ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಕಳೆದ 900 ದಿನಗಳಿಂದ ಸತತ ಹೋರಾಟ, ಸತ್ಯಾಗ್ರಹದ ಜೊತೆಯಲ್ಲಿಯೇ ಹಲವಾರು ಬಾರಿ ಕೇಂದ್ರ ಸರಕಾರವನ್ನು ಭೇಟಿ ಮಾಡಿ ಮನವಿಗಳನ್ನ ಸಲ್ಲಿಸಿದ್ದರೂ ಕೇಂದ್ರ ಸರಕಾರ ಕರುಣೆ ತೋರಿಸುತ್ತಿಲ್ಲ. ರಾಯಚೂರು ನಗರದಲ್ಲಿ ಏಮ್ಸ್ ಸ್ಥಾಪನೆ ಆಗುವ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು #Minister N S Boseraju ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ದೇಶದ ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಅನ್ನು ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸುವ ಮೂಲಕ ಜಿಲ್ಲೆಯ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರ ಆರೋಗ್ಯ ಮತ್ತು ಪ್ರಾಣ ರಕ್ಷಣೆಗಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನಮ್ಮ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ.
Also read: ಶಿಗ್ಗಾವಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ನೂರು ಕೋಟಿ ಅನುದಾನ ಬಿಡುಗಡೆ ಹಸಿ ಸುಳ್ಳು: ಬಸವರಾಜ ಬೊಮ್ಮಾಯಿ
ರಾಯಚೂರು ನಗರದಲ್ಲಿ ಏಮ್ಸ್ ಸ್ಥಾಪನೆ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ #Nirmala Seetharaman ಅವರಿಗೆ ಮುಖ್ಯಮಂತ್ರಿಗಳು ಹಲವು ಬಾರಿ ಪತ್ರ ಬರೆದಿದ್ದಾರೆ. ಏಮ್ಸ್ ಹೋರಾಟ ಸಮಿತಿಯ ಸದಸ್ಯರು, ಜನಪ್ರತಿನಿಧಿಗಳು, ಸಂಸದರು ಹಾಗೂ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಒಳಗೊಂಡ ನಮ್ಮ ತಂಡವು ದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ನಮ್ಮ ಭಾಗದ ಜನರ ಆಶಯಗಳನ್ನು ಮನವರಿಕೆ ಮಾಡಿದೆ. ನಮ್ಮ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಅಗತ್ಯ ಎಲ್ಲ ರೀತಿಯ ಸಹಕಾರವನ್ನು ಒದಗಿಸುವುದಾಗಿಯೂ ಭರವಸೆ ನೀಡಿದ್ದೇವೆ. ಲೋಕಸಭಾ ವಿರೋಧ ಪಕ್ಷದ ನಾಯಕರು ಹಾಗೂ ನಮ್ಮ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರಿಗೂ ನಮ್ಮ ಹೋರಾಟದ ಬಗ್ಗೆ ಗಮನ ಸೆಳೆಯಲಾಗಿದ್ದು, ನಮ್ಮ ಪರವಾಗಿ ಅವರೂ ದೆಹಲಿಯಲ್ಲಿ ಧ್ವನಿಯೆತ್ತಿದ್ದಾರೆ. ಇಷ್ಟೆಲ್ಲಾ ಮನವಿಗಳ ಹೊರತಾಗಿಯೂ ಕೇಂದ್ರ ಸರಕಾರ ಕಲ್ಯಾಣ ಕರ್ನಾಟಕದ ಮೇಲೆ ಕರುಣೆ ತೋರಿಸುವ ಮನಸ್ಸು ಮಾಡಿಲ್ಲದೇ ಇರುವುದು ವಿಪರ್ಯಾಸ.
ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಬರೋಬ್ಬರಿ 900 ದಿನಗಳನ್ನು ಪೂರೈಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒಕ್ಕೊರಲ ಮನವಿಯನ್ನು ಮಾಡಲಾಗಿದೆ. ಏಮ್ಸ್‌ಗಾಗಿ ಇನ್ನೆಷ್ಟು ದಿನಗಳನ್ನು ಕಾಯಬೇಕು? ಎಂದು ಪ್ರಶ್ನಿಸಿರುವ ಸಚಿವರು, ಕೇಂದ್ರ ಸರ್ಕಾರ ವಿಳಂಬ ಮಾಡದೆ ತಕ್ಷಣ ಮಹತ್ವಾಕಾಂಕ್ಷಿ ಜಿಲ್ಲೆ ಎನಿಸಿಕೊಂಡ ರಾಯಚೂರಿಗೆ ಏಮ್ಸ್ ಸಂಸ್ಥೆಯನ್ನು ಮಂಜೂರು ಮಾಡಬೇಕು. ನಮ್ಮ ಸರ್ಕಾರ ಹಾಗೂ ನಮ್ಮ ಜನರು ಅತ್ಯಂತ ತಾಳ್ಮೆಯಿಂದ ಶಾಂತ ರೀತಿಯಲ್ಲಿ ಹೋರಾಟ ಮಾಡುತ್ತ ಬಂದಿದ್ದೇವೆ. ರಾಯಚೂರಿಗೆ ಏಮ್ಸ್ ಮಂಜೂರು ಆಗುವವರೆಗೂ ಎಲ್ಲಾ ಹಂತಗಳಲ್ಲೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post