ಶಿವಮೊಗ್ಗ: ಮಲೆನಾಡಿನ ಹಲವು ಭಾಗಗಳಲ್ಲಿ ಒಂದು ವಾರಗಳ ಕಾಲ ಬಿಡುವ ನೀಡಿದ್ದ ಮಳೆರಾಯ, ನಿನ್ನೆಯಿಂದ ಮತ್ತೆ ಆರ್ಭಟಿಸುತ್ತಿದ್ದು, ಮಲೆನಾಡು ಹಸಿರು ಹೊದ್ದು ನಿಂತಿದೆ.
ಪ್ರಮುಖವಾಗಿ ತೀರ್ಥಹಳ್ಳಿ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಮಾತನಾಡಿರುವ ತಾಲೂಕು ದಂಡಾಧಿಕಾರಿ ಆನಂದಪ್ಪ ನಾಯಕ್, ತೀರ್ಥಹಳ್ಳಿಯಲ್ಲಿ ನಿನ್ನೆಯಿಂದ ಭಾರಿ ಸುರಿಯುತ್ತಿರುವ ಮಳೆಯಿಂದ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು, ಮಲೆನಾಡಿನ ಬಹುತೇಕ ಭಾಗಗಳಲ್ಲಿ ಮತ್ತೆ ಉತ್ತಮವಾಗಿ ಸುರಿಯುತ್ತಿದೆ. ತುಂಗಾ ನದಿ ಸೇರಿದಂತೆ ಎಲ್ಲಾ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಮತ್ತೆ ನೀರಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ.
ಹದಿನೈದು ದಿನದ ಹಿಂದೆ ಬಂದ ಮಳೆಯಲ್ಲಿ ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ ಆಗುಂಬರ ಸೇರಿದಂತೆ ಮಲೆನಾಡಿನ ಬಹುತೇಕ ತಾಲೂಕುಗಳಲ್ಲಿ ಭಾರೀ ಮಳೆ ಸುರಿದಿದ್ದು ವಾಡಿಕೆ ಮಳೆಗಿಂತ ಹೆಚ್ಚಾಗಿದೆ. ಅನೇಕ ಹಾನಿಗಳು ಸಂಭವಿಸಿದ್ದು ಧರೆ ಗುಡ್ಡಗಳು ಕುಸಿದ ನಿದರ್ಶನಗಳೂ ಇವೆ. ಅಪಾರ ಪ್ರಮಾಣದ ಬೆಳೆಯು ಕೂಡ ಹಾನಿಯಾಗಿತ್ತು. ವಿದ್ಯುತ್ ಕಂಬಗಳು ಮರಗಳು ಸಹ ಧರೆಗುರುಳಿದ್ದವು. ಇದೀಗ ನಿನ್ನೆಯಿಂದ ಮತ್ತೆ ವರುಣನ ಆರ್ಭಟ ಶುರುವಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಆಗುಂಬೆಘಾಟಿ ಶಿವಮೊಗ್ಗ-ಉಡುಪಿ ಜಿಲ್ಲೆಗಳ ವ್ಯಾಪ್ತಿಗೆ ಸೇರುತ್ತದೆ. ಶಿವಮೊಗ್ಗ ವಿಭಾಗದ ರಸ್ತೆಯನ್ನು ಈಗ್ಗೆ 10 ಕೋಟಿ ವೆಚ್ಚ ಮಾಡಿ ಅಭಿವೃದ್ದಿ ಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಸೇರುವ ಈ ರಸ್ತೆಯ ಎರಡು ಬದಿಯ ಚರಂಡಿಗಳು ಕಸ-ಗಿಡಗಳು ಮರದ ಹರೆಗಳು ಬಿದ್ದು ಚರಂಡಿಯಲ್ಲಿ ಹರಿಯುವ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಈ ರಸ್ತೆಗೆ ಧಕ್ಕೆಯಾಗುತ್ತಿದೆ. ಆದ್ದುದ್ದರಿಂದ ಲೋಕೋಪಯೋಗಿ ಅಥವಾ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜೀನಿಯರ್ಗಳು, ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಹರಿದು ಹೋಗುವಂತೆ ಮಾಡಬೇಕಿದೆ.
(ತೀರ್ಥಹಳ್ಳಿ ಸುದ್ದಿ ಕೃಪೆ: ಲಿಯೋ ಅರೋಜ)
Discussion about this post