ಕಲ್ಪ ಮೀಡಿಯಾ ಹೌಸ್ | ಲೇಖನ: ಹರೀಶಾಚಾರ್ಯ ಸಂಡೂರು |
ನಾಡು ಕಂಡ ಶ್ರೇಷ್ಠ ಸಂತ ಭಕ್ತಿ ಮಾರ್ಗ ಪ್ರವರ್ತಕ, ದಾಸಶ್ರೇಷ್ಠ, ಸಮಾಜದ ಅಂಕುಡೊಂಕುಗಳನ್ನು ಸರಳ ಆಡುಭಾಷೆಯಾದ ಕನ್ನಡದ ಮೂಲಕ ಕನ್ನಡದ ಕಂಪಿನ ಜೊತೆ ಹರಿನಾಮಸ್ಮರಣೆಯನ್ನು ಪದ್ಯ, ಉಗಾಭೋಗ, ಸುಳಾದಿಗಳ ಮೂಲಕ ಮನೆಮನಕೆ ತಲುಪಿಸಿದ ಕೀರ್ತಿ ಪುರಂದರದಾಸರಿಗೆ ಸಲ್ಲುತ್ತದೆ.
ಅದೊಂದು ಕಾಲ 15ನೆಯ ಶತಮಾನ ಪ್ರಾಂಥೀಯ ಭಾಷೆಗಳು ಗರಿಕೆದರಿ ನಲಿಯುವ ಸಮಯ ದೇವನಾಗರಿ ಬಿಟ್ಟರೆ, ಬೇರೆ ಭಾಷೆಗಳಲ್ಲಿ ಶಾಸ್ತ್ರವಿಚಾರ ಅರಿಯುವುದು ಕಷ್ಟ ಆ ಸಮಯದಲ್ಲಿ ಕನ್ನಡ ದಾಸಸಾಹಿತ್ಯದ #DasaSahitya ಮೂಲಕ ಭಗವಂತನನ್ನು ಅರಿತು ಸಾಕ್ಷಾತ್ಕರಿಸಲು ಅಣಿ ಮಾಡಿದವರು ಇವತ್ತಿನ ಕಥಾನಾಯಕ “ಪುರಂದರ ದಾಸರು.” #Purandaradasaru

ಇವರ ಜೀವನ ಒಂದು ರೋಚಕದ ಕಥೆ. ಸಾಮಾನ್ಯ ಎಲ್ಲಾ ಜ್ಞಾನಿಗಳ ಜೀವನ ಚರಿತ್ರೆಯಲ್ಲಿ ಕೇಳುವುದು ಬಡಕುಟುಂಬ. ಅನನ್ಯವಾದ ದೇವರ ಸೇವೆ. ನಂತರ ಒಳ್ಳೆ ಸತ್ಪುರುಷನ ಅವತಾರ, ಅದಕ್ಕೆ ಒಂದಂಶದಲ್ಲಿ ವ್ಯತಿರಿಕ್ತರಾದವರು ದಾಸರು ತಂದೆ ವರದಪ್ಪನಾಯಕ ತಾಯಿ ರುಕ್ಮಿಣಿ ಶ್ರೀನಿವಾಸನ ಸೇವೆ ಮಾಡಿದ್ದು ನಿಜ.
