ಕಲ್ಪ ಮೀಡಿಯಾ ಹೌಸ್
ಸಾಗರ: ಕೊರೋನ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಪ್ರಸ್ತುತ ಸ್ವಲ್ಪಮಟ್ಟಿಗೆ ನಿಯಮಾವಳಿಗಳನ್ನು ಸಡಿಲಗೊಳಿಸಲಾಗಿದ್ದು ಭಾನುವಾರ ಜೋಗ ಜಲಪಾತದ ವೀಕ್ಷಣೆಗೆ ಜನಸಾಗರವೇ ಹರಿದು ಬಂದಿತ್ತು.
ಇಡೀ ದಿನ ಮೋಡ ಕವಿದ ವಾತಾವರಣವಿದ್ದರೂ, ಮಳೆ ಬರದೇ ಇದ್ದುದು ಪ್ರವಾಸಿಗರಿಗೆ ಜಲಪಾತದ ಸೌಂದರ್ಯವನ್ನು ಸವಿಯಲು ಸಾಥ್ ನೀಡಿದಂತಿತ್ತು.

ಕೋವಿಡ್ ಮೂರನೇ ಅಲೆಯ ಭೀತಿಯ ನಡುವೆಯೂ ಸಾರ್ವಜನಿಕರೂ ಯಾವುದೇ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೇ ಜಲಪಾತ ವೀಕ್ಷಣೆ ಹಾಗೂ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ನಿರತರಾಗಿದ್ದುದು ಸಾಮಾನ್ಯವಾಗಿತ್ತು.
ಖಾಸಗಿ ಕಾರು, ಪ್ರವಾಸಿ ವಾಹನಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜೋಗದತ್ತ ಪ್ರಯಾಣಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ (206)ಯಲ್ಲಿ ಕಾರುಗಳ ರ್‍ಯಾಲಿ ನಡೆಯುತ್ತಿದೆಯೇನೋ… ಎನ್ನುವಂತಿತ್ತು.

ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರಿಂದ ಮೈಸೂರು ಬಂಗ್ಲೆ ಭಾಗದಲ್ಲಿ ಪ್ರವಾಸಿ ವಾಹನಗಳು ತುಂಬಿ ತುಳುಕಿದವು. ಅರ್ಧದಿಂದ ಮುಕ್ಕಾಲು ಘಂಟೆ ಕ್ಯೂನಲ್ಲಿ ನಿಂತ ನಂತರವೇ ಜಲಪಾತ ದರ್ಶನಕ್ಕೆ ಪ್ರವೇಶ ಸಿಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ನಿಯಂತ್ರಣ ವ್ಯವಸ್ಥೆ ನಿರ್ವಹಿಸಲಾಗದ ಪೊಲೀಸರು ಕೂಡ ಹರ ಸಾಹಸಪಟ್ಟರು. ಇದೇ ವೇಳೆ ನೀಪ್ಲಿ ಫಾಲ್ಸ್ ಹಾಗೂ ತಾಲೂಕಿನ ಧಾರ್ಮಿಕ ಕ್ಷೇತ್ರಗಳಾದ ವರದಪುರ, ಸಿಗಂದೂರಿನಲ್ಲಿಯೂ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದಿದ್ದು ಕಂಡುಬಂದಿತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















