ಇತ್ತೀಚೆಗೆ ಶ್ರೀ ಧೀರೇಂದ್ರತೀರ್ಥ ಗುರುಗಳ ಆರಾಧನೆಯಂದು ಹೊಸರಿತ್ತಿ ಕ್ಷೇತ್ರಕ್ಕೆ ಹೋಗಿದ್ದೆವು. ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಉಪನ್ಯಾಸವಾದ ನಂತರ ಚಿತ್ರದುರ್ಗ ಶ್ರೀರಾಘವೇಂದ್ರ ಸ್ವಾಮಿಗಳವರ ಮಠಕ್ಕೆ ಇತ್ತೀಚೆಗೆ ವರ್ಗಾವಣೆಯಾಗಿ ಬಂದಿರುವ ವ್ಯವಸ್ಥಾಪಕರು ಒಂದು ಶ್ರೀರಾಯರ ಮಹಿಮಾ ವೃತ್ತಾಂತವನ್ನು ತಿಳಿಸಿದರು.
ಚಿತ್ರದುರ್ಗದ ಶ್ರೀಮಠದಲ್ಲಿ ನೀರಿನ ತೊಂದರೆಯಿಂದ ಸುಮಾರು ಆರು-ಏಳು ಕೊಳವೆ ಬಾವಿಗಳನ್ನು ತೆಗೆಸಿದರೂ ಒಂದು ಹನಿ ನೀರು ಬಾರದೆ ಸುಮ್ಮನೇ ವ್ಯರ್ಥ ಪ್ರಯತ್ನವಾಯ್ತು. ಅಲ್ಲದೇ ಹಣವೂ ಖರ್ಚಾಯಿತು, ಏನೂ ಪ್ರಯೋಜನವಾಗಲಿಲ್ಲ.
ಇದರಿಂದ ಬೇಸರಗೊಂಡ ಶ್ರೀಮಠದ ವ್ಯವಸ್ಥಾಪಕರು ಈ ವಿಷಯವನ್ನು ಮಂತ್ರಾಲಯದಲ್ಲಿರುವ ಶ್ರೀಸುಬುಧೇಂದ್ರ ತೀರ್ಥರಿಗೆ ತಿಳಿಸಿ ಗುರುಗಳಿಗೆ ಶ್ರೀಗುರುಸಾರ್ವಭೌಮರಲ್ಲಿ ಪ್ರಾರ್ಥನೆ ಮಾಡಿ ನೀರಿನ ಅನುಕೂಲ ಮಾಡಿಸಿಕೊಡುವಂತೆ ಅರಿಕೆ ಮಾಡಿಕೊಂಡರು.
ಶ್ರೀ ಸುಬುಧೇಂದ್ರತೀರ್ಥರು ಶ್ರೀರಾಯರಲ್ಲಿ ಈ ವಿಷಯವಾಗಿ ಪ್ರಾರ್ಥಿಸಿಕೊಂಡಾಗ ಶ್ರೀರಾಯರು ಶ್ರೀಪಾದಂಗಳವರಿಗೆ ಸ್ವಪ್ನದಲ್ಲಿ ಇಂತಹ ಜಾಗದಲ್ಲಿ ಕೊಳವೆಬಾವಿ ತೋಡಿಸಿದರೆ ನೀರು ಬರುತ್ತದೆ ಎಂದು ಸೂಚಿಸುತ್ತಾರೆ. ಅದರಂತೆ ಶ್ರೀ ಸ್ವಾಮಿಗಳು ಮಠದ ವ್ಯವಸ್ಥಾಪಕರಿಗೆ ಶ್ರೀಗುರುಸಾರ್ವಭೌಮರು ಸ್ವಪ್ನದಲ್ಲಿ ತಿಳಿಸಿದ ಜಾಗವನ್ನು ತಿಳಿಸಿ ಕೊಳವೆಬಾವಿ ತೋಡಿಸಲು ತಿಳಿಸುತ್ತಾರೆ.