ಸಿರಿವರನ ದಯದಿಂದಲಿ ಜನಿತರಾದರು ಪುರಂದರವೆಂಬ ನಗರಿಯಲಿ
ಚರಿಸಿದರು ಕೆಲವು ದಿನ ಸಂಸಾರ ವೃತ್ತಿಯಲಿ
ಜರಿದು ವೈರಾಗ್ಯವನು ತೊಟ್ಟು ದೃಢಮನಸಿನಲಿ
ತರುಣಿ ಮಕ್ಕಳ ಸಹಿತ ಸೇರಿದರು ಕಿಷ್ಕಿಂದಗಿರಿ ತುಂಗಪಂಪದಲಿ
-ವಿಜಯದಾಸರು

ನಾಮಪದ ಅಥವಾ ಕ್ರಿಯಾಪದವಾಗಿವುಳ್ಳ ಶಬ್ಧ ಇದು ಭಗವಂತನನ್ನು ಒಲಿಸಿಕೊಳ್ಳುವ ಬಹುದೊಡ್ಡ ಮಾಧ್ಯಮ. ಈ ಪದಗಳು ಹೇಗೆ ಬಳಸುತ್ತೇವೆ ಎನ್ನುವುದರಲ್ಲಿ ಪುಣ್ಯಪಾಪಗಳ ಸಂಗ್ರಹವಿದೆ. ಇದರ ಸರಿಯಾದ ಬಳಕೆ ಸುವ್ಯವಸ್ಥಿತ ರೀತಿಯಲ್ಲಿ ಜೋಡಣೆಯಾಗಿ ಭಗವಂತನನ್ನು ಕೊಂಡಾಡಲು ಉಪಯುಕ್ತವಾಗಬೇಕಾದರೆ ಗುರುಗಳ ಅನುಗ್ರಹ ಬಹಳ ಪ್ರಮುಖವಾದದ್ದು. ಹಾಗೆ ದಾಸರು ಗುರುಗಳಾಗಿ ಕಂಡದ್ದು ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ #SriKrishnadevaraya ಕುಹಯೋಗ ಪರಿಹರಿಸಿದ ಕರ್ನಾಟಕ ವಿದ್ಯಾಸಿಂಹಾಸನಾಧೀಶ್ವರ “ಶ್ರೀ ವ್ಯಾಸರಾಜರು” #Vyasarajaru ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಇದನ್ನು ಹೇಳಿದಷ್ಟೆಯಲ್ಲ ಕೃತಿಯಲಿ ತೋರಿಸಿ ಪುರಂದರ ವಿಠ್ಠಲ ಎಂಬ ಅಂಕಿತ ಪಡೆದು 4,75,000 ಕೃತಿಗಳನ್ನು ರಚಿಸಿ ವ್ಯಾಸರಾಜರಿಂದ “ದಾಸರೆಂದರೆ ಪುರಂದರದಾಸರಯ್ಯ” ಎಂದು ಕೀರ್ತಿಪತಾಕೆಯನ್ನು ಪಡೆದು ಜೀವನದ ಉದ್ದಕ್ಕೂ ಪರಿಪಾಲಿಸಿದರು.
ಪುರುಷನ ಸಾಧನೆಗೆ ಮಡದಿಯು ಕಾರಣಳಾದರೆ ಅವರೆ ಆದರ್ಶ ದಂಪತಿಗಳು. ವೈರಾಗ್ಯ ದಾಸರಲ್ಲಿ ಮಾತ್ರ ಇರುವುದಿಲ್ಲ ಅವರ ಮಡದಿಯಲ್ಲಿ ಇತ್ತು ಎನ್ನಲೂ ಇದೊಂದು ಘಟನೆ ಸಾಕು ಎನಿಸುತ್ತದೆ. ಒಮ್ಮೆ ದಾಸರು ತಮ್ಮ ದಿನನಿತ್ಯದ ಜೀವನ ನಿರ್ವಹಣೆಗಾಗಿ ಯಾಯಿವಾರ (ಭಿಕ್ಷೆ) ಬೇಡಲು “ರಾಗಿ ತಂದಿರಾ ಭಿಕ್ಷೆಗೆ ರಾಗಿ ತಂದಿರಾ” ಎಂದು ಬೇಡಲು ಹೊರಟಾಗ ಇವರ ವೈರಾಗ್ಯದ ಪರೀಕ್ಷೆಯನ್ನು ಮಾಡಿದವನು ಭೂಪಾಲ ಕೃಷ್ಣರಾಯ ತಾನು ಕೊಡುವ ಅಕ್ಕಿಯ ಒಳಗೆ ಮುತ್ತು ರತ್ನಗಳನ್ನು ಬೆರೆಸಿ ಕೊಟ್ಟನು ಅದನ್ನು ಮಡದಿಗೆ ನೀಡಿದರು ದಾಸರು. ಅವರನ್ನೇ ಹಿಂಬಾಲಿಸಿದ ಭೂಪಾಲ ಕೃಷ್ಣರಾಯ ಮತ್ತು ವ್ಯಾಸತೀರ್ಥರು, ಮನೆಯ ಆಚೆ ದಾಸರ ಹೆಂಡತಿ “ಛೇ ಯಾರೋ ಅಕ್ಕಿಯಲ್ಲಿ ಕಲ್ಲುಮಣ್ಣುಗಳನ್ನು ಹಾಕಿರುವರೆಂದು” ನಿಂದಿಸಿ ಕೆರುವುದನ್ನು ಕಂಡು ಅವಕ್ಕಾದರು, ನಿಶ್ಚಯಿಸಿದರು “ಹೊನ್ನಿನಾಸೆ ಬಿಡಿರೆಂಬ ಕಾಗದ ಬಂದಿದೆ ಮಣ್ಣಿನಾಸೆ ಬಿಡಿರೆಂಬ ಕಾಗದ ಬಂದಿದೆ” ಇದು ದಾಸರ ಮಾತು ಅದರ ಅರಿಯುವಿಕೆ ಈ ಸಾಧ್ವಿಯಲ್ಲೂ ಕಾಣಬಹುದು ಎಂದು ಇದಲ್ಲವೆ ನಿಜವಾದ ವೈರಾಗ್ಯ! ಇದಲ್ಲವೆ ನಿಜ ಆದರ್ಶ ದಂಪತಿಗಳ ಸಾಮರಸ್ಯದ ಬದುಕು.

