ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯ ಚರ್ಚೆಯ ವೇಳೆ ವಾಗ್ದಾಳಿ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ವಿರುದ್ದ ಕಿಡಿ ಕಾರಿದರು.
ಪ್ರಧಾನಿ ನರೇಂದ್ರ ಮೋದಿ ಚೌಕಿದಾರ ಅಲ್ಲ, ಬದಲಾಗಿ ಭ್ರಷ್ಟಾಚಾರದ ಭಾಗೀದಾರ ಎಂದು ಕಿಡಿ ಕಾರಿದರು.
ರಾಫೇಲ್ ಯುದ್ಧ ವಿಮಾನ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಅವರು, ರಾಫೆಲ್ ವಿಮಾನ ಖರೀದಿ ಒಪ್ಪಂದ ಯುಪಿಎ ಅವಧಿಯಲ್ಲಿ ರೂ.520 ಕೋಟಿಗೆ ನೀಡಲಾಗಿತ್ತು. ಆದರೆ, ಮೋದಿ ಫಾನ್‌ಸ್ಗೆ ಹೋಗಿ ಬಂದ ಬಳಿಕ ಏನಾಯಿತು ಎಂಬುದು ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಕ್ಷಣಾ ಸಚಿವರು ದೇಶದ ಜನತೆಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್, ಗೌಪ್ಯತೆ ನಿಯಮದಡಿ ಒಪ್ಪಂದಗಳ ಕುರಿತ ಮಾಹಿತಿಗಳನ್ನು ಬಹಿರಂಗ ಪಡಿಸುವುದಿಲ್ಲ ಎನ್ನುತ್ತಾರೆ. ಆದರೆ, ನಾನು ಫ್ರಾನ್‌ಸ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದಾಗ, ಇಂತಹ ಯಾವುದೇ ರಹಸ್ಯ ಒಪ್ಪಂದಗಳಾಗಿಲ್ಲ ಎಂದಿದ್ದಾರೆ. ಇದರಿಂದ ಗೊತ್ತಾಗುತ್ತದೆ ಎಂದಿದ್ದಾರೆ ರಾಹುಲ್.
ಇನ್ನು, ಲೋಕಸಭೆಯಲ್ಲಿ ಟಿಡಿಪಿಯ ಗಲ್ಲಾ ಜಯದೇವ್ ಭಾಷಣವನ್ನು ಉಲ್ಲೇಖಿಸಿ ಮಾತನಾಡಿದ ರಾಹುಲ್ ಗಾಂಧಿ, 21ನೆಯ ಶತಮಾನದ ರಾಜಕೀಯ ಬಲಿಪಶು ಆಂಧ್ರಪ್ರದೇಶ. ನೀವು ಸರ್ಕಾರದ ಸುಳ್ಳುಗಳಿಗೆ ಬಲಿಪಶುಗಳಾಗಿದ್ದೀರಿ. ದೇಶದ ರೈತರು ದಲಿತರು, ಆದಿವಾಸಿಗಳು, ಮಹಿಳೆಯರು ಬಲಿಪಶುಗಳಾಗಿದ್ದಾರೆ. ಆಂಧ್ರಪ್ರದೇಶ ರಾಜ್ಯ ಷಡ್ಯಂತ್ರಗಳಿಗೆ ಬಲಿಯಾಗುತ್ತಿದೆ ಎಂದರು.
ಇದೇ ವೇಳೆ ಮಾತಿನ ಭರದಲ್ಲಿ ಪೇಚಿಗೆ ಸಿಲುಕಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹೊರಗೆ ಹೋಗುವುದೇ ಇಲ್ಲ ಎಂದು ಹೇಳಿದರು. ನಂತರ ಕೆಲವೇ ಕ್ಷಣಗಳಲ್ಲಿ ಇಲ್ಲ…ಇಲ್ಲಾ.. ಹೊರಗಡೆ ಹೋಗುತ್ತಾರೆ, ವಿದೇಶಗಳಿಗೆ ತೆರಳುತ್ತಾರೆಂದು ಹೇಳಿದರು. ಈ ವೇಳೆ ಸದನದಲ್ಲಿದ್ದ ಬಿಜೆಪಿ ಸಂಸದರು ರಾಹುಲ್ ಗಾಂಧಿಯವರ ಮಾತುಗಳನ್ನು ಕೇಳಿ ನಕ್ಕರು.
Discussion about this post