ಸ್ವಪ್ನದಲ್ಲಿ ಸೂಚಿಸಿದ ಜಾಗ ಯಾವುದೆಂದರೆ ಮಠಕ್ಕೆ ದಾರಿ ಎಂದು ಸೂಚನಾ ಫಲಕದ(ಬೋರ್ಡ್) ಇದೆ. ಅದರಿಂದ ಒಂದು ಗೆರೆ ಎಳೆದು ಆ ಜಾಗದಲ್ಲಿ ನೀರು ಬರುತ್ತೆಯೆಂಬುದಾಗಿರುತ್ತದೆ.
ವ್ಯವಸ್ಥಾಪಕರು ಹೊಸದಾಗಿ ಬಂದಿದ್ದರಿಂದ ಅವರು ಆ ಜಾಗವನ್ನು ಹುಡುಕುತ್ತಾ ಹೋದಾಗ ಸೂಚನಾ ಫಲಕ ಹಳೆಯದಾಗಿ ಬರೀ ದಾರಿ ಎಂದು ಮಾತ್ರ ಕಂಡಿತು. ಅವರು ಶ್ರೀಗಳವರು ತಿಳಿಸಿದ ಪ್ರಕಾರ ಆ ಬೋರ್ಡಿನಿಂದ ಗೆರೆ ಎಳೆದು ಆಜಾಗದಲ್ಲಿ ಕೊಳವೆ ಬಾವಿ ತೋಡಿಸಿದಾಗ 180 ಅಡಿಗಳ ಆಳದಲ್ಲಿ ನಾಲ್ಕು ಇಂಚು ನೀರು ದೊರಕಿತು ಎಂದು ವ್ಯವಸ್ಥಾಪಕರು ಬಹಳ ಸಂತೋಷದಿಂದ ಈ ಪವಾಡ ನಡೆದಿದ್ದನ್ನು ತಿಳಿಸಿದರು.
ಇನ್ನೊಂದು ವಿಷಯವೆಂದರೆ ಶ್ರೀಪಾದಂಗಳವರು ಈ ಜಾಗವನ್ನು ನೋಡಿಲ್ಲ ಮತ್ತು ವ್ಯವಸ್ಥಾಪಕರೂ ಸಹ ಹೊಸದಾಗಿ ಬಂದಿದ್ದರಿಂದ ಜಾಗವನ್ನು ಅಲ್ಲಿಯವರೆಗೂ ನೋಡಿಲ್ಲ. ಶ್ರೀರಾಯರು ಅನುಗ್ರಹಿಸಿ ಸೂಚಿಸಿದ ಜಾಗದಲ್ಲಿ ಕೊಳವೆ ಬಾವಿ ತೋಡಿಸಿದ್ದರಿಂದ ಚಿತ್ರದುರ್ಗದ ರಾಯರಮಠದಲ್ಲಿ ನೀರಿನ ಬವಣೆ ತಪ್ಪಿದೆ.
ಹಿಂದೆ ರಾಯರು ಬಿಸಿಲಿಯಲ್ಲಿ ಕಾದು ಹೋಗಿದ್ದ ಬಯಲುಸೀಮೆಯ ಬಂಡೆಯೊಂದರಿಂದ ತಮ್ಮ ತಪಃಶಕ್ತಿಯಿಂದ ಗಂಗೆಯನ್ನು ಚಿಮ್ಮಿಸಿದ್ದರು ಎಂದು ಕೇಳಿದ್ದೇವೆ. ಆದರೆ, ಈಗ ನೀರಿಗೆ ಬರಗಾಲವಿರುವ ಚಿತ್ರದುರ್ಗದಂತಹ ಬಯಲುಸೀಮೆಯಲ್ಲಿ ರಾಯರು ನಡೆಸಿದ ಪವಾಡ ಗುರುಗಳ ಕರುಣೆ ಹಾಗೂ ಶಕ್ತಿಗೆ ಸಾಕ್ಷಿಯಾಗಿದೆ.
ಇದು ಭಕ್ತರಿಂದ ರಾಯರು ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಮಂತ್ರಾಲಯ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪವಾಡಗಳಿಗೊಂದು ಜ್ವಲಂತ ನಿದರ್ಶನ..
ಓಂ ಶ್ರೀರಾಘವೇಂದ್ರಾಯ ನಮಃ
Discussion about this post