ಕಲ್ಪ ಮೀಡಿಯಾ ಹೌಸ್ | ರಾಮನಗರ/ಬೆಂಗಳೂರು |
ಜೆಡಿಎಸ್ ಪಕ್ಷವನ್ನು ಶೂನ್ಯ ಮಾಡಿಬಿಡುತ್ತೇನೆ. ಅಲ್ಲಿ ಒಬ್ಬ ಸಮರ್ಥ ನಾಯಕನನ್ನು ಇರಲು ಬಿಡಲ್ಲ ಎಂದು ಹೇಳಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್.. DKShivakumar ನಿಮ್ಮ ಕಸನು ಈಡೇರುವುದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು HDDevegowda ಗುಡುಗಿದ್ದಾರೆ.
ಡಿಕೆ ಅವರೇ, ನಿಮ್ಮ ಕೆಟ್ಟ ರಾಜಕೀಯ ಆಟ ನನ್ನ ಬಳಿ ನಡೆಯಲ್ಲ. ಅದು ನಿಮಗೆ ಗೊತ್ತಿರಲಿ, ನಮ್ಮ ಪಕ್ಷವನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಮಾತಿನುದ್ಧಕ್ಕೂ ತಮ್ಮ ಪಕ್ಷವನ್ನು ದುರ್ಬಲಗೊಳಿಸಲು ಕುತಂತ್ರ ರೂಪಿಸಿರುವ ಡಿಕೆಶಿ ವಿರುದ್ಧ ಮಾಜಿ ಪ್ರಧಾನಿಗಳು ಹರಿಹಾಯ್ದರಲ್ಲದೆ, ಆ ವ್ಯಕ್ತಿಗೆ ಉತ್ತರ ಕೊಡಬೇಕು, ಕೊಡುವ ಕೆಲಸ ಮಾಡುತ್ತೇವೆ. ಇವತ್ತು ಕುಮಾರಸ್ವಾಮಿ ಅವರು ಗಟ್ಟಿಯಾದ ಸಂದೇಶ ಕೊಟ್ಟಿದ್ದಾರೆ ಎಂದರು.

ಈ ಸಭೆ ಬಹಳ ಚೆನ್ನಾಗಿ ನಡೆದಿದೆ. ಕುಮಾರಸ್ವಾಮಿ ಅವರಿಗೆ ಇವತ್ತು ಒಳ್ಳೆಯ ಸಂದೇಶ ನೀಡಿದ್ದಾರೆ. ಪಕ್ಷದ ಶಕ್ತಿ ಏನು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಈ ಸಭೆಗೆ ಬಂದ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದು ಭಾವುಕರಾಗಿ ನುಡಿದರು ಮಾಜಿ ಪ್ರಧಾನಿಗಳು.

ಈ ರಾಜಕಾರಣ ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ. ಆದರೆ, ನಾನೆಂದೂ ಅದನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿಲ್ಲ. ಆದರೆ, ಕಾಂಗ್ರೆಸ್ ನವರು ರಾಜಕೀಯವನ್ನು ಅದೆಷ್ಟು ಕನಿಷ್ಠ ಮಟ್ಟಕ್ಕೆ ಇಳಿಸಬೇಕೋ ಅಷ್ಟು ಮಾಡಿದ್ದಾರೆ. ಸಿದ್ದಾಂತ ಎನ್ನುವುದು ಆ ಪಕ್ಷದಲ್ಲಿ ಇಂದಿರಾಗಾಂಧಿ ಅವರ ಕಾಲದಲ್ಲಿಯೇ ಮುಗಿದು ಹೋಯಿತು ಎಂದು ಅವರು ಟೀಕಾಪ್ರಹಾರ ನಡೆಸಿದರು.

Also read: ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೇ ನನ್ನ ಗುರಿ: ಹೆಚ್.ಡಿ. ಕುಮಾರಸ್ವಾಮಿ
ಈ ದೇಶ ಮುಂದೆ ಏನಾಗುತ್ತೋ ಊಹೆ ಮಾಡಲಾಗಲ್ಲ. ಪಕ್ಕದಲ್ಲಿ ಪಾಕಿಸ್ತಾನ, ಚೀನಾ ಇದೆ, ದೂರದಲ್ಲಿ ಅಮೆರಿಕ, ರಷ್ಯಾ ಇದೆ. ಈ ದೇಶವನ್ನು ಉಳಿಸುವ ನಾಯಕತ್ವ ಬೇಕು ಎಂದು ಅವರು ಹೇಳಿದರು.

