ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಪ್ರತಿವರ್ಷ ಸೂರ್ಯನು ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ. ತನ್ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ. ಆರೋಗ್ಯ ಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣಗಳು ಸಾರಿ ಸಾರಿ ಹೇಳುತ್ತಿವೆ.
ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಇನ್ನು, ‘ಭೂರ್ಭುವಸ್ವಃ’. . . ಎಂಬ ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.
ಎಕ್ಕದೆಲೆಯ ಸ್ನಾನ
ಸೂರ್ಯನ ಕಿರಣಗಳಲ್ಲಿನ ಸತ್ವಗಳನ್ನು ಹೀರಿಕೊಂಡಿರುವ ಅರ್ಕದೆಲೆ ಅಥವಾ ಎಕ್ಕದೆಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲಿರಿಸಿ ಸ್ನಾನ ಮಾಡುವುದು ರಥಸಪ್ತಮಿಯ ವಿಶೇಷತೆಗಳಲ್ಲೊಂದು. ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.
ದೇವರೆಲ್ಲಿದ್ದಾನೆ ಎಂದು ಪ್ರಶ್ನಿಸುವ ಬದಲು ಪ್ರತ್ಯಕ್ಷವಾಗಿ ಕಾಣುವ ದೈವೀ ಸ್ವರೂಪಗಳಾದ, ಯಾವುದೇ ಜಾತಿಭೇದ, ಧರ್ಮದ ಚೌಕಟ್ಟಿಲ್ಲದ ಸೂರ್ಯ, ಚಂದ್ರ, ವೃಕ್ಷ, ಬೆಟ್ಟ, ನದೀನದಗಳ ಆರಾಧನೆಯನ್ನು ನಮ್ಮ ಪೂರ್ವಿಕರು ಆಚರಣೆಗೆ ತಂದಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ಲವೇ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