ಕೃತೆಯತ್ ಧ್ಯಾಯಯೋವಿಷ್ಣುಂ ತ್ರೇತಾಯಾಂ ಯಜತೋ ಮುಖೈ:|
ದ್ವಾಪರೆ ಪರಿಚರ್ಯಾಯಾಂ ಕಲೌ ತದ್ ಹರಿಕೀರ್ತನಮ್|| (ಭಾಗವತ 12-3-52) ಇದರ ಅನುವಾದದ ಉಗಾಭೋಗ
ಧ್ಯಾನವು ಕೃತಯುಗದಲಿ, ತಜ್ಞಯಾಗವು ತ್ರೇತಾಯುಗದಲಿ,
ಅರ್ಚನೆ ದ್ವಾಪರದಲಿ, ಕೀರ್ತನೆ ಮಾತ್ರದಿ ಕಲಿಯುಗದಲಿ
ಮುಕುತಿಯನೀವ ಪುರಂದರ ವಿಠ್ಠಲ
ಗ್ರಾಸಕ್ಕಿಲ್ಲದ ಪರರ ಮನೆಗಳ ಪೋಗಿ ತುಳಸಿ ಮಾಲೆ ಧರಿಸಿ, ಡಂಭಕದಿ ಹರಿಸ್ಮರಣೆ ಮಾಡಿ, ತಂಬೂರಿ ಮೀಟಿದರೆ ದಾಸರಾಗುವುದಿಲ್ಲ. ಪ್ರಹ್ಲಾದರಾಜರು ಹೇಳಿದಂತೆ ಶ್ರವಣಂ ಕೀರ್ತನಂ ವಿಷ್ಣೂ….. ವಂದನಂ ದಾಸ್ಯಂ….. ಎನ್ನುವಂತೆ.
ನವವಿಧ ಭಕ್ತಿಯಲ್ಲಿ ದಾಸ್ಯವು ಒಂದು ಬಗೆ. `ನೀನು ಈಶ ನಾನು ದಾಸ’ ಎಂದವನು ಮಾತ್ರ ನಿಜದಾಸ. ಈ ದೃಷ್ಠಿಕೋನದಲ್ಲಿ ನೋಡಿದಾಗ ವ್ಯಾಸರಾಜರ `ದಾಸರೆಂದರೆ ಪುರಂದರ ದಾಸರಯ್ಯ’ ಎನ್ನುವ ಮಾತು ಅಕ್ಷರ ಅಕ್ಷರ ಸತ್ಯ.
ದಾಸರು ಆಡಿದ ಮಾತು ಹಾಡಾಯಿತು ಸಾಧನೆಗೈಯ್ಯುವ ಸಾಧಕ, ಸಾಧ್ವೀ ಸಖಿಯರಿಗೆ ಸಾಧನ ಪಥವಾಯಿತು. ಗೃಹಣಿಯರಿಗೆ ಮನೆಯ ಕೆಲಸಲ್ಲೂ ದೇವರನ್ನು ಕಾಣುವ ಅನುಸಂಧಾನ ಚಿಗುರೊಡೆಯಿತು. ಸಾಮಾಜಿಕ ಸುಧಾರಣೆಯ ಮಾನದಂಡವಾಯಿತು. ಸಂಗೀತ ಪ್ರಿಯರಿಗೆ ಹೋಳಿಗೆಯ ಹೂರ್ಣವಾಯಿತು. ಸಾಹಿತಿಗಳಿಗೆ ಶಬ್ದ ಭಂಡಾರವಾಯಿತು. ಇವರನ್ನು ಪಡೆದ ಭರತ ಭೂಮಿ ಕನ್ನಡ ನಾಡು ಧನ್ಯ ಅವರ ಸ್ಮರಣೆ ಅನುದಿನವು ಇರಲೆಂದು ಪ್ರಾರ್ಥಿಸುವ.
ಶ್ರೀಕೃಷ್ಣಾರ್ಪಣಮಸ್ತು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post