ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪುತ್ತೂರು: ಪುರುಷ ಮತ್ತು ಮಹಿಳೆಯರು ಸಮಾನವೆಂದರೂ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಮನೆಯಲ್ಲಿ ಶುರುವಾದ ಜವಾಬ್ದಾರಿಯು ಸಮಾಜದಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವುದನ್ನು ತಿಳಿಸುತ್ತದೆ. ಆದ್ದರಿಂದ ಜವಾಬ್ದಾರಿಯನ್ನು ವಹಿಸಿದಾಗ ಅದನ್ನು ಯಾವ ರೀತಿಯಲ್ಲಿ ಎದುರಿಸಬೇಕು ಎಂಬುದನ್ನು ಮಹಿಳೆಯರು ಅರ್ಥೈಯಿಸಿಕೊಳ್ಳಬೇಕು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಸ್. ವಿದ್ಯಾ ಹೇಳಿದರು.
ಅವರು ಕಾಲೇಜಿನ ಮಹಿಳಾ ಘಟಕ ಮತ್ತು ವ್ಯವಹಾರ ಆಡಳಿತ ವಿಭಾಗದಿಂದ ಆಯೋಜಿಸಿದ್ದ ಮಹಿಳೆ ಮತ್ತು ಸಾಮಾಜಿಕ ಜವಬ್ದಾರಿ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ತಮ್ಮ ಫೋಟೋಗಳನ್ನು ಹಾಕುವಾಗ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಮುಂದಿನ ದಿನಗಳಲ್ಲಿ ಅದೇ ಸಮಸ್ಯೆಗಳಾಗಿ ಎದುರಾಗಬಹುದು. ನಮ್ಮ ಸಮಾಜವು ಪುರುಷ ಪ್ರಧಾನ ಸಮಾಜವಾಗಿದೆ. ಪ್ರತಿಯೊಂದು ತಪ್ಪಿಗೂ ಹೆಣ್ಣನ್ನು ದೂಷಿಸಲಾಗುತ್ತದೆ. ತನ್ನನ್ನು ತಾನು ಕಾಳಜಿ ಮಾಡುತ್ತ, ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುವುದು ಪ್ರತಿಯೊಬ್ಬ ಹೆಣ್ಣಿನ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ ಪಿ. ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಹೋರಾಟಗಳು ನಡೆದರೂ ಮಹಿಳಾ ಶೋಷಣೆಗಳು ಕಡಿಮೆಯಾಗುತ್ತಿಲ್ಲ. ಅತಿಯಾದ ನಂಬಿಕೆ iತ್ತು ತಾನು ಅನುಭವಿಸುತ್ತಿರುವ ತೊಂದರೆಗಳನ್ನು ಬಹಿರಂಗಪಡಿಸದೇ ಇರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ಆದ್ದರಿಂದ ಮಹಿಳೆಯರು ತಮ್ಮ ಜವಬ್ದಾರಿಗಳನ್ನು ಅರಿತು ತನ್ನನ್ನು ತಾನೇ ರಕ್ಷಿಸಿಕೊಳ್ಳುವುದು ಉತ್ತಮವೆಂದು ಹೇಳಿದರು.
ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕಿ ಅನ್ನಪೂರ್ಣ ಹಾಗೂ ಉಪನ್ಯಾಸಕಿ ದೀಪಿಕಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ಪೂರ್ತಿ ಶೆಟ್ಟಿ ಸ್ವಾಗತಿಸಿ, ವೀಣಾ ವಂದಿಸಿ, ಸಮೀಕ್ಷಾ ಎನ್. ದೇವಾಡಿಗ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















