ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅತ್ಯಂತ ಭೀಕರವಾಗಿ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಗೆ ಒಳಗಾದ ನಿರ್ಭಯಾಳನ್ನು ಕೊಂದ ಪಾಪಿಗಳಿಗೆ ಇಂದು ಗಲ್ಲು ಶಿಕ್ಷೆ ಜಾರಿಯಾಗಿದೆ. ಆದರೆ, ಇದರ ಬೆನ್ನಲ್ಲೇ ಅತ್ಯಾಚಾರಿಗಳಿಗೆ ಹಾಗೂ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಶೀಘ್ರ ಶಿಕ್ಷೆ ವಿಧಿಸುವಂತೆ ಕಾನೂನು ಬದಲಾಯಿಸಲು ದೇಶದಾದ್ಯಂತ ಒತ್ತಡ ಹೆಚ್ಚಾಗಿದೆ.
2012 ರಲ್ಲಿ ನಿರ್ಭಯಾ ಹತ್ಯೆ ನಡೆದರೆ, ಆಕೆಯನ್ನು ಕೊಂದ ಹಂತಕರಿಗೆ 2020ರಲ್ಲಿ ಅಂದರೆ ಬರೋಬ್ಬರಿ 7 ವರ್ಷದ ನಂತರ ಗಲ್ಲುಶಿಕ್ಷೆ ಜಾರಿಯಾಗಿದೆ. ಅಪರಾಧಿಗಳಿಗೆ ಗಲ್ಲು ಶಿಕ್ಷೆ ಘೋಷಣೆಯಾದ ನಂತರ ಅದರಿಂದ ತಪ್ಪಿಸಿಕೊಳ್ಳಲು ಕೊನೆಯಗಳಿಗೆಯವರೆಗೂ ಸಹ ನಾಲ್ವರು ಹಾಗೂ ಅವರ ಪರ ವಕೀಲರು ಪ್ರಯತ್ನಿಸಿದ್ದಾರೆ ಎಂದರೆ ಎಂತಹ ದುರಂತ.
ಕಾನೂನಿನಲ್ಲಿರುವ ಅವಕಾಶಗಳನ್ನು ದುರುಪಯೋಗ ಮಾಡಿಕೊಂಡು, ಸಾಧ್ಯವಾಷ್ಟರ ಮಟ್ಟಿಗೆ ಶಿಕ್ಷೆ ಜಾರಿಯನ್ನು ಮುಂದೂಡುತ್ತಾ ಬಂದ ಅಪರಾಧಿಗಳು ಒಂದು ರೀತಿಯಲ್ಲಿ ಈ ನೆಲದ ಕಾನೂನಿಗೇ ಸವಾಲು ಹಾಕಿದ್ದರು ಎಂದರೆ ತಪ್ಪಲ್ಲ.
ಅಂತಿಮವಾಗಿ ನಾಲ್ವರನ್ನೂ ಇಂದು ಗಲ್ಲಿಗೇರಿಸಿದ ನಂತರ ದೇಶದಾದ್ಯಂತ ಕಾನೂನು ಬದಲಾವಣೆಗೆ ಒತ್ತಡ ಹೆಚ್ಚಿದೆ.
ಶಿಕ್ಷೆ ಜಾರಿಯಾದ ನಂತರ ಬಹುತೇಕ ಎಲ್ಲ ರಾಷ್ಟ್ರೀಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇದೇ ಆಗ್ರಹ ಕಂಡು ಬರುತ್ತಿದೆ.
ನಿರ್ಭಯಾಗೆ ನ್ಯಾಯ ದೊರಕಿದೆ ನಿಜ. ಆದರೆ, ಇದಕ್ಕೆ ಇಷ್ಟು ವರ್ಷಗಳ ಕಾಲ ಪಡೆಯಿತು ಎಂದರೆ ನಮ್ಮ ಕಾನೂನಿನ ಕುಂಟುತನ ಹಾಗೂ ಇದನ್ನು ದುರುಪಯೋಗಪಡಿಸಿಕೊಳ್ಳುವ ಅವಕಾಶವಾದಿಗಳ ಕುರಿತಾಗಿ ಗಂಭೀರವಾಗಿ ಚಿಂತಿಸಬೇಕಿದೆ.
