟ್ರಪತಿಯವರಿಗಾಗಿ ವಿಶೇಷವಾಗಿ ನೇಯ್ದ ಮೈಸೂರು ರೇಷ್ಮೆ ಸೀರೆ ಇದು. ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಜಿಲ್ಲಾಡಳಿತದ ಪರವಾಗಿ ರಾಷ್ಟ್ರಪತಿಯವರನ್ನು ಅಧಿಕೃತವಾಗಿ ಆಹ್ವಾನಿಸುವಾಗ ಗೌರವಸೂಚಕವಾಗಿ ಈ ಮೈಸೂರು ರೇಷ್ಮೆ ಸೀರೆ, ಫಲ ತಾಂಬೂಲ ನೀಡಿ ಗೌರವಿಸಿದ್ದರು.

ರಾಷ್ಟ್ರಪತಿಯವರು ಬಿಳಿ ಸೀರೆ ಇಷ್ಟಪಡುತ್ತಾರೆ ಎಂಬುದನ್ನು ಅರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಿ ಸ್ವಾಮ್ಯದ ಕೆ.ಎಸ್.ಐ.ಸಿ.ಯ ಸರ್ಕಾರಿ ರೇಶ್ಮೆ ಕಾರ್ಖಾನೆಗೆ ಈ ಉಡುಪು ತಯಾರಿಕೆಗೆ ಆದೇಶ ನೀಡಿ, ಸಿದ್ಧಪಡಿಸಿದ್ದರು. ಮೈಸೂರಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1912ರಲ್ಲಿ ನಿರ್ಮಿಸಿದ ರೇಷ್ಮೆ ಕಾರ್ಖಾನೆ ಎಂಬ ಹೆಮ್ಮೆ ಈ ಕಾರ್ಖಾನೆಗೆ ಇದೆ.
ಮೈಸೂರು ಸಿಲ್ಕ್ ಸೀರೆ ಬ್ರಾಂಡ್ ವಿಶ್ವಪ್ರಸಿದ್ಧ ಬ್ರಾಂಡ್ ಆಗಿದೆ. ನೂರಾರು ವರ್ಷಗಳಿಂದ ಮಹಿಳೆಯರಿಗೆ ಮೈಸೂರು ಸಿಲ್ಕ್ ಸೀರೆ ಎಂದರೆ ಎಲ್ಲಿಲ್ಲದ ಅಚ್ಚುಮೆಚ್ಚು. ಹಾಗಾಗಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಷ್ಟಪಡುವ ನೈಸರ್ಗಿಕ ಬಿಳಿ ಬಣ್ಣದ ಅಪ್ಪಟ ರೇಶ್ಮೆ ಮತ್ತು ಅಪ್ಪಟ ಚಿನ್ನದ ಎಳೆಗಳನ್ನು ಬಳಸಿ ತಯಾರಿಸಿದ ಈ ಉಡುಪನ್ನು ಗೌರವಸೂಚಕವಾಗಿ ಅವರಿಗೆ ಸಮರ್ಪಿಸಲಾಗಿತ್ತು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post