ದೆಹಲಿಯಲ್ಲಿ ಕಾಂಗ್ರೆಸ್ ನವರು ಅನೇಕ ವರ್ಷ ಆಡಳಿತ ನಡೆದರು. ಒಮ್ಮೆಯೂ ಯಾವ ಪ್ರಧಾನಿಯೂ ಕಾಶ್ಮೀರದ ಕಡೆ ತಲೆ ಹಾಕಿ ಮಲಗಲಿಲ್ಲ. ಕೊನೆಗೆ ನಾನು ಹೋದೆ. ಅಧಿಕಾರಿಗಳು ಬೇಡವೇ ಬೇಡ ಎಂದರು. ಭಯೋತ್ಪಾದಕರು ಹೊಡೆದು ಹಾಕುತ್ತಾರೆ ಎಂದು ಎಷ್ಟೋ ಹೇಳಲು ಪ್ರಯತ್ನ ಮಾಡಿದರು. ಆದರೂ ನಾನು ಜೀವ ಲೆಕ್ಕಿಸದೆ ನಾನು ಕಣಿವೆ ರಾಜ್ಯಕ್ಕೆ ಭೇಟಿ ನೀಡಿದೆ. ದೇಶದ ಹಿತಾಸಕ್ತಿ ನನಗೆ ಮುಖ್ಯವಾಗಿತ್ತು. ಆ ರಾಜ್ಯದಲ್ಲಿ ಚುನಾವಣೆ ನಡೆಸಿದೆ. 12 ವರ್ಷಗಳ ನಂತರ ಅಲ್ಲಿ ಚುನಾವಣೆ ನಡೆದು ಸರಕಾರ ಅಧಿಕಾರಕ್ಕೆ ಬಂತು. ಲಂಡನ್ ನಲ್ಲಿ ಇದ್ದ ಫಾರೂಖ್ ಅಬ್ದುಲ್ಲಾ ಅವರು ಬಂದು ಚುನಾವಣೆ ಗೆದ್ದು ಸಿಎಂ ಆದರು. ಇದು ನಾನು ಮಾಡಿದ ತಪ್ಪೇ? ಎಂದು ಮಾಜಿ ಪ್ರಧಾನಿಗಳು ಪ್ರಶ್ನೆ ಮಾಡಿದರು.
ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಎಷ್ಟು ಮಾಡಿದೆ, ನಾನು ಏನು ಮಾಡಿದೀನಿ ಎಂಬ ಬಗ್ಗೆ ಚರ್ಚೆ ನಡೆಯಲಿ. ಉತ್ತರ ಸಿಗುತ್ತದೆ ಎಂದು ಅವರು ಸವಾಲು ಹಾಕಿದರು.

ನನ್ನ ಆರೋಗ್ಯವನ್ನು ಲೆಕ್ಕ ಮಾಡುವುದಿಲ್ಲ ಎಂದ ಅವರು; ಉತ್ತರ ಕರ್ನಾಟಕದ ಜನತೆಗೆ ಒಳ್ಳೆಯದು ಮಾಡಿದ್ದೇನೆ. ಶಿವಶರಣರ ಕೈಲಿ ಅನ್ನ ಉಂಡಿದ್ದೇನೆ. ಆ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಗದ್ಗದಿತರಾರು ಅವರು.
ಇಬ್ರಾಹಿಂ ಬಗ್ಗೆ ಲಘುವಾಗಿ ಮಾತನಾಡಲ್ಲ:
ಇಬ್ರಾಹಿಂ ಬಗ್ಗೆ ನಾನು ಲಘುವಾಗಿ ಮಾತನಾಡಲಿಲ್ಲ ಎನ್ನುತ್ತಲೇ, ಭದ್ರಾವತಿ ದಿನಗಳನ್ನು ನೆನಪು ಮಾಡಿಕೊಂಡರು ಗೌಡರು. ಒಂದು ಸನ್ಮಾನಕ್ಕೆ ಎಂದು ಅಲ್ಲಿಗೆ ಹೋದೆ, ಅಲ್ಲಿ ನನಗೆ ಸನ್ಮಾನದ ಜತೆ ಇಬ್ರಾಹಿಂ ಅವರು ಸಿಕ್ಕಿದರು, ಕರೆದುಕೊಂಡು ಬಂದು ಯುವ ಜನತಾದಳ ಅಧ್ಯಕ್ಷರನ್ನಾಗಿ ಮಾಡಿದೆ. ಈ ಸಭೆಗೆ ಅವರನ್ನು ಕರೆ ತರಲು ತಿಪ್ಪೇಸ್ವಾಮಿ ಅವರು ಬಹಳ ಪ್ರಯತ್ನಪಟ್ಟರು ಎಂದು ಅವರು ಹೇಳಿದರು.
ಜೀವನ ಪರ್ಯಂತ ಒಳ್ಳೆಯ ಬದುಕಿಗೆ ಗಾರಂಟಿ ಕೊಡುತ್ತೇನೆ ಎಂದು ಹೇಳಿದ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದು ಬಹಳ ನೋವುಂಟು ಮಾಡಿದೆ. ಈ ಸರ್ಕಾರ ಕೊಟ್ಟಿರುವ ಗ್ಯಾರಂಟಿಗಳಿಂದ ಏನು ಆಗುತ್ತದೆ ಎನ್ನುವುದು ನನಗೆ ಗೊತ್ತಿದೆ. ಉತ್ತಮ ಬದುಕಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕುಮಾರಸ್ವಾಮಿ ಪ್ರಾಮಾಣಿಕವಾಗಿ ಕೆಲಸ ಮಾಡಿದರು. ನಾವು ನಿರಾಶೆ ಪಡಬೇಕಿಲ್ಲ. ಒಳ್ಳೆಯ ದಿನಗಳು ಬರುತ್ತವೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು










Discussion about this post