ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಉಳಿವಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇವೆ. ಅಲ್ಲದೆ ಕಾರ್ಖಾನೆಯ ಆಡಳಿತ ಮಂಡಳಿಯು ಮನೆಗಳಲ್ಲಿ ವಾಸಿವಾಗಿರುವ ನಿವಾಸಿಗಳನ್ನು ತೆರವು ಗೊಳಿಸುವ ಸುತ್ತೋಲೆಗೆ ಆತಂಕ ಪಡುವ ಅಗತ್ಯವಿಲ್ಲವೆಂದು ಮಾಜಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶನಿವಾರ ಜನ್ನಾಪುರದ ಜಯಶ್ರೀ ಕಲ್ಯಾಣ ಮಂಟಪದಲ್ಲಿ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರವು ಹಮ್ಮಿಕೊಂಡಿದ್ದ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಶ್ರೇಷ್ಟ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಾಯ ಜೋಗ ಜಲಪಾತವನ್ನು ಕಂಡು ಜಲಾಶಯ ನಿರ್ಮಿಸಿ ವಿದ್ಯುತ್ ಉತ್ಪಾದನೆ ಮಾಡಿ ಸಮಾಜಕ್ಕೆ ಬೆಳಕು ಚೆಲ್ಲಿದಂತೆ ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆಗಳಂತಹ ಸಾವಿರಾರು ಉದ್ದಿಮೆಗಳು, ಡ್ಯಾಂ ಮುಂತಾದ ಅಭಿವೃದ್ದಿ ಕಾರ್ಯಗಳನ್ನು ಸಾಧಿಸಿ ದೇಶಕ್ಕೆ ಆಸ್ತಿಯಾಗಿದ್ದರು.
ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಿ ಬೆಳೆಸಲು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹಾಗು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅನೇಕ ಕೇಂದ್ರ ಮಂತ್ರಿಗಳನ್ನು ಕಾರ್ಖಾನೆಗೆ ಆಹ್ವಾನಿಸಿ ಕಾರ್ಖಾನೆ ಉಳಿವಿಗೆ ಸಾಕಷ್ಟು ಶ್ರಮ ವಹಿಸಲಾಗಿದೆ. ರಾಜಕೀಯ ಗೊಂದಲಗಳಿಂದಾಗಿ ಯಶಸ್ಸು ಕಂಡಿಲ್ಲ. ಇದೇ ಸಂದರ್ಭದಲ್ಲಿ ಮತ್ತೀಗ ಕಾರ್ಖಾನೆ ಮನೆಗಳನ್ನು ತೆರವುಗೊಳಿಸುವ ಸುತ್ತೋಲೆಯಿಂದ ನಿವೃತ್ತ ಕಾರ್ಮಿಕರು ಆತಂಕಕ್ಕೊಳಗಾಗಿದ್ದಾರೆ. ಕಾರ್ಖಾನೆ ಉಳಿಸುವುದು ಮತ್ತು ಮನೆಗಳನ್ನು ತೆರವುಗೊಳಿಸದಂತೆ ರಕ್ಷಿಸುವುದು ರಾಜಕೀಯ ಮುಖಂಡರ ಜವಾಬ್ದಾರಿಯಾಗಿದೆ. ಈ ಸಂಬಂಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಾಸಕ ಬಿ.ಕೆ.ಸಂಗಮೇಶ್ವರ್, ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಮತ್ತು ನಾವೆಲ್ಲರು ಒಗ್ಗೂಡಿ ಪಕ್ಷಾತೀತವಾಗಿ ಕೇಂದ್ರಕ್ಕೆ ನಿಯೋಗ ತೆರಳಿ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸಲಾಗುವುದು. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.
ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಮಾತನಾಡಿ ತಮ್ಮ ಅಧಿಕಾರದ ಅವಧಿಯಲ್ಲಿ ಸುಳ್ಳಿನ ಸರದಾರನಾಗದೆ ಕಾರ್ಖಾನೆಯ ಅದಿರುಗಣಿ ವಿಚಾರದಲ್ಲಿ ಸಾಕಷ್ಟು ಶ್ರಮಿಸಿದ್ದೇನೆ. ಸೈಲ್ ಆಡಳಿತವು ಮನೆಗಳನ್ನು ಖಾಲಿ ಮಾಡಿಸುವ ಕೆಲಸಕ್ಕೆ ಮುಂದಾಗಲು ಬಿಡುವುದಿಲ್ಲ. ಅನಧಿಕೃತವಾಗಿ ಕಾರ್ಖಾನೆ ಮನೆಗಳಲ್ಲಿ ಹೊಕ್ಕಿರುವವರನ್ನು ಖಾಲಿ ಮಾಡಿಸಲು ಮುಂದಾಗದ ಆಡಳಿತ ವರ್ಗವು ಕಾಲ ಕಾಲಕ್ಕೆ ಕಾನೂನು ಬದ್ದವಾಗಿ ಬಾಡಿಗೆ ಮತ್ತಿತರ ತೆರಿಗೆ ಪಾವತಿಸುವವರನ್ನು ಖಾಲಿ ಮಾಡಿಸಲು ಹೇಗೆ ತಾನೇ ಸಾದ್ಯ ಎಂದರು.
ಕೇಂದ್ರದ ಬಿಜೆಪಿ ಸರಕಾರದಿಂದ ಕಾರ್ಖಾನೆಗೆ ಬೇಕಾದ ಸೌಲತ್ತುಗಳನ್ನು ಕೊಡಿಸಿಕೊಡಲು ಹಿರಿಯ ರಾಜಕಾರಣಿ ಬಿಎಸ್‌ವೈ ಮುಂದಾಗಲಿ. ವಿಐಎಸ್‌ಎಲ್ ನಗರಾಡಳಿತವನ್ನು ನಗರಸಭೆಗೆ ಹಸ್ತಾರಿಸುವಂತೆ ಅನೇಕ ಭಾರಿ ಮನವಿ ಮಾಡಲಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿ ನಗರಸಭೆಗೆ ನೀಡದೆ, ಅತ್ತ ನಗರಡಾಳಿತವು ಸಹ ಅಭಿವೃದ್ದಿಗೆ ಹಾಗು ಸ್ವಚ್ಚತೆಗೆ ಮುಂದಾಗದೆ ಇರುವುದು ವಿಷಾಧನೀಯ. ನಗರಸಭೆಯು ಬೀದಿ ದೀಪ ನಿರ್ವಹಣೆ, ರಸ್ತೆಗಳ ನಿರ್ಮಾಣ, ಒಳಚರಂಡಿ ವ್ಯವಸ್ಥೆ ಮುಂತಾದ ಮೂಲಭೂತ ಸೌಕರ್ಯಗಳನ್ನು ನೀಡುತ್ತಿದ್ದರು ಅಡ್ಡಿಪಡಿಸುವ ಪ್ರಯತ್ನಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಮುಂದಾಗಿದೆ ಎಂದು ವಿಷಾಧಿಸಿದರು.
ಕಲ್ಯಾಣ ಕೇಂದ್ರ ಅಧ್ಯಕ್ಷ ಜೆ.ಎಸ್.ನಾಗಭೂಷಣ್ ನಿವೃತ್ತ ಕಾರ್ಮಿಕ ಮುಖಂಡರಾದ ಹಾ.ರಾಮಪ್ಪ ಗಜೇಂದ್ರ ನರಸಿಂಹಯ್ಯ ಎ.ಪಿ.ಕುಮಾರ್ ಸೇರಿದಂತೆ ಸಾವಿರಾರು ಕಾರ್ಮಿಕರು ಭಾಗವಹಿಸಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post