ಸಾಬೀತಾಗಿರುವ ಒಂದು ಭೀಕರ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸಲು ಇಷ್ಟು ವರ್ಷ ಹಿಡಿಯುತ್ತದೆ ಎಂದರೆ ಕಾನೂನಿನಲ್ಲಿರುವ ಲೋಪದೋಷಗಳು ಎಷ್ಟಿವೆ ಹಾಗೂ ಯಾವ ರೀತಿಯಲ್ಲಿ ಇದರ ದುರುಪಯೋಗವಾಗುತ್ತಿದೆ ಎಂಬುದು ಸಾಬೀತಾಗುತ್ತದೆ.
ಇಂತಹ ಲೋಪದೋಷಗಳನ್ನು ಸರಿಪಡಿಸಲು ಇದು ಸಕಾಲವಾಗಿದ್ದು, ನಿರ್ಭಯಾ ಪ್ರಕರಣವನ್ನೇ ಉದಾಹರಣೆಯಾಗಿಟ್ಟುಕೊಂಡು ಕಾನೂನು ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕಿದ್ದು, ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸಹ ಕ್ರಮ ಕೈಗೊಳ್ಳಬೇಕಿದೆ.
ಅತ್ಯಾಚಾರ, ಭಯೋತ್ಪಾದನೆ ಹಾಗೂ ದೇಶದ್ರೋಹದ ಪ್ರಕರಣಳನ್ನು ನಮ್ಮ ದೇಶದಲ್ಲಿ ತೀವ್ರಗತಿಯಲ್ಲಿ ವಿಚಾರಣೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಅಗತ್ಯವಿದೆ. ಇದಕ್ಕಾಗಿ ಫಾಸ್ಟ್ ಟ್ರಾಕ್ ಕೋರ್ಟ್‌ಗಳ ಸ್ಥಾಪನೆಯಾಗಬೇಕಿದ್ದು, ಇದಕ್ಕಾಗಿಯೇ ಪ್ರತ್ಯೇಕ ಕಾನೂನು ಜಾರಿಯಾಗಬೇಕಾದ ಅಗತ್ಯವಿದೆ.
ಪ್ರಮುಖವಾಗಿ, ಅಪರಾಧ ಸಾಬೀತಾಗಿರುವ ಅಪರಾಧಿಗಳು ಪ್ರಮುಖವಾಗಿ ಗಲ್ಲು ಶಿಕ್ಷೆಗೆ ಜಾರಿಯಾದವರು ಅದರಿಂದ ತಪ್ಪಿಸಿಕೊಳ್ಳಲು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾನೂನಿಗೆ ಶೀಘ್ರ ತಿದ್ದುಪಡಿ ತರಬೇಕಿದೆ. ಈ ಮೂಲಕ ದೌರ್ಜನ್ಯಕ್ಕೆ ಒಳಗಾದವರಿಗೆ ಶೀಘ್ರ ನ್ಯಾಯ ದೊರಕಿಸಿಕೊಡುವ ಕಾನೂನಾತ್ಮಕ ಅವಕಾಶಗಳನ್ನು ಸೃಜಿಸಬೇಕಿದೆ.
ಅತ್ಯಾಚಾರಿಗಳು ಮಾತ್ರವಲ್ಲ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸುವ ದುರುಳರು ಕನಸಿನಲ್ಲೂ ಚಡ್ಡಿ ಒದ್ದೆ ಮಾಡಿಕೊಳ್ಳುವಂತೆ ಕಠಿಣ ಹಾಗೂ ಶೀಘ್ರ ಇತ್ಯರ್ಥದ ಕಾನೂನು ಜಾರಿ ಅಥವಾ ತಿದ್ದುಪಡಿ ಆಗಬೇಕಾದ ತುರ್ತು ಅಗ್ಯವಿದೆ.
ನೆನಪಿಡಿ: ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗುವುದು ಒಂದು ಕ್ಷಣ ತಡವಾದರೆ ಇದರಿಂದ ಪರೋಕ್ಷವಾಗಿ ಸಮಾಜದಲ್ಲಿ ಇನ್ನೊಬ್ಬ ಅತ್ಯಾಚಾರಿ ಕ್ರಿಮಿ ಉದಯಿಸುತ್ತದೆ.
Get in Touch With Us info@kalpa.news Whatsapp: 9481252093
Discussion about this post